ವಿರಾಜಪೇಟೆ: ಕೊಡಗು ಜಿಲ್ಲೆಯಲ್ಲಿ ಕೋಮುವಾದಿಗಳಿಗೆ ಅವಕಾಶ ನೀಡಬಾರದು. ಜಾತ್ಯತೀತ ಶಕ್ತಿಗಳು ಒಗ್ಗೂಡಿ ಚುನಾವಣೆ ಎದುರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಕರೆ ನೀಡಿದರು.
ಪಟ್ಟಣದ ಸೆರೆನಿಟಿ ಸಭಾಂಗಣದಲ್ಲಿ ಬುಧವಾರ ನಡೆದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅವರು ಜೆಡಿಎಸ್‌ನ ರಾಜ್ಯ ಕಾರ್ಯದರ್ಶಿ ಸಂಕೇತ್ ಪೂವಯ್ಯ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಕಳೆದ 20 ವರ್ಷಗಳಿಂದ ಗೆದ್ದು ಬರುತ್ತಿರುವವರ ಕೊಡುಗೆ ಏನು ಎಂದು ಜನರು ಪ್ರಶ್ನಿಸಬೇಕು. ಅಭಿವೃದ್ಧಿಯಾಗಿಲ್ಲ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ ಎಂದರು.
‘ವಿರಾಜಪೇಟೆ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ವೀಣಾ ಅಚ್ಚಯ್ಯ ಹಾಗೂ ಎ.ಎಸ್.ಪೊನ್ನಣ್ಣ ಅವರು ಅಕ್ಕ– ತಮ್ಮನ ಹಾಗೆ ಇರಬೇಕು. ಯಾರಿಗೇ ಟಿಕೆಟ್ ಸಿಕ್ಕರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಯಾರಿಗೂ ಪಕ್ಷ ಅನ್ಯಾಯ ಮಾಡುವುದಿಲ್ಲ. ಅತಿ ಶೀಘ್ರದಲ್ಲಿ ಟಿಕೆಟ್ ಘೋಷಿಸಲಾಗುವುದು’ ಎಂದು ಹೇಳಿದರು.
ಎಐಸಿಸಿ ಉಸ್ತುವಾರಿ ರೋಸಿ ಜಾನ್ ಮಾತನಾಡಿ, ‘ಯಾವುದೇ ಕಚೇರಿಗೆ ಹೋದರೂ ಹಣ ಕೊಡದೇ ಕೆಲಸ ಆಗುವುದಿಲ್ಲ. ಇಂತಹ
ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಿದೆ. ಜನರು ಈಗ ಬದಲಾವಣೆ ಬಯಸಿದ್ದಾರೆ. ಈ ಬದಲಾವಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಂಡೇ ಹಲವು ಮಂದಿ ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ’ ಎಂದರು.
‘ಪ್ರಸಕ್ತ ವಿಧಾನಸಭಾ ಅಧಿವೇಶನ ಮುಗಿದ ಮೇಲೆ ಬಿಜೆಪಿ ಶಾಸಕರು ಮಾತ್ರವಲ್ಲ ಸಚಿವರೂ ಕಾಂಗ್ರೆಸ್‌ಗೆ ಸೇರುತ್ತಾರೆ. ಅದಕ್ಕಾಗಿ ಅವರು ಕಾಯುತ್ತಿದ್ದಾರೆ’ ಎಂದು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, ‘ಕೇಂದ್ರ ಸರ್ಕಾರ ರಾಜ್ಯದ ಚುನಾವಣೆ ಕುರಿತು ತರಿಸಿಕೊಂಡ ರಹಸ್ಯ ವರದಿಯಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಹಾಗೂ ಕೊಡಗು ಜಿಲ್ಲೆಯ 2 ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂಬ ವರದಿ ಇದೆ. 20 ವರ್ಷಗಳಿಂದ ಕೊಡಗು ಜಿಲ್ಲೆಗೆ ಗ್ರಹಣ ಹಿಡಿದಿದೆ. ಗ್ರಹಣ ಬಿಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಜೀವಿಜಯ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ಕಾರ್ಮೋಡ ಆವರಿಸಿದೆ. ಅದನ್ನು ಹೋಗಲಾಡಿಸಲು ದೇಶವನ್ನು ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದರು’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜಾ ಉತ್ತಪ್ಪ ಮಾತನಾಡಿ, ‘ವಲಯವಾರು 70 ಸಭೆಗಳನ್ನು ನಡೆಸ ಲಾಗಿದೆ. ಹಲವು ಕಡೆ ಬೂತ್‌ಗಳಲ್ಲಿ ಕಾರ್ಯಕರ್ತರು ಹೆಚ್ಚು ಇರುತ್ತಿ ರಲಿಲ್ಲ. ಈ ಬಗೆಹರಿಸಲು 10ರಿಂದ 15 ಸದಸ್ಯರ ಬೂತ್ ಸಮಿತಿ ಯನ್ನು ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಮುಖಂಡರಾದ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಕೆ.ಎಂ.ಇಬ್ರಾಹಿಂ, ಕೆ.ಪಿ.ಚಂದ್ರಕಲಾ, ಮಂಥರ್‌ಗೌಡ, ರಂಜಿ ಪೂಣಚ್ಚ, ಮಾದಂಡ ತಿಮ್ಮಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.