ADVERTISEMENT

ಸಾಕಾನೆ ಶಿಬಿರದ ಬಳಿ ಪ್ರವಾಸಿ ಕೇಂದ್ರ ಬೇಡ: ಮತ್ತಿಗೋಡು ರೈತ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 5:33 IST
Last Updated 17 ಡಿಸೆಂಬರ್ 2023, 5:33 IST
ಗೋಣಿಕೊಪ್ಪಲು ಬಳಿಯ ತಿತಿಮತಿಯಲ್ಲಿ ನಡೆದ ರೈತ ಸಂಘ ಮತ್ತು ಅರಣ್ಯಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಹರ್ಷಕುಮಾರ್ ನರಗುಂದ ಪಾಲ್ಗೊಂಡಿದ್ದರು
ಗೋಣಿಕೊಪ್ಪಲು ಬಳಿಯ ತಿತಿಮತಿಯಲ್ಲಿ ನಡೆದ ರೈತ ಸಂಘ ಮತ್ತು ಅರಣ್ಯಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಹರ್ಷಕುಮಾರ್ ನರಗುಂದ ಪಾಲ್ಗೊಂಡಿದ್ದರು   

ಗೋಣಿಕೊಪ್ಪಲು: ನಾಗರಹೊಳೆ ವನ್ಯಜೀವಿ ವಿಭಾಗಕ್ಕೆ ಸೇರಿರುವ ಮತ್ತಿಗೋಡು ಸಾಕಾನೆ ಶಿಬಿರದ ಬಳಿ ಅರಣ್ಯ ಇಲಾಖೆ ಪ್ರವಾಸಿ ಕೇಂದ್ರ ತೆರೆಯಬಾರದು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಒತ್ತಾಯಿಸಿದರು.

ಮಾನವ ವನ್ಯಜೀವಿ ಸಂಘರ್ಷ ಕುರಿತು ತಿತಿಮತಿಯಲ್ಲಿ ಶುಕ್ರವಾರ ನಡೆದ ರೈತ ಸಂಘ ಮತ್ತು ಅರಣ್ಯಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತಿತಿಮತಿ, ಆನೆಚೌಕರು ನಡುವಿನ ರಾಷ್ಟ್ರೀಯ ಉದ್ಯಾನದೊಳಗಿನ ಅಂತರರಾಜ್ಯ ಹೆದ್ದಾರಿ ಬದಿಯ ಮತ್ತಿಗೋಡು ಸಾಕಾನೆ ಶಿಬಿರದ ಬಳಿ ಪ್ರವಾಸಿಗರು ಆನೆಗಳನ್ನು ವೀಕ್ಷಿಸಲು ಗೋಪುರ ನಿರ್ಮಿಸಲಾಗುತ್ತಿದೆ. ಅರಣ್ಯದೊಳಗಿನ ಗಿಡಮರಗಳ ನಡುವೆ ಪ್ರವಾಸಿಗರ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿ ವನ್ಯಜೀವಿಗಳಿಗೆ ಮತ್ತು ವಾಹನ ವಾರರಿಗೆ ತೀವ್ರ ಅಡಚಣೆ ಉಂಟಾಗಲಿದೆ ಎಂದು ಹೇಳಿದರು.

ADVERTISEMENT

ಅರಣ್ಯ ಇಲಾಖೆ ಕೇವಲ ಲಾಭದ ದೃಷ್ಟಿಯಿಂದ ಪ್ರವಾಸಿ ಕೇಂದ್ರ ತೆರೆದರೆ ವನ್ಯಜೀವಿಗಳಿಗೆ ತೊಂದರೆಯಾಗಿ ಅವು ಮತ್ತಷ್ಟು ಕಾಫಿ ತೋಟದೆಡೆಗೆ ನುಗ್ಗಲಿವೆ. ಇದರಿಂದ ರೈತರ ಬೆಳೆಗೆ ತೀವ್ರ ನಷ್ಟ ಉಂಟಾಗುವುದಲ್ಲದೆ, ಜೀವ ಹಾನಿಗೂ ಎಡೆ ಮಾಡಿದಂತಾಗುತ್ತದೆ. ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಮಾಡಿದ್ದೇ ಆದರೆ ಜಲ್ಲೆಯ ಸಾರ್ವಜನಿಕರು ಹಾಗೂ ರೈತರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಆನೆಗಳ ಆಹಾರ ಮತ್ತು ನೀರು ಎರಡಕ್ಕೂ ಅಭಾವವಿರುವ ಮತ್ತಿಗೋಡು ಸಾಕಾನೆ ಶಿಬಿರವನ್ನು ನಾಗರಹೊಳೆ ಅರಣ್ಯದ ಮಧ್ಯಭಾಗ ಸ್ಥಳಾಂತರಿಸಬೇಕು. ಜನರ ಓಡಾಟಕ್ಕೆ ತೀವ್ರ ತೊಂದರೆ ಯಾಗಿರುವ ತಿತಿಮತಿ, ಆನೆಚೌಕೂರು, ಅಳ್ಳೂರು ನಡುವಿನ ಅರಣ್ಯದೊಳಗಿನ ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

 ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಹರ್ಷಕುಮಾರ್ ನರಗುಂದ  ಮಾತನಾಡಿ, ಮೇಲಧಿಕಾರಿಗಳ ಆದೇಶದಂತೆ ಕ್ರಮಕೈಗೊಳ್ಳಲಾಗಿದೆ. ಇದೀಗ ಮತ್ತೆ ಈ ವಿಷಯವನ್ನು ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಎಸಿಎಫ್ ದಯಾಂದ್, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಪದಾಧಿಕಾರಿಗಳಾದ ಪುಚ್ಚಿಮಾಡ ಸುಭಾಶ್, ಮಂಜುನಾಥ್, ಚೆಪ್ಪುಡೀರ ಕಾರ್ಯಪ್ಪ, ಪ್ರಮುಖರಾದ ಬೆಳ್ಳಿಯಪ್ಪ, ಚೆಪ್ಪುಡೀರ ರಾಮಕೃಷ್ಣ, ಸಬಿತಾ ಭೀಮಯ್ಯ, ವಕೀಲರಾದ ಹೇಮಚಂದ್ರ, ಪಿ.ಬಿ.ಚಂಗಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.