ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಪಟ್ಟಕೇರಿ ಅಂಬಲ ಒಕ್ಕೂಟದ ವತಿಯಿಂದ ಬೇಗೂರಿನ ಬೆಂಜಂಡ ಪ್ರೇಮ ಶಂಕರು ಅವರ ಗದ್ದೆಯಲ್ಲಿ 8ನೇ ವರ್ಷದ ಬೇಗೂರು ಗ್ರಾಮ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಬೇಗೂರು ಗಾಮಸ್ಥರು ಹಾಗೂ ಚಿಣ್ಣರು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡವ ಜನಾಂಗವು ಈ ಮಣ್ಣಿನ ಮೂಲದಿಂದ ಬೆಳೆದು ಬಂದಿದೆ. ಭೂಮಿಯೇ ನಮ್ಮ ಎಲ್ಲಾ ಸಂಸ್ಕೃತಿ ಮತ್ತು ಬದುಕಿನ ಮೂಲ. ಅದೇ ರೀತಿ ಒಂದು ಜಾನಾಂಗದ ಹೆಗ್ಗುರುತೇ ಆ ಜನಾಂಗದ ಭಾಷೆ. ಭಾಷೆ ಮತ್ತು ಮಣ್ಣಿನ ಮೂಲತನ ಉಳಿದರೆ ಮಾತ್ರ, ಕೊಡವಾಮೆ ಬೆಳೆಯಲಿದೆ. ಕೊಡವರ ಹುಟ್ಟಿನಿಂದ ಸಾವಿನ ವರೆಗೆ, ಪ್ರತೀ ಹಬ್ಬ ಮತ್ತು ಸಂಪ್ರದಾಯ ಆಚರಣೆಗಳು ಭೂಮಿ ಮತ್ತು ಗದ್ದೆಯ ಸುತ್ತಲೇ ನಿಂತಿದೆ. ಪ್ರತಿಯೊಂದು ಆಚರಣೆಗಳೂ ಕೂಡ ಕೃಷಿ ಆಧಾರಿತವಾಗಿಯೇ ಇದೆ ಎಂದರು.
ನಾವು ಎಷ್ಟೇ ಮುಂದುವರಿದು ಏನೇ ಸಾಧನೆಗಳನ್ನು ಮಾಡಿದರೂ ನಮ್ಮ ಭಾಷೆಯನ್ನು ಕಡೆಗಣಿಸಿದರೆ, ಇದ್ದೂ ಇಲ್ಲದಂತೆ. ಹಾಗಾಗಿ ಈ ಕೊಡಗಿನ ಪವಿತ್ರ ಮಣ್ಣು ಮತ್ತು ನಮ್ಮ ತಾಯಿ ಭಾಷೆಯ ಉಳಿವಿಗೆ ನಾವೆಲ್ಲರು ಕಟಿಬದ್ಧರಾಗಿರಬೇಕು ಎಂದರು.
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ಜಡೇಗೌಡ ಅವರು ಮಾತನಾಡಿ, ಕೊಡಗಿನ, ಅದರಲ್ಲೂ ಕೊಡವ ಸಂಪ್ರದಾಯ ಅತ್ಯಂತ ಶ್ರೀಮಂತವಾಗಿದ್ದು, ಇಲ್ಲಿನ ಪ್ರಾಕೃತಿಕ ಹಿನ್ನೆಲೆ ಅತ್ಯಂತ ಸೊಬಗಿನಿಂದ ಕೂಡಿದೆ. ಇಂದಿಗೂ ಆಚರಿಸುತ್ತಾ ಬರುತ್ತಿರುವ ಹಿರಿಯರ ರೂಢಿ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಯೂ ಪಾಲಿಸುವಂತೆ ಪ್ರೇರೇಪಿಸಬೇಕಿದೆ ಎಂದರು.
ಬೇಗೂರಿನ ಗ್ರಾಮಸ್ಥರು ಅನೇಕ ಸವಾಲುಗಳ ನಡುವೆಯೂ ಭತ್ತದ ಕೃಷಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಪಟ್ಟಕೇರಿ ಅಂಬಲ ಒಕ್ಕೂಟದ ಅಧ್ಯಕ್ಷ ಮತ್ರಂಡ ರಾಜ ಮುತ್ತಪ್ಪ ಅವರು, ಒಕ್ಕೂಟವನ್ನು ಪ್ರಾರಂಭಿಸಿದಾಗಿನಿಂದಲೂ ಗ್ರಾಮದಲ್ಲಿ ಕೃಷಿ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭತ್ತ ಬೆಳೆಯಲು ಪ್ರೇರೇಪಿಸಲಾಗುತ್ತಿದೆ. ಲಾಭ ನಷ್ಟದ ಲೆಕ್ಕಾಚಾರ ಹಾಕದೆ, ಗದ್ದೆಯೊಂದಿಗಿರುವ ಭಾವನಾತ್ಮಕ ಸಂಬಂಧದ ಕುರುಹಾಗಿ ಯುವಕರೂ ಕೂಡ ಭತ್ತ ಬೆಳೆಯತ್ತ ಆಕರ್ಷಿತರಾಗಿರುವುದು ಹೆಮ್ಮೆ ತಂದಿದೆ ಎಂದರು.
ಬೇಗೂರು ಗ್ರಾಮದ ಪ್ರಗತಿಪರ ಕೃಷಿಕರಾದ ಕೇಚಿಟ್ಟಿರ ಪೊನ್ನಪ್ಪ ಅವರನ್ನ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಸ್ಪರ್ಧೆ ವಿಜೇತರು: ಕೆಸರು ಗದ್ದೆ ಫುಟ್ಬಾಲ್‌ನಲ್ಲಿ ಮಂಜು ನೇತೃತ್ವದ ತಂಡ ಪ್ರಥಮ, ಪೊನ್ನಪ್ಪ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಹಗ್ಗ ಜಗ್ಗಾಟ ಸ್ಪರ್ಧೆ ಪುರುಷರ ವಿಭಾಗದಲ್ಲಿ ಮಹಾವಿಷ್ಣು ತಂಡ ಪ್ರಥಮ, ಕಾರಿಯಪ್ಪ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆಯಿತು.
ಮಹಿಳೆಯರ ವಿಭಾಗದಲ್ಲಿ ರಮ್ಯ ನೇತೃತ್ವದ ತಂಡ ಪ್ರಥಮ ಸ್ಥಾನ, ರಶ್ಮಿ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕೆಸರುಗದ್ದೆ ಓಟದ ಸ್ಪರ್ಧೆ ಪುರುಷರ ವಿಭಾಗದಲ್ಲಿ ಮಲ್ಲಠಡ ಪೊನ್ನಪ್ಪ ಪ್ರಥಮ, ಮತ್ರಂಡ ಕಿರಣ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಜಶ್ಮಿ ಪ್ರಥಮ, ಕಾವ್ಯ ದ್ವಿತೀಯ ಸ್ಥಾನ ಪಡೆದರು.
ಪೈರು ಕೀಳುವ ಸ್ಪರ್ಧೆಯಲ್ಲಿ ಕೇಚೆಟ್ಟಿರ ಅಂಬಿಕ ಪ್ರಥಮ, ಮತ್ರಂಡ ಪಾರ್ವತಿ ದ್ವಿತೀಯ, ವಿಷದ ಚೆಂಡು ಸ್ಪರ್ಧೆ ಪುರುಷರ ವಿಭಾಗದಲ್ಲಿ ವೀಟು ಉತ್ತಪ್ಪ ಪ್ರಥಮ, ಚಂಗಪ್ಪ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಚೈತ್ರ ಪ್ರಥಮ, ದಿವ್ಯ ದ್ವಿತೀಯ ಸ್ಥಾನ ಪಡೆದು ಕೊಂಡರು. ಮಕ್ಕಳ ಓಟದಲ್ಲಿ ಬಾಲಕರ ವಿಭಾಗದಲ್ಲಿ ಎಂ.ವೈ. ಚಂಗಪ್ಪ ಪ್ರಥಮ, ಬಿ.ಬಿ. ಶಿವಂ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ದಿಶಾ ಬೋಜಮ್ಮ ಪ್ರಥಮ, ಯಶಿಕ ದೇಚಮ್ಮ ದ್ವಿತೀಯ ಸ್ಥಾನ ಪಡೆದುಕೊಂಡರು.
ಗಿರಿಜನರ ಓಟದ ಸ್ಪರ್ಧೆಯಲ್ಲಿ ಮಂಜು ಪ್ರಥಮ, ಅನಿಲ್ ದ್ವಿತೀಯ ಸ್ಥಾನ, ಶಾಲಾ ಬಾಲಕಿಯರ ಓಟದಲ್ಲಿ ನವ್ಯ ಮುತ್ತಮ್ಮ ಪ್ರಥಮ, ಸೀತ ದ್ವಿತೀಯ ಸ್ಥಾನ ಗಳಿಸಿದರು.
ಬೇಗೂರು ಪಟ್ಟಕೇರಿ ಅಂಬಲ ಒಕ್ಕೂಟದ ಸದಸ್ಯರಿಗಾಗಿ ನಡೆದ ವಿಷದ ಚೆಂಡು ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಅರ್ಜುನ್ ಪ್ರಥಮ, ಬಿಪಿನ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ರಮ್ಯ ಪ್ರಥಮ, ಡೀನ ದ್ವಿತೀಯ,
ಒಕ್ಕೂಟದ ಪುರುಷರ ಓಟದಲ್ಲಿ ಮಲ್ಲಠಡ ಉತ್ತಪ್ಪ ಪ್ರಥಮ, ಬೈರಂಡ ಮುತ್ತಣ್ಣ ದ್ವಿತೀಯ ಸ್ಥಾನ ಪಡೆದುಕೊಂಡರು.
ಒಕ್ಕೂಟದ ಬಾಲಕರ ಓಟದಲ್ಲಿ ಲೂಥನ್ ಸೋಮಯ್ಯ ಪ್ರಥಮ, ಬೋಪಣ್ಣ ದ್ವಿತೀಯ, ಒಕ್ಕೂಟದ ಬಾಲಕಿಯರ ಓಟದಲ್ಲಿ ಗಾನವಿ ದೇಚಮ್ಮ ಪ್ರಥಮ, ನಿಹಾರಿಕಾ ದ್ವಿತೀಯ ಸ್ಥಾನ ಪಡೆದುಕೊಂಡರು.
ಬೇಗೂರು ಪಟ್ಟಗೇರಿ ಅಂಬಲ ಒಕ್ಕೂಟದ ಅಧ್ಯಕ್ಷ ಮತ್ರಂಡ ರಾಜ ಮುತ್ತಪ್ಪ, ಕಾರ್ಯದರ್ಶಿ ಚೋಡುಮಾಡ ಅಪ್ಪು ಸುಬ್ಬಯ್ಯ, ಉಪಾಧ್ಯಕ್ಷ ಕೇಚೆಟ್ಟಿರ ಶರಣು ತಮ್ಮಯ್ಯ, ಸಹ ಕಾರ್ಯದರ್ಶಿ ಮತ್ರಠಡ ವೀಟು ಉತ್ತಪ್ಪ, ಸಲಹೆಗಾರರಾದ ಮತ್ರಠಡ ಗಣೇಶ್, ಹಿರಿಯರಾದ ಮತ್ರಂಡ ಬೋಸು, ಸದಸ್ಯರಾದ ಮತ್ರಂಡ ಗಣೇಶ್, ಅರಮಣಮಾಡ ವಿಜಯ್, ಬೆಂಜಾಂಡ ಗಾಂಧಿ, ಮತ್ರಂಡ ಬೋಪಣ್ಣ, ಬೆಂಜಾಂಡ ರಾಮು, ಚೋಡುಮಾಡ ನಿರನ್, ಬೈರಂಡ ಪೂಣಚ್ಚ, ಒಕ್ಕೂಟದ ಸದಸ್ಯರು, ಬೇಗೂರು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.