ಮಡಿಕೇರಿ: ಕೊನೆಗೂ 2018ರ ನೆರೆ ಸಂತ್ರಸ್ತರ ಕನಸು ಈಡೇರುವ ಸಮಯ ಬಂದಿದೆ.
ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ಎರಡು ವರ್ಷಗಳ ನಂತರ ಸಂತ್ರಸ್ತರಿಗೆ ಸೂರು ಸಿಗುತ್ತಿದ್ದು 463 ಮನೆಗಳ ಹಸ್ತಾಂತರಕ್ಕೆ ಕ್ಷಣಗಣನೆ ಆರಂಭವಾಗಿದೆ.
ಮಹಾಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಸ್ವಂತ ಸೂರು ಕಳೆದುಕೊಂಡು ಬಾಡಿಗೆ ಮನೆ, ಸಂಬಂಧಿಕರ ಮನೆ ಹಾಗೂ ಕಾಫಿ ತೋಟದ ಲೈನ್‌ಮನೆಗಳಲ್ಲಿ ವಾಸವಿದ್ದ ಸಂತ್ರಸ್ತರು ಗುರುವಾರ ಸ್ವಂತ ಸೂರು ಸೇರಿಕೊಳ್ಳಲಿದ್ದಾರೆ.
ಮೊದಲ ಹಂತದಲ್ಲಿ ಕಳೆದ ವರ್ಷ ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿಯಲ್ಲಿ ನಿರ್ಮಿಸಿದ್ದ 35 ಮನೆಗಳನ್ನು ಹಸ್ತಾಂತರ ಮಾಡಲಾಗಿತ್ತು. ಆದರೆ, ಜಂಬೂರು ಹಾಗೂ ಮದೆಯಲ್ಲಿ ಮನೆ ನಿರ್ಮಾಣ ಕಾಮಗಾರಿ ವಿಳಂಬವಾಗಿತ್ತು.
‘ತಡವಾದರೂ ಚಿಂತೆಯಿಲ್ಲ. ಗುಣಮಟ್ಟದ ಕಾಮಗಾರಿಯನ್ನೇ ನಡೆಸಿ ಮನೆ ಹಸ್ತಾಂತರ ಮಾಡುತ್ತೇವೆ’ ಎಂದು ಸಚಿವರು ಈ ಹಿಂದೆ ಭರವಸೆ ನೀಡಿದ್ದರು. ಇದೀಗ ಮಡಿಕೇರಿ ತಾಲ್ಲೂಕಿನ ಮದೆಯಲ್ಲಿ 80, ಜಂಬೂರು ಗ್ರಾಮದಲ್ಲಿ 383 ಮನೆಗಳನ್ನು ಹಸ್ತಾಂತರಕ್ಕೆ ಸಿದ್ಧವಾಗಿದ್ದು ಗುರುವಾರ ಸಚಿವರು ಫಲಾನುಭವಿಗಳಿಗೆ ಕೀ ಹಸ್ತಾಂತರ ಮಾಡಲಿದ್ದಾರೆ. ಅದಕ್ಕೆ ಸಿದ್ಧತೆಯೂ ನಡೆದಿದೆ.
‘ಮೇ ಅಂತ್ಯಕ್ಕೆ ಮನೆ ಹಸ್ತಾಂತರಿಸಿ ವಾಸಕ್ಕೆ ಅನುಕೂಲ ಕಲ್ಪಿಸಬೇಕು’ ಎಂದು ಸಂತ್ರಸ್ತರು ಈ ಹಿಂದೆ ಆಗ್ರಹಿಸಿದ್ದರು. ಅದರಂತೆಯೇ ಮೇ 28ಕ್ಕೆ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆದರೆ, ಲಾಕ್‌ಡೌನ್‌ನಿಂದ ಜೂನ್ 4ಕ್ಕೆ (ಗುರುವಾರ) ನಿಗದಿ ಮಾಡಲಾಗಿದೆ.
2018ರ ಆಗಸ್ಟ್‌ನಲ್ಲಿ ಕೊಡಗು ಜಿಲ್ಲೆಯಲ್ಲಿ ಒಂದು ವಾರ ಭಾರೀ ಮಳೆ ಸುರಿದು ದೊಡ್ಡಮಟ್ಟದ ಅನಾಹುತ ಉಂಟಾಗಿತ್ತು. ಜಿಲ್ಲೆಯ ಹಲವು ಕಡೆ ಭೂಕುಸಿತ ಸಂಭವಿಸಿ ಸಾವು– ನೋವಿಗೂ ಕಾರಣವಾಗಿತ್ತು. ಸರ್ಕಾರ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಸಂಘ ಸಂಸ್ಥೆಗಳಿಂದ ಕೊಡಗಿಗೆ ನೆರವು ಹರಿದು ಬಂದಿತ್ತು. ಅದಾದ ಮೇಲೆ ‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, 2018ರ ಡಿಸೆಂಬರ್‌ನಲ್ಲಿ ಜಂಬೂರು ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಸರ್ಕಾರವು ಪ್ರತಿ ಮನೆಗೆ ₹ 9.85 ಲಕ್ಷ ವೆಚ್ಚ ಮಾಡಿ ಮನೆ ನಿರ್ಮಿಸಿದೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಎರಡು ಮಲಗುವ ಕೋಣೆಯುಳ್ಳ ಮನೆ ನಿರ್ಮಿಸಲಾಗಿದ್ದು ಅಗತ್ಯವುಳ್ಳವರು ಹೆಚ್ಚುವರಿ ಕೊಠಡಿ ನಿರ್ಮಿಸಿಕೊಳ್ಳಲು ಅವಕಾಶವಿದೆ. ಮೂಲಸೌಕರ್ಯವನ್ನೂ ಕಲ್ಪಿಸಲಾಗಿದೆ.
ವಿಶಿಷ್ಟ ಅನುಭವ: ಕೊಡಗು ಬೆಟ್ಟಗುಡ್ಡಗಳಿಂದ ಆವೃತ್ತವಾದ ಪ್ರದೇಶ. ಮನೆಗಳೂ ಚದುರಿದಂತಿವೆ. ಆದರೆ, ಈಗ ಸಂತ್ರಸ್ತರಿಗೆ ಗುಂಪು ಮನೆಗಳನ್ನು ನಿರ್ಮಿಸಿದ್ದು ವಾಸ ಮಾಡುವವರಿಗೆ ಮಲೆನಾಡಿನಲ್ಲಿ ವಿಶಿಷ್ಟ ಅನುಭವ ಉಂಟಾಗಲಿದೆ.
ಮುಖ್ಯಮಂತ್ರಿ ಬರಲ್ಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎನ್ನುವ ಕಾರಣಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಆದರೆ, ಲಾಕ್‌ಡೌನ್ ಮುಂದುವರಿದಿರುವ ಕಾರಣಕ್ಕೆ ಮುಖ್ಯಮಂತ್ರಿ ಗುರುವಾರವೂ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಮಾತ್ರ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಜಂಬೂರಿನ ಬೆಳಿಗ್ಗೆ 11ಕ್ಕೆ, ಮದೆಯಲ್ಲಿ ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮ ನಿಗದಿಯಾಗಿದೆ. ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಜಂಬೂರು– ಕಾರ್ಯಪ್ಪ ಹೆಸರು: ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಲಾಗಿದ್ದು ಈ ಸ್ಥಳಕ್ಕೆ, ‘ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಬಡಾವಣೆ’ಯೆಂದು ನಾಮಕರಣ ಮಾಡಲಾಗಿದೆ.
ಬಿಳಿಗಿರಿ, ಕರ್ಣಂಗೇರಿ, ಕೆ.ನಿಡುಗಣಿ, ಮದೆಯಲ್ಲೂ ಮನೆ ನಿರ್ಮಿಸಲಾಗಿದೆ. ಜಂಬೂರಿನಲ್ಲಿ ಅತೀ ಹೆಚ್ಚು ಮನೆ ಕಟ್ಟಲಾಗಿದೆ. ಈ ಸ್ಥಳವು ಯಾವುದೋ ಒಂದು ನಗರದಂತೆ ಕಾಣಿಸುತ್ತಿದೆ. ಇದೇ ಸ್ಥಳದಲ್ಲಿಯೇ ಇನ್ಫೊಸಿಸ್ ಪ್ರತಿಷ್ಠಾನವೂ 200 ಮನೆ ನಿರ್ಮಿಸುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.