ಮಡಿಕೇರಿ: ವಿದ್ಯಾರ್ಥಿ ನಿಲಯಗಳ ಅಡುಗೆ ಕೋಣೆಯಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತ ಅಧಿಕಾರಿ ಅನಿಲ್ ಧಾವನ್ ಸೂಚಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ನಿಲಯ ಪಾಲಕರು, ನಿಲಯ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳಿಗೆ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆಹಾರ ದಾಸ್ತಾನು ಉಗ್ರಾಣದಲ್ಲಿ ಇಲಿ, ಹೆಗ್ಗಣ ಸೇರದಂತೆ ಗಮನ ಹರಿಸಬೇಕು. ವೈಯಕ್ತಿಕ ಪರಿಸರ ಶುಚಿತ್ವ ಕಾಪಾಡುವುದು ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವುದು, ಆಹಾರ ತಯಾರಿಕೆ ವಿಧಾನ, ನೈರ್ಮಲ್ಯಕ್ಕೆ ಆದ್ಯತೆ ನೀಡುವುದು ಹೀಗೆ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ವಿದ್ಯಾರ್ಥಿ ನಿಲಯಗಳಲ್ಲಿ ಕರ್ತವ್ಯ ನಿರ್ವಹಿಸುವವರು ದೈಹಿಕ ಶುಚಿತ್ವ ಮತ್ತು ಆರೋಗ್ಯದ ಕಡೆಗೆ ಗಮ ನಹರಿಸಬೇಕು. ತಯಾರಿಸಿದ ಆಹಾರವನ್ನು ಮುಚ್ಚಿಡುವುದು, ಕ್ರಿಮಿಕೀಟಗಳಿಂದ ಆಹಾರ ಕಲುಷಿತವಾಗದಂತೆ ಗಮನ ಹರಿಸುವುದು. ತಯಾರಿಸಿದ ಆಹಾರವನ್ನು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಬಳಸುವುದು, ಪ್ಯಾಕ್ ಮಾಡಿದ ಆಹಾರ ವಸ್ತುಗಳ ಲೇಬಲ್‍ಗಳಲ್ಲಿ ಗ್ರಾಹಕರಿಗೆ ಅಗತ್ಯವಾಗಿ ನೀಡಲೇಬೇಕಾದ ಮಾಹಿತಿ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಚ್ಚಾ ವಸ್ತುಗಳು ಹಾಗೂ ಸಿದ್ಧಪಡಿಸಿದ ಆಹಾರವನ್ನು ಪ್ರತ್ಯೇಕವಾಗಿ ಶೇಖರಿಸಬೇಕು, ತ್ಯಾಜ್ಯ ವಸ್ತುಗಳನ್ನು ಸೂಕ್ತವಾಗಿ ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕು, ಶುದ್ಧ ಮತ್ತು ಸುರಕ್ಷಿತ ಗುಣಮಟ್ಟದ ಆಹಾರ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ವಿವರಿಸಿದರು.
ಆಹಾರ ವಸ್ತು ತಯಾರಿಸುವವರು ಮತ್ತು ವಿತರಣೆ ಮಾಡುವವರು ಕೈಗಳನ್ನು ಸೋಪು, ಸೋಂಕು ನಿವಾರಣೆ ದ್ರಾವಣದಿಂದ ತೊಳೆಯಬೇಕು, ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಮತ್ತು ತಲೆಗೆ ಕೂದಲುಗಳನ್ನು ಮುಚ್ಚುವಂತಿರುವ ಟೋಪಿ ಮತ್ತು ಕಾಲುಗಳಿಗೆ ಪಾದರಕ್ಷೆ ಧರಿಸುವುದು, ಕೈಗಳ ಉಗುರುಗಳನ್ನು ಮತ್ತು ತಲೆ ಕೂದಲುಗಳನ್ನು ನೀಟಾಗಿ ಕತ್ತರಿಸಬೇಕು ಎಂದು ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಪಿ.ಪಿ.ಕವಿತಾ ಮಾತನಾಡಿ, ‘ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶುಚಿತ್ವದ ಆಹಾರ ನೀಡಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಅವರು ತಿಳಿಸಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ವಿಭಾಗದ ಮಂಜುನಾಥ್, ಹಿಂದುಳಿದ ವರ್ಗಗಳ ಇಲಾಖೆಯ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್, ವ್ಯವಸ್ಥಾಪಕರಾದ ಶಿವಶಂಕರ, ಆರೋಗ್ಯ ಶಿಕ್ಷಣಾಧಿಕಾರಿ ಶ್ರೀನಾಥ್, ನಿಲಯ ಮೇಲ್ವಿಚಾರಕರಾದ ಶ್ರೀಕಾಂತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.