ವಿರಾಜಪೇಟೆ: ಪಟ್ಟಣದ ದೇವಾಲಯಗಳು ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಶನಿವಾರ ಶ್ರದ್ಧಾಭಕಿ ಹಾಗೂ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಲಾಯಿತು.
ಪಟ್ಟಣದ ಗಡಿಯಾರ ಕಂಬದ ಬಳಿಯ ಗಣಪತಿ ದೇವಾಲಯದಲ್ಲಿ ಮೊದಲಿಗೆ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಪಟ್ಟಣ ವ್ಯಾಪ್ತಿಯಲ್ಲಿ ಗೌರಿ, ಗಣೇಶೋತ್ಸವ ಸಮಿತಿಗಳು ದೇವಾಲಯ, ಸಮುದಾಯ ಭವನಗಳಲ್ಲಿ ಗಣೇಶಮೂರ್ತಿಯನ್ನು ಧಾರ್ಮಿಕ ವಿಧಿವಿಧಾನಗಳಂತೆ ಪ್ರತಿಷ್ಠಾಪಿಸಿದವು.
ಪಟ್ಟಣದ ವ್ಯಾಪ್ತಿಯ ಗಡಿಯಾರ ಕಂಬದ ಬಳಿಯ ಗಣಪತಿ ದೇವಾಲಯ, ಜೈನರ ಬೀದಿಯ ಬಸವೇಶ್ವರ ದೇವಾಲಯ, ಅರಸು ನಗರದ ವಿಘ್ನೇಶ್ವರ ಸೇವಾ ಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ಗಾಂಧಿನಗರದ ಗಣಪತಿ ಸೇವಾ ಸಮಿತಿ, ದಖ್ಖನಿ ಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ತೆಲುಗರ ಬೀದಿಯಲ್ಲಿನ ಅಂಗಾಳ ಪರಮೇಶ್ವರಿ ದೇವಾಲಯ, ಪಂಜರುಪೇಟೆಯ ಮಹಾಗಣಪತಿ ಸೇವಾ ಸಮಿತಿ, ಸುಂಕದಕಟ್ಟೆಯ ಸರ್ವ ಸಿದ್ಧಿ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ಉತ್ಸವ ಸಮಿತಿ, ನೆಹರು ನಗರದ ನೇತಾಜಿ ಉತ್ಸವ ಸಮಿತಿ, ಚಿಕ್ಕಪೇಟೆಯ ಜಲದರ್ಶಿನಿ ಗಣೇಶೊತ್ಸವ ಸಮಿತಿ, ಹರಿಕೇರಿಯ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಕೆ.ಬೊಯಿಕೇರಿಯ ವಿಘ್ನೇಶ್ವರ ಸೇವಾ ಸಮಿತಿ, ಮೀನುಪೇಟೆಯ ವಿಶ್ವವಿನಾಯಕ ಸೇವಾ ಸಮಿತಿ, ಕುಕ್ಲೂರು ಕುಂದ ಗಣಪತಿ ಸೇವಾ ಸಮಿತಿ, ಪಂಜರುಪೇಟೆಯ ವಿನಾಯಕ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲಾಂಜನೇಯ ದೇವಾಲಯದಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಉತ್ಸವದ ಅಂಗವಾಗಿ ಹಲವು ಸಮಿತಿಗಳ ವತಿಯಿಂದ ಶನಿವಾರ ಮಧ್ಯಾಹ್ನ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಪಟ್ಟಣದಲ್ಲಿ ಉಳಿದ 10 ದಿನವೂ ರಾತ್ರಿ ಮಹಾಪೂಜೆ ಬಳಿಕ ಹಲವು ಉತ್ಸವ ಸಮಿತಿಗಳ ಆಶ್ರಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪಟ್ಟಣದ ಪ್ರಮುಖ 22 ಸಮಿತಿಗಳು ಸೆ.17 ರಂದು ಸಂಜೆ ಶೋಭಾಯಾತ್ರೆ ಮೆರವಣಿಗೆಯಲ್ಲಿ ಪಾಲ್ಗೊಂಡು ಮರುದಿನ ಮುಂಜಾನೆ ಪಟ್ಟಣದ ಗೌರಿಕೆರೆಯಲ್ಲಿ ಉತ್ಸವ ಮೂರ್ತಿಗಳ ವಿಸರ್ಜನಾ ಕಾರ್ಯವನ್ನು ನೇರವೇರಿಸಲಿವೆ. ಉಳಿದ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಿರುವ ಉತ್ಸವ ಮೂರ್ತಿಗಳನ್ನು 3ನೇ ದಿನ ವಿಸರ್ಜಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.