ನಾಪೋಕ್ಲು: ಸಮೀಪದ ಚೆಯ್ಯಂಡಾಣೆಯ ಕೋಕೇರಿ ಗ್ರಾಮದ ಚಂಡೀರ ಈರಪ್ಪ ಅವರ ಗದ್ದೆಗೆ ರಾತ್ರಿ ವೇಳೆ ನಾಲ್ಕು ಕಾಡಾನೆ ನುಗ್ಗಿ ಭತ್ತದ ಪೈರು ತುಳಿದು ನಾಶ ಮಾಡಿವೆ.
‘ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ಕೃಷಿ ನಂಬಿಕೊಂಡು ಬದಕಲು ಸಾಧ್ಯವಿಲ್ಲ’ ಎಂದು ಚಂಡೀರ ಈರಪ್ಪ ಅಳಲು ತೋಡಿಕೊಂಡರು.
‘ಕಾಡಾನೆಗಳ ನಿರಂತರ ದಾಳಿಯಿಂದ ಕಾಫಿ, ಬಾಳೆ, ಅಡಿಕೆ ತೋಟಗಳು ನಾಶವಾಗುತ್ತಿವೆ. ಭತ್ತದ ಗದ್ದೆಗಳಲ್ಲಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರೂ ಕೆಲಸ ಮಾಡಲು ಒಪ್ಪುತ್ತಿಲ್ಲ. ಹತ್ತಾರು ಸಮಸ್ಯೆಗಳಿಂದ ಗ್ರಾಮಸ್ಥರು ನಲುಗುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಕಾಡಾನೆಗಳ ನಿರಂತರ ಉಪದ್ರವದಿಂದ ಮರಂದೋಡ, ಕೋಕೇರಿ, ನರಿಯಂದಡ, ಚೇಲಾವರ ಗ್ರಾಮಸ್ಥರು ಚೆಯ್ಯಂಡಾಣೆಯಲ್ಲಿ ರಸ್ತೆ ತಡೆ ಈಚೆಗೆ ನಡೆಸಿದರು. ನೆಲಜಿ, ಪೇರೂರು ಗ್ರಾಮ ವ್ಯಾಪ್ತಿಗಳಲ್ಲೂ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಬೇಸತ್ತಿದ್ದಾರೆ. ಹತ್ತಾರು ಕಾರಣಗಳಿಂದ ಭತ್ತದ ಕೃಷಿಯಿಂದ ವಿಮುಖರಾಗುತ್ತಿರುವ ರೈತರಿಗೆ ಕಾಡಾನೆಗಳ ಉಪಟಳ ನುಂಗಲಾರದ ತುತ್ತಾಗಿದೆ. ಇದೀಗ ನಾಟಿ ಮಾಡುವ ಅವಧಿಯಾಗಿದ್ದು ಪೈರುಗಳು ನಾಶವಾದರೆ ರೈತರು ಭತ್ತದ ಕೃಷಿಯನ್ನೇ ಕೈಬಿಡುವ ಪರಿಸ್ಥಿತಿ ಎದುರಾಗಲಿದೆ’ ಎಂದು ಚಂಡೀರ ಈರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.