ಮಡಿಕೇರಿ: ‘ಇಲ್ಲಿನ ಜನರಲ್ ತಿಮ್ಮಯ್ಯ ಸ್ಮಾರಕ ಭವನವನ್ನು ‘ಜೈಸಲ್ಮೇರ್ ನಲ್ಲಿರುವ ರಕ್ಷಣಾ ಸಂಗ್ರಹಾಲಯ’ದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು’ ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಮೇಜರ್ (ನಿವೃತ್ತ) ಬಿದ್ದಂಡ ನಂಜಪ್ಪ ಮನವಿ ಮಾಡಿದರು.
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ನಡೆದ ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 117ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಜನರಲ್ ತಿಮ್ಮಯ್ಯ ಅವರ ಗೌರವಾರ್ಥ ಸೈಪ್ರಸ್ ದೇಶವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಈಚೆಗೆ ಕೊಲ್ಕೊತ್ತಾದಲ್ಲೂ ಸಹ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ’ ಎಂದು ಅವರು ಹೇಳಿದರು.
‘ಅಮರ ಸೇನಾನಿ ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್ ‘ದೇವರ ಮನೆ’ ಇದ್ದಂತೆ, ದೇವಸ್ಥಾನವೆಂದು ಭಾವಿಸುತ್ತೇವೆ. ಅಲ್ಲಿ ಅವರ ಇತಿಹಾಸ ಮಾತ್ರವಲ್ಲ, ಭಾರತೀಯ ಸೇನೆಯ ಇತಿಹಾಸವನ್ನು ತಿಮ್ಮಯ್ಯ ಅವರ ಮೂಲಕ ತೆರೆದಿಡಲಾಗಿದೆ. ಸನ್ನಿಸೈಡ್‍ನ ಪ್ರತಿ ಕೋಣೆಯೂ ಸೈನಿಕನ ಕಥೆ ಹೇಳುವಂತಿದೆ’ ಎಂದರು.
ವಿದ್ಯಾರ್ಥಿನಿ ಶ್ರೀಶಾ ಮಾತನಾಡಿ, ‘ಸ್ವಾತಂತ್ರ್ಯ ಭಾರತದ ಸೇನಾ ದಂಡನಾಯಕರಾಗಿ ಸೈನಿಕರ ನೆಚ್ಚಿನ ಸೇನಾನಿಯಾಗಿದ್ದ ಜನರಲ್ ಕೆ.ಎಸ್.ತಿಮ್ಮಯ್ಯ ಅವರು 1906ರ ಮಾರ್ಚ್ 31ರಂದು ಕೊಡಂದೇರ ಕುಟುಂಬದ ತಿಮ್ಮಯ್ಯ ಮತ್ತು ಸೀತಮ್ಮ ದಂಪತಿಗೆ ಜನಿಸಿದರು. ಜನರಲ್ ತಿಮ್ಮಯ್ಯ ಅವರ ಮೂಲ ಹೆಸರು ಸುಬ್ಬಯ್ಯ ಆಗಿದೆ’ ಎಂದರು.
‘ಸೈನಿಕರ ನಾಡು ಎಂಬ ಕೀರ್ತಿ ಹೊಂದಿರುವ ಕೊಡಗಿನ ನೆಲದಲ್ಲಿ ತಿಮ್ಮಯ್ಯ ಮ್ಯೂಸಿಯಂ ರೂಪುಗೊಂಡಿರುವುದು ಭಾರತಕ್ಕೆ ಹೆಮ್ಮೆ. ಮ್ಯೂಸಿಯಂನಲ್ಲಿ ತಿಮ್ಮಯ್ಯ ಸೇನಾ ಜೀವನ ನೋಡಿ, ಭಾರತೀಯ ಸೇನೆಯ ಬಗ್ಗೆ ಹೆಮ್ಮೆಯ ಭಾವನೆಯೊಂದಿಗೆ ಹೊರಬರುತ್ತಿರುವಂತೆಯೇ, ಪ್ರತಿಯೊಬ್ಬ ಸಂದರ್ಶಕನ ಮನದಲ್ಲಿ ವ್ಯಕ್ತಗೊಳ್ಳುವ ಭಾವನೆ ಒಂದೇ. ಭಾರತದ ಹೆಮ್ಮೆಯ ಧೀರ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಅವರಿಗೆ ಗೌರವದ ಸೆಲ್ಯೂಟ್’ ಎಂದು ಶ್ರೀಶಾ ಹೇಳಿದರು.
ಭಾರತೀಯ ಸೇನಾ ದಕ್ಷಿಣ ವಲಯದ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಎ.ಕೆ.ಸಿಂಗ್ ಅವರು ಇತ್ತೀಚೆಗೆ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೌರವ ಪೂರ್ವಕವಾಗಿ ನೀಡಲಾಗಿದ್ದ ‘ಸೇನಾ ಸ್ಮರಣಿಕೆ’ಯನ್ನು ಬಿದ್ದಂಡ ನಂಜಪ್ಪ ಅವರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ಹಸ್ತಾಂತರಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ.ಅನಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಸಿಪಿಐ ಶಿವಶಂಕರ, ಸಬ್‌ಇನ್‌ಸ್ಪೆಕ್ಟರ್ ಶ್ರೀನಿವಾಸ್, ಗೌಡಂಡ ಸುಬೇದಾರ್ ತಿಮ್ಮಯ್ಯ ಹಾಗೂ ಇತರರು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.