ADVERTISEMENT

Gandhi Jayanti: ಕೊಡಗಿನಲ್ಲಿ ಗಾಂಧೀಜಿ ಹೆಜ್ಜೆ ಗುರುತುಗಳು...

ಕೆ.ಎಸ್.ಗಿರೀಶ್
Published 2 ಅಕ್ಟೋಬರ್ 2024, 5:32 IST
Last Updated 2 ಅಕ್ಟೋಬರ್ 2024, 5:32 IST
ಮಡಿಕೇರಿಯಲ್ಲಿ ಈಚೆಗಷ್ಟೇ ಉದ್ಘಾಟನೆಗೊಂಡ ಗಾಂಧಿ ಭವನದಲ್ಲಿರುವ ಗಾಂಧಿ ಪ್ರತಿಮೆ
ಮಡಿಕೇರಿಯಲ್ಲಿ ಈಚೆಗಷ್ಟೇ ಉದ್ಘಾಟನೆಗೊಂಡ ಗಾಂಧಿ ಭವನದಲ್ಲಿರುವ ಗಾಂಧಿ ಪ್ರತಿಮೆ   

ಮಡಿಕೇರಿ: ಕೊಡಗಿನಲ್ಲಿ ಗಾಂಧೀಜಿ ಹೆಜ್ಜೆ ಗುರುತುಗಳು; ಇನ್ನಷ್ಟು ಉಳಿಸಬೇಕಿದೆ ಅವರ ನೆನಪು

‘ಇದ ನೋಡಿ ನಾನು ನೆನೆವೆನಿಂದು

ಇಂಥ ನೆಳಲೇನು ಗಾಂಧಿಯೆಂದು!

ADVERTISEMENT

ಹರಿದತ್ತ ಹರಿಯ ಚಿತ್ತ

ಈ ಧೀರ ನಡೆವನತ್ತ’

ಇದು ಪು.ತಿ.ನರಸಿಂಹಾಚಾರ್ ಅವರು ತಮ್ಮ ‘ಗಣೇಶ ದರ್ಶನ’ ಕವನ ಸಂಕಲನದಲ್ಲಿ ಬರೆದಿರುವ ‘ನೆರಳು’ ಕವನದ ಕೊನೆಯ ಸಾಲುಗಳು. ಪ್ರಾತಿನಿಧಿಕ ಕವನವಾಗಿರುವ ಇದರಲ್ಲಿ ಗಾಂಧೀಜಿ ಅವರು ರಾಷ್ಟ್ರದ ಉದ್ದಗಲಕ್ಕೂ ಗರುಡನಂತೆ ಸಂಚರಿಸಿದ್ದರು ಎಂಬುದು ಸೇರಿದಂತೆ ನಾನಾ ಅರ್ಥಗಳನ್ನು ಪುತಿನ ಹೊಳೆಯಿಸಿದ್ದಾರೆ. ಅದರಂತೆ ಗಾಂಧೀಜಿ ಅವರು ಕೊಡಗಿಗೂ ಬಂದಿದ್ದರು, ಇಲ್ಲೂ ಅವರು ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದರು. ಆದರೆ, ಇಂದು ಸರ್ಕಾರದ ನಿರ್ಲಕ್ಷ್ಯದಿಂದ ಗಾಂಧಿ ಅವರು ಭೇಟಿ ನೀಡಿದ ಸ್ಥಳಗಳೂ ಸ್ಮೃತಿ ಪಟಲದಿಂದ ಮರೆಯಾಗುತ್ತಿವೆ.

1934ರಲ್ಲಿ ಮಹಾತ್ಮ ಗಾಂಧೀಜಿ ಪೊನ್ನಂಪೇಟೆಗೆ ಬಂದಿದ್ದರು. ಕೇರಳದಿಂದ ಬಂದ ಅವರು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದಲ್ಲಿ ತಂಗಿದ್ದರು. ನಂತರ ಅವರು ಕೊಡಗಿನ ಜನತೆಯನ್ನು ಉದ್ದೇಶಿಸಿ ಅಲ್ಲಿನ ಗದ್ದೆ ಬಯಲಿನಲ್ಲಿ ಭಾಷಣ ಮಾಡಿದರು. ಅಲ್ಲಿಂದ ಗೋಣಿಕೊಪ್ಪಲು ಮಾರ್ಗವಾಗಿ ಬಂದ ಗಾಂಧೀಜಿ 1 ಕಿ.ಮೀ ದೂರದಲ್ಲಿದ್ದ ಕೈಕೇರಿಗೆ ಭೇಟಿ ನೀಡಿದರು. ಅಲ್ಲಿ ಪರಿಶಿಷ್ಟಜಾತಿಯ ವೃದ್ಧೆಯೊಬ್ಬರನ್ನು ಭೇಟಿ ಮಾಡಿ ಅವರ ಕಷ್ಟ ವಿಚಾರಿಸಿದರು. ಇಲ್ಲಿ ಎಲ್ಲೂ ಗಾಂಧೀಜಿ ಅವರು ಬಂದಿದ್ದ ಕುರುಹುಗಳು ಇಂದು ಇಲ್ಲದಾಗಿದೆ.

ಇಷ್ಟು ಮಾತ್ರವಲ್ಲ ಗಾಂಧೀಜಿ ಅವರು ಗುಂಡುಗುಟ್ಟಿ ಜಿ.ಎಂ.ಮಂಜನಾಥಯ್ಯ ಅವರ ಮನೆಗೂ ಭೇಟಿ ನೀಡಿದ್ದರು. ಕನ್ನಡ ಪ್ರಮುಖ ಸಣ್ಣಕಥೆಗಾರ್ತಿ ಕೊಡಗಿನ ಗೌರಮ್ಮ ದೇಶಕ್ಕಾಗಿ ತಾವು ತೊಟ್ಟಿದ್ದ ಆಭರಣಗಳನ್ನು ಗಾಂಧೀಜಿ ಮಡಿಲಿಗೆ ಹಾಕಿದ್ದರು. ಬಳಿಕ ಗಾಂಧೀಜಿ ಪಕ್ಕದ ಬೇಳೂರಿನ ಗುರಪ್ಪ ಅವರ ಮನೆಯಲ್ಲಿ ಒಂದು ರಾತ್ರಿ ತಂಗಿದ್ದರು. ಗುರುಪ್ಪನವರ ಮನೆಯಲ್ಲಿ ಗಾಂಧೀಜಿಯವರು ಬಳಸಿದ್ದ ಮೈಸೂರ್ ಸ್ಯಾಂಡಲ್ ಸೋಪು ಮತ್ತು ಟವೆಲ್ ಅನ್ನು ಬಹಳ ವರ್ಷಗಳವರೆಗೆ ಸಂರಕ್ಷಿಸಲಾಗಿತ್ತು. ಇದೀಗ ಅದನ್ನು ಮೈಸೂರು ಮಾನಸ ಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ.

ಇನ್ನು ಗಾಂಧೀಜಿ ಅವರು ಚಿತಾಭಸ್ಮ ಇರುವ ವಿರಳಾತಿ ವಿರಳ ಜಿಲ್ಲೆಗಳ ಪೈಕಿ ಕೊಡಗೂ ಒಂದು. ಇಲ್ಲಿನ ಖಜಾನೆಯಲ್ಲಿ ಅವರ ಚಿತಾಭಸ್ಮ ಭದ್ರವಾಗಿದೆ. ಇವರ ಚಿತಾಭಸ್ಮ ಇರಿಸಲು ರಾಜಘಾಟ್ ಮಾದರಿಯ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದೆ. ಗಾಂಧಿ ಸಂದು ಇಷ್ಟು ವರ್ಷಗಳಾದರೂ ಸ್ಮಾರಕವೊಂದು ನಿರ್ಮಾಣ ಹಂತದಲ್ಲಿದೆ.

ಗಾಂಧೀಜಿ ಅವರ ಹೆಸರಿನಲ್ಲಿರುವ ಗಾಂಧಿ ಭವನ ಸದ್ಯ ನಗರದಲ್ಲಿ ಸುಸಜ್ಜಿತವಾಗಿದೆ. ನಗರದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಕಡಿಮೆ ವೆಚ್ಚದ ಸುಸಜ್ಜಿತ ಭವನಗಳ ಕೊರತೆ ಇತ್ತು. ಈ ಕೊರತೆಯನ್ನು ಗಾಂಧಿ ಭವನ ದೂರ ಮಾಡಿದೆ. ಅನೇಕ ಕಾರ್ಯಕ್ರಮಗಳು ಈಚೆಗೆ ಇಲ್ಲಿ ನಡೆಯುತ್ತಿದೆ.

ಈ ಭವನದಲ್ಲಿರುವ ಗಾಂಧಿ ಪ್ರತಿಮೆಗಳು, ಅಪರೂಪದ ಗಾಂಧೀಜಿ ಅವರು ಛಾಯಾಚಿತ್ರಗಳು ಅವರ ನೆನಪನ್ನು ಚಿರಸ್ಥಾಯಿಯಾಗಿಸಿವೆ.

ಮಡಿಕೇರಿಯಲ್ಲಿ ಈಚೆಗಷ್ಟೇ ಉದ್ಘಾಟನೆಗೊಂಡ ಗಾಂಧಿ ಭವನದಲ್ಲಿರುವ ಗಾಂಧಿ ಪ್ರತಿಮೆ

ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ

ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ ಪದವಿ ಪೂರ್ವ ಹಾಗೂ ಪದವಿ ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಪ್ರತ್ಯೇಕವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಪ್ರೌಢಶಾಲಾ ವಿಭಾಗ: ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಯ 10ನೇ ತರಗತಿಯ ಕೆ.ಎಂ.ಚೈತನ್ಯ(ಪ್ರಥಮ) ಕುಶಾಲನಗರ ಫಾತಿಮಾ ಕಾನ್ವೆಂಟ್‌ನ 10ನೇ ತರಗತಿಯ ಕೆ.ಭಾರ್ಗವಿ (ದ್ವಿತೀಯ) ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ಕೆ.ವಿ.ಕಲ್ಪನಾ (ತೃತೀಯ) ಪದವಿಪೂರ್ವ ವಿಭಾಗ: ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಎಂ.ಎಸ್.ಸಹನಾ (ಪ್ರಥಮ) ಸೋಮವಾರಪೇಟೆ ಸಂತ ಜೋಸೆಫ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿಯ ಕೆ.ಆರ್.ನೀತಾ (ದ್ವಿತೀಯ) ಗೋಣಿಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ಡಿ.ವೈಷ್ಣವಿ ತಮ್ಮನ್ಕರ್ (ತೃತೀಯ) ಪದವಿ ಸ್ನಾತಕೋತ್ತರ ವಿಭಾಗ: ವಿರಾಜಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದ್ವಿತೀಯ ಬಿ.ಎ. ಕೀರ್ತನಾ (ಪ್ರಥಮ) ಕೊಡ್ಲಿಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಥಮ ಬಿಸಿಎ ಜುಲೈಕಾ ನಾಫಿಯಾ (ದ್ವಿತೀಯ) ಹಾಗೂ ವಿರಾಜಪೇಟೆ ಕಾವೇರಿ ಕಾಲೇಜಿನ ದ್ವಿತೀಯ ಬಿಬಿಎ ಕೆ.ಎಸ್.ಸುಷ್ಮಿತಾ (ತೃತೀಯ) ಜಿಲ್ಲಾ ಮಟ್ಟದಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ₹ 3 ಸಾವಿರ ₹ 2 ಸಾವಿರ ಹಾಗೂ ₹ 1 ಸಾವಿರ ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರವನ್ನು ಅ. 2 ರಂದು ನಗರದ ಗಾಂಧಿ ಭವನದಲ್ಲಿ ನಡೆಯುವ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಇಂದು ಗಾಂಧಿ ಭವನದಲ್ಲಿ ಕಾರ್ಯಕ್ರಮ

ಮಡಿಕೇರಿ: ಮಹಾತ್ಮ ಗಾಂಧೀಜಿ ಅವರ 155ನೇ ಜನ್ಮ ವರ್ಷಾಚರಣೆಯು ಅ. 2ರಂದು ಬೆಳಿಗ್ಗೆ 10.30ಕ್ಕೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಪದವಿ ಪೂರ್ವ ಶಿಕ್ಷಣ ಕಾಲೇಜು ಶಿಕ್ಷಣ ಇಲಾಖೆ ಸರ್ವೋದಯ ಸಮಿತಿ ಕನ್ನಡ ಸಾಹಿತ್ಯ ಪರಿಷತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜಾನಪದ ಪರಿಷತ್ತು ಇವರ ಸಹಕಾರದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಶಾಸಕರಾದ ಡಾ.ಮಂತರ್ ಗೌಡ ಎ.ಎಸ್.ಪೊನ್ನಣ್ಣ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಸರ್ವೋದಯ ಸಮಿತಿ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಜಿಲ್ಲಾಧಿಕಾರಿ ವೆಂಕಟ್ ರಾಜಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.