ADVERTISEMENT

ಅರಣ್ಯ ದಾಖಲೀಕರಣಕ್ಕೆ ಶೀಘ್ರ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 23:53 IST
Last Updated 24 ಅಕ್ಟೋಬರ್ 2024, 23:53 IST
<div class="paragraphs"><p>ಅರಣ್ಯ</p></div>

ಅರಣ್ಯ

   

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಅಧಿಸೂಚಿತ, ದಾಖಲಿತ ಅರಣ್ಯ ಮತ್ತು ಪರಿಭಾವಿತ ಅರಣ್ಯ ಭೂಮಿಗಳ ಸಮಗ್ರ
ದಾಖಲೀಕರಣಕ್ಕೆ 15 ದಿನಗಳಲ್ಲಿ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ADVERTISEMENT

ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಜಂಟಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಎರಡೂ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ವನ ಸಂರಕ್ಷಣೆ ಮತ್ತು ವನ ಸಂವರ್ಧನೆ ಕಾಯ್ದೆ 1980ರ ನಿಯಮ 16ರಡಿ ಹೊಸದಾಗಿ ತಜ್ಞರ
ಸಮಿತಿ ರಚಿಸಲು ಅವಕಾಶವಿದೆ. ಈ ಸಮಿತಿ ರಾಜ್ಯದ ಅಧಿಸೂಚಿತ ಮತ್ತು ದಾಖಲಿತ ಅರಣ್ಯದ ಸಮಗ್ರ ದಾಖಲೀಕರಣದ ಜೊತೆಗೆ ಪ್ರಸ್ತುತ ಪರಿಭಾವಿತ ಅರಣ್ಯ ಪ್ರದೇಶದ ನ್ಯೂನತೆಗಳನ್ನು ಪರಿಶೀಲಿಸಿ, ಸರಿಪಡಿಸಿ ಆರು ತಿಂಗಳ ಒಳಗೆ ಕ್ರೋಡೀಕೃತ ವರದಿ ಸಲ್ಲಿಸಲಿದೆ.

‘ಈ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಪ್ರಮಾಣಪತ್ರದಲ್ಲಿ ತಿಳಿಸಿರುವ 3.30 ಲಕ್ಷ ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಸರ್ಕಾರಿ ಕಚೇರಿ, ಶಾಲೆ,
ಪಟ್ಟಾಭೂಮಿ ಇತ್ಯಾದಿ ಇದ್ದರೆ ಅದಕ್ಕೆ ಪರ್ಯಾಯವಾಗಿ ಮರಗಿಡಗಳಿಂದ ಸಮೃದ್ಧವಾದ ಇತರ ಪ್ರದೇಶವನ್ನು ಗುರುತಿಸುವ ಕಾರ್ಯವನ್ನು ಮಾಡಬೇಕು’ ಎಂದು ಈಶ್ವರ ಖಂಡ್ರೆ ಸಲಹೆ ನೀಡಿದರು.

ಕೃಷ್ಣ ಬೈರೇಗೌಡ ಮಾತನಾಡಿ, ‘ರಾಜ್ಯದ 20 ಜಿಲ್ಲೆಗಳಲ್ಲಿ ಇಲಾಖೆಯಿಂದ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಒಂದೆರೆಡು ಜಿಲ್ಲೆ ಆಯ್ಕೆ ಮಾಡಿಕೊಂಡು ಜಂಟಿ ಸರ್ವೆ ನಡೆಸಿದರೆ ಸಮಸ್ಯೆಗಳು, ಗೊಂದಲಗಳ ಬಗ್ಗೆ ತಿಳಿಯುತ್ತದೆ. ಇದು ತಜ್ಞ ಸಮಿತಿ ವರದಿ ಸಲ್ಲಿಸಲು ನೆರವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.