ಮಡಿಕೇರಿ: ಕೊಡಗು ಜಿಲ್ಲೆಗೆ ಮುಂಗಾರು ಮಾರುತಗಳು ಪ್ರವೇಶಿಸುತ್ತಿದ್ದಂತೆ ಇಡೀ ವಾತಾವರಣವೇ ಒಮ್ಮಿಂದೊಮ್ಮೆಗೆ ಬದಲಾಗಿ ಬಿಡುತ್ತದೆ. ಉಷ್ಣಾಂಶ ಇಳಿಕೆಯಾಗಿ, ವಾತಾವರಣ ತಂಪಾಗಿ ಬಿಡುತ್ತದೆ. ಮಳೆ ಬಿರುಸು ಪಡೆದು ತನ್ನ ನಿಜಸ್ವರೂಪವನ್ನು ಪ್ರದರ್ಶಿಸುತ್ತಿದ್ದಂತೆ ಪ್ರಕೃತಿ ಕಲೆಗಟ್ಟುತ್ತದೆ. ಬತ್ತಿದ್ದ, ಬಾಡಿದ್ದ ಜಲಪಾತಗಳೆಲ್ಲವೂ ಮೈಸೆಟೆದು ನಿಲ್ಲುತ್ತವೆ.
ಬೆಟ್ಟ, ಗುಡ್ಡಗಳಿಂದ ನೀರಿನ ಒರತೆಗಳು ಹರಿಯತೊಡಗುತ್ತವೆ. ಝರಿಗಳೆಲ್ಲವೂ ಹರಿದು ಜಲಪಾತಗಳನ್ನು ತುಂಬಿ, ಭೋರ್ಗರೆಯುವಂತೆ ಮಾಡುತ್ತವೆ.
ಈಗ ಅಂತಹುದೇ ವಾತಾವರಣ ನಿರ್ಮಾಣವಾಗಿದೆ. ಮುಂಗಾರು ಮಳೆ ಕೇವಲ ಒಂದೇ ವಾರದಲ್ಲಿ ಹೇಗೆಲ್ಲ ಮಾಡಿದೆ ಎಂದರೆ ಕೃಷ್ಣರಾಜಸಾಗರ ಅಣೆಕಟ್ಟೆಯನ್ನೇ ತುಂಬಿಸಿಬಿಟ್ಟಿದೆ. ಒಂದು ವಾರಗಳ ಕಾಲ ಧೋ ಎಂದು ಸುರಿದ ಮಳೆ ಹುದುಗಿ ಹೋಗಿದ್ದ ಝರಿಗಳು, ಜಲಪಾತಗಳಿಗೆ ಜೀವಕಳೆಯನ್ನೇ ತಂದಿದೆ.
ಇಂತಹದ್ದೊಂದು ಜೀವಕಳೆ ನಮ್ಮ ಮಡಿಕೇರಿ ನಗರಕ್ಕೆ ನೀರು ಪೂರೈಕೆ ಮಾಡುವ ಕೂಟುಹೊಳೆಗೂ ತಂದಿದೆ. ನಗರದ ಹೊರಭಾಗದಲ್ಲಿರುವ ಈ ಕೂಟುಹೊಳೆ ಈ ಬಾರಿಯ ಬೇಸಿಗೆಯಲ್ಲಿ ಮೇ ಆರಂಭದವರೆಗೂ ಬತ್ತುವ ಹಂತ ತಲುಪಿತ್ತು. ಮುಂಜಾಗ್ರತಾ ಕ್ರಮವಾಗಿ ನಗರಕ್ಕೆ ದಿನಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈಗ ಕೂಟುಹೊಳೆ ಭರ್ತಿಯಾಗಿ ನೀರು ಹೊರಚೆಲ್ಲುತ್ತಿದೆ.
ಸಂಪೂರ್ಣ ಭರ್ತಿಯಾಗಿ ನೀರೆಲ್ಲವೂ ಹೊಳೆಗೆ ಧುಮ್ಮಿಕ್ಕುತ್ತಿರುವ ದೃಶ್ಯ ಈಗ ಕಂಡು ಬರುತ್ತಿದೆ. ಜಲಪಾತದಂತೆ ಕಾಣಸಿಗುವ ಈ ಅಪರೂಪದ ದೃಶ್ಯ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಇದು ಜಲಪಾತವಲ್ಲದಿರಬಹುದು, ಆದರೆ ಮಿನಿ ಜಲಪಾತದಂತೆ ನೀರು ಧುಮುಕುತ್ತಿರುವುದು ಎಂತಹವರನ್ನಾದರೂ ಒಂದರೆ ಕ್ಷಣ ತನ್ನತ್ತ ಸೆಳೆಯದೇ ಇರದು.
ಒಂದು ವೇಳೆ ಕೂಟುಹೊಳೆಯನ್ನು ಅಭಿವೃದ್ಧಿಪಡಿಸಿದರೆ, ಮಳೆಗಾಲದಲ್ಲಿ ಇದರ ವೀಕ್ಷಣೆಗೆ ಸುರಕ್ಷಿತ ಸೌಲಭ್ಯ ಕಲ್ಪಿಸಿದರೆ ಖಂಡಿತವಾಗಿಯೂ ಇದು ಪ್ರೇಕ್ಷಣೀಯ ಸ್ಥಳವಾಗಲಿದೆ.
ಮತ್ತೊಂದು ಜಲಪಾತ ಸದ್ದಿಲ್ಲದೇ ದಟ್ಟ ಕಾನನ ಮಧ್ಯೆ ಭೋರ್ಗರೆಯುತ್ತಿದೆ. ಗಾಳಿಬೀಡು ಗ್ರಾಮ ಪಂಚಾಯಿತಿಗೆ ಸೇರುವ ಒಣಚಲು ಗ್ರಾಮದಲ್ಲಿರುವ ಈ ಜಲಪಾತದ ಸೌಂದರ್ಯ ನಿಜಕ್ಕೂ ಅನನ್ಯ.
ಮಡಿಕೇರಿಯಿಂದ ಗಾಳಿಬೀಡು ರಸ್ತೆಯ ಮೂಲಕ 20 ಕಿ.ಮೀ ಸಾಗಿದರೆ ಒಣಚಲು ಎಂಬ ಹೆಸರಿನ ಗ್ರಾಮ ಸಿಗುತ್ತದೆ. ಇಲ್ಲಿಂದ ಎರಡು ಕಿ.ಮೀ ಸಾಗಿದರೆ ಸುಂದರ ಜಲಧಾರೆಯೊಂದು ಕಣ್ಣಿಗೆ ಬೀಳುತ್ತದೆ. ಇದನ್ನು ಇಲ್ಲಿ ಒಣಚಲು ಫಾಲ್ಸ್ ಎಂದೇ ಕರೆಯುತ್ತಾರೆ. ಆದರೆ, ಇದು ನಿಜಕ್ಕೂ ಒಣ ಫಾಲ್ಸ್ ಅಲ್ಲ. ಸೌಂದರ್ಯವನ್ನೇ ತುಂಬಿಕೊಂಡಂತಹ ಹಾಲ್ನೊರೆಯಂತಹ ಜಲಪಾತ. ಈ ಜಲಪಾತದ ಆಜುಬಾಜಿನಲ್ಲೂ ಇನ್ನೂ ಅನೇಕ ಕಿರು ಜಲಧಾರೆಗಳ ನಯನ ಮನೋಹರ ದೃಶ್ಯಗಳು ಈಗ ಗೋಚರಿಸುತ್ತಿವೆ.
ಈ ಜಲಪಾತಗಳ ವೀಕ್ಷಣೆಗೆ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ. ಈಗಂತೂ ಇಲ್ಲಿ ಕಾಲಿಟ್ಟರೆ ಸಾಕು ರಾಶಿ ರಾಶಿ ಜಿಗಣೆಗಳು ಮುತ್ತಿಕೊಳ್ಳುತ್ತಿವೆ. ಬಂಡೆಗಳು, ಕಲ್ಲುಗಳು ಪಾಚಿಗಟ್ಟಿವೆ. ನಿರಂತರ ಮಳೆಯಿಂದ ಬಿಸಿಲು ಕಂಡು ವಾರಗಟ್ಟಲೆ ಆಗಿರುವುದರಿಂದ ನೆಲವೆಲ್ಲ ಶೀತ ಹಿಡಿದಿದೆ. ಹಾಗಾಗಿ, ಬಲು ಎಚ್ಚರದಿಂದ ಈ ಸ್ಥಳವನ್ನು ತಲುಪಬೇಕಿದೆ.
ಬೆಟ್ಟಗುಡ್ಡಗಳಿಂದ ಕೆಳಗಿಳಿಯುತ್ತಿದೆ ಅಪಾರ ಜಲರಾಶಿ ಜಲಪಾತಗಳ ಸೊಬಗು ನಯನ ಮನೋಹರ ಜಲಪಾತ ವೀಕ್ಷಣೆಗೆ ಎಚ್ಚರ ಅಗತ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.