ಮಡಿಕೇರಿ: ಕಾಫಿ ಮಂಡಳಿಯು ‘ಮಣ್ಣಿನಿಂದ ಮಾರುಕಟ್ಟೆಯವರೆಗೆ’ ಎಂಬ ಮುಂದಿನ 10 ವರ್ಷಕ್ಕೆ ಕಾರ್ಯಯೋಜನೆಯೊಂದನ್ನು ಹಾಕಿಕೊಂಡಿದ್ದು, ಕಾಫಿ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಿದೆ ಎಂದು ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ತಿಳಿಸಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ಮಡಿಕೇರಿ ನಗರ ದಸರಾ ಸಮಿತಿ, ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಸಮಿತಿಯಿಂದ ನಡೆದ ಕಾಫಿ ದಸರೆಯಲ್ಲಿ ಅವರು ಮಾತನಾಡಿದರು.
‘ಕಾಫಿ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಬಹುದು. ಆದರೆ, ನಮ್ಮಿಂದ ಕಾಫಿ ಬೆಳೆಯುವುದನ್ನು ಕಲಿತ ವಿಯಟ್ನಾಂ ಇಂದು ನಮಗಿಂತ ಹೆಚ್ಚು ಇಳುವರಿ ತೆಗೆಯುತ್ತಿದೆ. ಮಾತ್ರವಲ್ಲ, ನಮ್ಮಲ್ಲೂ ಧರ್ಮರಾಜ್ ಅವರಂತಹ ಪ್ರಗತಿಪರ ಬೆಳೆಗಾರರು ಅಧಿಕ ಇಳುವರಿ ಪಡೆಯುತ್ತಿದ್ದಾರೆ’ ಎಂದು ಹೇಳಿದರು.
‘ಕಾಫಿ ಎಂದರೆ ಇಂದು ಸವಾಲುಗಳೂ ಇವೆ, ಅವಕಾಶಗಳೂ ಇವೆ. ನಾವು ಸವಾಲುಗಳನ್ನು ಎದುರಿಸಿ, ಅವಕಾಶಗಳನ್ನು ಬಳಸಿಕೊಳ್ಳುವುದರ ಕಡೆಗೆ ಗಮನ ಕೊಡಬೇಕು’ ಎಂದರು.
‘ಕಾಫಿ ಸಂಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ರಾಜ್ಯಸರ್ಕಾರ ಸುಮ್ಮನಿರಬಾರದು. ಕಾಫಿ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾದ ವನ್ಯಜೀವಿ ಮಾನವ ಸಂಘರ್ಷ ತಡೆಗೆ ಮುಂದಾಗಬೇಕು’ ಎಂದರು.
‘ಮಂಡಳಿಯು ಈಗಾಗಲೇ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ವರ್ಮಾ ಸಮಿತಿಯನ್ನು ವನ್ಯಜೀವಿ– ಮಾನವ ಸಂಘರ್ಷ ತಡೆಗೆ ಅಧ್ಯಯನ ಮಾಡಲು ನೇಮಕ ಮಾಡಿದೆ. ಈ ಸಮಿತಿಯ ವರದಿಯನ್ನು ರಾಜ್ಯಸರ್ಕಾರ ಅನುಷ್ಠಾನಗೊಳಿಸಬೇಕು’ ಎಂದು ಮನವಿ ಮಾಡಿದರು.
‘ಈ ಬಾರಿ ಕೇಂದ್ರ ಸರ್ಕಾರವು ಮಂಡಳಿಗೆ ₹ 307 ಕೋಟಿ ಅನುದಾನ ನೀಡಿದೆ. ಇದರಲ್ಲಿ ₹ 19 ಕೋಟಿಯನ್ನು ಕೊಡಗು ಜಿಲ್ಲೆಗೆ ಮೀಸಲಿರಿಸಲಾಗಿದೆ’ ಎಂದರು.
‘ನಮ್ಮ ದೇಶದಲ್ಲಿ ವರ್ಷಕ್ಕೆ ಸರಾಸರಿ 30 ಕಪ್ ಕಾಫಿ ಕುಡಿಯುತ್ತಿದ್ದಾರೆ. ಇದನ್ನು 60 ಕಪ್‌ಗೆ ಹೆಚ್ಚಿಸಬೇಕಿದೆ. ಇದರಿಂದ ಆಂತರಿಕ ಬೇಡಿಕೆ ಹೆಚ್ಚಾಗಿ, ಉತ್ತಮ ಬೆಲೆಯೂ ಸಿಗುತ್ತಿದೆ’ ಎಂದು ಹೇಳಿದರು.
‘ನಮ್ಮ ದೇಶದ್ದು ಉತ್ಕೃಷ್ಠವಾದ ಕಾಫಿ. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲೇಬಾರದು. ಅದರಲ್ಲೂ ‘ಕೂರ್ಗ್ ಕಾಫಿ’ಗೆ ತನ್ನದೇಯಾದ ಅಸ್ಮಿತೆ ಇದೆ. ಈ ಅಸ್ಮಿತೆಯನ್ನು ಬಿಡಬಾರದು’ ಎಂದು ಕಿವಿಮಾತು ಹೇಳಿದರು.
‘ಅಧಿಕ ಮಳೆಯಿಂದ ಆಗಿರುವ ನಷ್ಟ ಕುರಿತು ಕಂದಾಯ ಇಲಾಖೆಯೊಂದಿಗೆ ಸಮೀಕ್ಷೆ ನಡೆಸಲಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ ಎನ್‌ಡಿಆರ್‌ಎಫ್ ಮಾರ್ಗದರ್ಶಿ ಸೂತ್ರದನ್ವಯ ಪರಿಹಾರ ಬಿಡುಗಡೆಯಾಗಲಿದೆ’ ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ವಿಧಾನ ಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ, ಮುಖಂಡರಾದ ನಂದಾ ಬೆಳ್ಯಪ್ಪ, ಅನಿತಾ ನಂದ, ಕೆ.ರಾಜೀವ್, ವಿನೋದ್ ಶಿವಪ್ಪ, ಬಸವರಾಜು, ವಿನೋದ್ ಮೂಡಗದ್ದೆ, ನಗರ ದಸರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ದಸರಾ ಸಾಂಸ್ಕೃತಿಕ ಸಮಿತಿ ಸಂಚಾಲಕ ತೆನ್ನೀರ ಮೈನಾ, ಕಾಫಿ ದಸರಾ ಸಂಚಾಲಕ ಎಚ್.ಟಿ.ಅನಿಲ್ ಭಾಗವಹಿಸಿದ್ದರು.
32 ಮಳಿಗೆಗಳಲ್ಲಿ ಹಲವು ಖಾಸಗಿ ಕಂಪನಿಗಳು ವಿವಿಧ ಬಗೆಯ ಕಾಫಿ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕಿರಿಸಿದ್ದವು.
ಕಾಫಿ ದರ ಉತ್ತಮವಾಗಿದ್ದರೂ ಸಹ ಬೆಳೆಗಾರರು ಸಾಲಗಾರರಾಗಿದ್ದಾರೆ. ಆದ್ದರಿಂದ ಕಾಫಿ ಬೆಳೆಗಾರರ ಸಂಕಷ್ಟ ಪರಿಹರಿಸಿ ಅಗತ್ಯ ಸಹಕಾರ ಸಹಾಯಧನ ಕಲ್ಪಿಸಬೇಕುಡಾ.ಮಂತರ್‌ಗೌಡ ಶಾಸಕ
ಅಧಿಕ ಮಳೆಯಿಂದ ಉಂಟಾದ ನಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತದೆ ಎಂಬ ಭರವಸೆ ಇದೆ. ಈ ವರ್ಷ ಹೆಚ್ಚಿನ ಬೆಲೆ ಸಿಗುವುದಿಲ್ಲ ಎಂಬ ಆತಂಕವೂ ಇದೆ. ಕಾಫಿ ಮಂಡಳಿ ಅಧ್ಯಕ್ಷರು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕುಎ.ಎಸ್.ಪೊನ್ನಣ್ಣ ಶಾಸಕ.
ಭತ್ತದ ಪ್ರೋತ್ಸಾಹಕ್ಕಾಗಿ ಕೃಷಿ ಹೊಂಡ; ಚಲುವರಾಯಸ್ವಾಮಿ
‘ಭತ್ತದ ಬೆಳೆ ಕ್ಷೀಣಿಸುತ್ತಿದೆ. ಹಲವೆಡೆ ಸಕಾಲದಲ್ಲಿ ಮಳೆ ಬಾರದೇ ಬಾಡುವಂತಹ ಸ್ಥಿತಿ ಇತ್ತು. ಅದಕ್ಕಾಗಿ ಎಲ್ಲೆಡೆ ಕೃಷಿ ಹೊಂಡ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕೃಷಿ ಇಲಾಖೆ ಖಾತೆ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಕಾಫಿ ದಸರೆ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು ‘ಕೊಡಗು ಜಿಲ್ಲೆಗೆ 250 ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು’ ಎಂದರು. ಯಾವುದಾದರೂ ಒಂದು ಸಂದರ್ಭದಲ್ಲಿ ಭಾಗಮಂಡಲದಲ್ಲೂ ಕಾವೇರಿ ಆರತಿ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
Cut-off box - ಕಾಫಿ ಪ್ರಯೋಜನ ಪ್ರವಾಸಿಗರಿಗೆ ತಿಳಿಸಿ; ದಿನೇಶ್ ಗುಂಡೂರಾವ್
ಆರೋಗ್ಯ ಖಾತೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ‘ಕಾಫಿ ಸೇವನೆಯಿಂದ ಉಂಟಾಗುವ ಪ್ರಯೋಜನಗಳನ್ನು ಕುರಿತು ಪ್ರವಾಸಿಗರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು. ‘ಬದಲಾವಣೆಗೆ ಹೊಂದಿಕೊಂಡು ಹೋಗುವಾಗ ನಮ್ಮ ಮೂಲ ಸಂಸ್ಕೃತಿ ಬಿಡಬಾರದು. ವಾಣಿಜ್ಯಕರಣ ನಿಲ್ಲಿಸಲು ಆಗುವುದಿಲ್ಲ. ಒಂದು ವೇಳೆ ನಿಲ್ಲಿಸಿದರೆ ನಾವು ಹಿಂದೆ ಬೀಳುತ್ತೇವೆ. ಆದರೆ ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು. ಕೊಡಗಿನಲ್ಲಿ ಸಮತೋಲನ ಅಭಿವೃದ್ದಿ ಆಗಬೇಕು’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.