ADVERTISEMENT

ಕೊಡಗು | ಕುಶಾಲನಗರದಲ್ಲಿ ಪ್ರವಾಹ, ಭಗಂಡೇಶ್ವರನಿಗೆ ಜಲದಿಗ್ಬಂಧನ

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ 

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 3:35 IST
Last Updated 7 ಆಗಸ್ಟ್ 2020, 3:35 IST
ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಜನರು ಸಾಕುಪ್ರಾಣಿಗಳೊಂದಿಗೆ ಮನೆ ಖಾಲಿ ಮಾಡುತ್ತಿದ್ದಾರೆ.
ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಜನರು ಸಾಕುಪ್ರಾಣಿಗಳೊಂದಿಗೆ ಮನೆ ಖಾಲಿ ಮಾಡುತ್ತಿದ್ದಾರೆ.   
""
""

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ.ಕಾವೇರಿ, ಲಕ್ಷ್ಮಣತೀರ್ಥ ನದಿಗಳೂ ಸೇರಿದಂತೆ ಹಳ್ಳ– ಕೊಳ್ಳಗಳು ಮತ್ತಷ್ಟು ಅಪಾಯಕಾರಿಯಾಗಿ ಹರಿಯುತ್ತಿವೆ. ಭಾಗಮಂಡಲದಲ್ಲಿ ನೀರಿನಮಟ್ಟ ಏರಿಕೆ ಆಗುತ್ತಲೇ ಇದ್ದು, ಭಗಂಡೇಶ್ವರನಿಗೆ ಜಲದಿಗ್ಬಂಧನವಾಗಿದೆ. ದೇಗುಲದ ಒಳಕ್ಕೂ ಪ್ರವಾಹದ ನೀರು ನುಗ್ಗಿದೆ.

ಕುಶಾಲನಗರದ ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆಗಳು ಪ್ರವಾಹದಲ್ಲಿ ಮುಳುಗಿವೆ. ಎರಡು ಬಡಾವಣೆ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಸತತ ಮೂರನೇ ವರ್ಷವೂ ಈ ಬಡಾವಣೆಯ ನಿವಾಸಿಗಳಿಗೆ ಮಳೆ, ಸಂಕಷ್ಟ ತಂದಿದೆ. ಈ ಭಾಗದಲ್ಲಿ ಕಾವೇರಿ ನೀರು ಏರಿಕೆ ಆಗುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಕಾರ್ಯಾಚರಣೆ ಕಷ್ಟ:ಮಡಿಕೇರಿ ತಾಲ್ಲೂಕಿನ ತಲಕಾವೇರಿಯ ಬ್ರಹ್ಮಗಿರಿ ಕುಸಿತದಿಂದ ಮಣ್ಣಿನ ಅಡಿ ಐವರು ಸಿಲುಕಿದ್ದು ಶುಕ್ರವಾರವೂ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ.

ADVERTISEMENT

ತಲಕಾವೇರಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಪದೇ ಪದೇ ಮಣ್ಣು ಕುಸಿಯುತ್ತಿದೆ. ಗುಡ್ಡ ಜಾರಿದ ಸ್ಥಳದಲ್ಲಿ ಜಲ ಉಕ್ಕುತ್ತಿದೆ. ಗುರುವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕಾಲ್ನಡಿಗೆಯಲ್ಲಿ ಸ್ಥಳಕ್ಕೆ ತೆರಳಿದ್ದ ಎನ್‌ಡಿಆರ್‌ಎಫ್‌, ಸ್ಥಳೀಯ ‍ಪೊಲೀಸರಿಗೆ ಕಾರ್ಯಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಗುಡ್ಡ ಜಾರಿ ಸ್ಥಳಕ್ಕೂ ತೆರಳಲೂ ಸಾಧ್ಯವಾಗಿರಲಿಲ್ಲ. ಶುಕ್ರವಾರವೂ ಅದೇ ಪರಿಸ್ಥಿತಿಯಿದೆ. ಮತ್ತೆ ರಕ್ಷಣಾ ಕಾರ್ಯಾಚರಣೆ ತಂಡವನ್ನು ಅಲ್ಲಿಗೆ ಕಳುಹಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ (80), ಅವರ ಪತ್ನಿ ಶಾಂತಾ (70), ಅವರ ಅಣ್ಣ ಆನಂದತೀರ್ಥ ಸ್ವಾಮಿ (86) ಹಾಗೂ ಸಹಾಯಕ ಅರ್ಚಕರಾದ ರವಿ ಕಿರಣ್‌ ಹಾಗೂ ಪವನ್‌ ಮಣ್ಣಿನ ಅಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.

ತಲಕಾವೇರಿ ಸಮೀಪದ ಚೇರಂಗಾಲದ ಬಳಿಯೂ ಗುರುವಾರ ರಾತ್ರಿ ಮತ್ತೊಂದು ಸ್ಥಳದಲ್ಲಿ ಭೂಕುಸಿತವಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

ಭಾಗಮಂಡಲದ ದೇಗುಲದ ಒಳಕ್ಕೆ ನೀರು ನುಗ್ಗಿರುವ ದೃಶ್ಯ
ತಲಕಾವೇರಿ ಸಮೀಪ ಭೂಕುಸಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.