ಮಡಿಕೇರಿ: ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ಡಿ. 29 ಮತ್ತು 30ರಂದು ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ವಿಶ್ವ ಕೊಡವ ಸಮ್ಮೇಳನ ಏರ್ಪಡಿಸಿದೆ.
‘ಒಟ್ಟು 1,016 ಕೊಡವ ಕುಟುಂಬಗಳನ್ನು ಗುರುತಿಸಲಾಗಿದೆ. ಇವರಲ್ಲಿ ಬಹುತೇಕ ಮಂದಿ ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿದ್ದಾರೆ. ಇವರನ್ನೆಲ್ಲ ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನ ಇದಾಗಿದೆ. ಸಮ್ಮೇಳನದಲ್ಲಿ 15ರಿಂದ 20 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ಶಾಂತೆಯಂಡ ನಿರನ್ ನಾಚಪ್ಪ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಡವ ಜನಸಂಖ್ಯೆ ದಿನೇದಿನೇ ಕ್ಷೀಣಿಸುತ್ತಿದೆ. ಕೊಡವರ ಅಳಿವು ಉಳಿವಿನ ಕುರಿತು ಈ ಸಮ್ಮೇಳನದಲ್ಲಿ ಗಂಭೀರವಾದ ಚರ್ಚೆ ನಡೆಸಲಾಗುವುದು ಎಂದರು.
ಕೊಡವ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ, ಬೆಳೆಸುವ ಕುರಿತು, ಯುವ ಪೀಳಿಗೆಯಲ್ಲಿ ಕೊಡವರ ಆಚಾರ ವಿಚಾರದ ಕುರಿತು ಅರಿವು ಮೂಡಿಸುವ ಕುರಿತು, ಕೋವಿಯ ಹಕ್ಕಿನಂತಹ ಕೊಡವರಿಗೆ ಸಂಬಂಧಿಸಿದ ವಿಚಾರಗಳ ಚರ್ಚೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಟ್ರಸ್ಟ್‌ನ ನಿರ್ದೇಶಕ ಬೊಳ್ಳೇರ ಪೃಥ್ವಿ ಪೂಣಚ್ಚ ಮಾತನಾಡಿ, ‘ಕಾರ್ಯಕ್ರಮದಲ್ಲಿ ಕೊಡವರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಐನ್‌ಮನೆ, ಮಂದ್, ಪತ್ತಾಯ, ಕೈಮಡ ಮೊದಲಾದ ಕೊಡವರ ಪ್ರಮುಖ ಅಸ್ಮಿತೆಗಳನ್ನು ಒಳಗೊಂಡ ಮಾದರಿ ಗ್ರಾಮವನ್ನು ರಚಿಸಿ, ಇಂದಿನ ಯುವ ತಲೆಮಾರಿಗೆ ಕೊಡವ ಸಂಸ್ಕೃತಿ ಕುರಿತು ಅರಿವು ಮೂಡಿಸಲಾಗುವುದು’ ಎಂದರು.
ಮತ್ತೊಬ್ಬ ನಿರ್ದೇಶಕ ಪಾಲೆಂಗಡ ಅಮಿತ್ ಭೀಮಯ್ಯ ಮಾತನಾಡಿ, ‘ಪ್ರತೀ ಕುಟುಂಬದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ವೆಬ್‌ಸೈಟ್‌ನಲ್ಲಿ ದಾಖಲೀಕರಣ ಮಾಡುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು.
ಟ್ರಸ್ಟ್‌ನ ನಿರ್ದೇಶಕರಾದ ಅಚ್ಚಂಡೀರ ಕುಶಾಲಪ್ಪ, ಪಟ್ರಪಂಡ ಪಂತ್ ಮೊಣ್ಣಪ್ಪ, ಒಡಿಯಂಡ ನವೀನ್ ತಿಮ್ಮಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.