ಮಡಿಕೇರಿ: ಕೊಡಗು ಜಿಲ್ಲೆಯು ಗುಡ್ಡಗಾಡು ಪ್ರದೇಶ. ಪಶ್ಚಿಮಘಟ್ಟದ ಸಾಲಿನಲ್ಲಿ ಬರುವ ಜಿಲ್ಲೆ. ವಾರ್ಷಿಕವಾಗಿ ಸುರಿಯುವ ಮಳೆ ಪ್ರಮಾಣವೂ ಅಧಿಕ. ಕಳೆದೆರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿ, ಹಲವರ ಬದುಕನ್ನು ಬೀದಿಗೆ ತಂದಿತ್ತು.
ಮಳೆಗಾಲಕ್ಕೂ ಮೊದಲು, ಜಿಲ್ಲೆಯಲ್ಲಿ ತುರ್ತು ಕಾಮಗಾರಿ, ಮನೆ ದುರಸ್ತಿ, ಚರಂಡಿ ಶುಚಿ, ಕೆರೆ ಹಾಗೂ ನದಿಯ ಹೂಳು ತೆರವು ಕಾರ್ಯ ನಡೆಯಬೇಕಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ತುರ್ತು ಕಾಮಗಾರಿಗಳೂ ಸ್ಥಗಿತಗೊಂಡಿವೆ. ರಸ್ತೆ ಡಾಂಬರ್ ಸಹ ನಿಂತಿದೆ. ಗ್ರಾಮೀಣ ರಸ್ತೆಗಳ ದುರಸ್ತಿಯೂ ಕಂಡಿಲ್ಲ. ತಿಂಗಳಿಂದ ಜಿಲ್ಲೆಯಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಹಳೇ ಮನೆಗಳ ದುರಸ್ತಿ ಮಾಡಿಕೊಳ್ಳಲು ಜನರಿಗೆ ಸಾಧ್ಯವಾಗಿಲ್ಲ. ಲಾಕ್‌ಡೌನ್ ನಡುವೆ ಜನರು ಮಳೆಗಾಲದ ಚಿಂತೆಯಲ್ಲಿದ್ದರು.
ಕೊನೆಗೂ ರಾಜ್ಯ ಸರ್ಕಾರ ತುರ್ತು ಕಾಮಗಾರಿಗೆ ಸರ್ಕಾರ ಒಪ್ಪಿಗೆ ನೀಡಿದ್ದು ಜಿಲ್ಲೆಯ ಜನರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಕಾಮಗಾರಿ ಸ್ಥಗಿತದಿಂದ ತೊಂದರೆ ಆಗುತ್ತಿದ್ದು ಮಳೆಗಾಲಕ್ಕೂ ಮೊದಲು ತುರ್ತು ಕಾಮಗಾರಿಗೆ ಅನುಮತಿ ನೀಡುವಂತೆ ಕೋರಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನ ಸೆಳೆದಿದ್ದರು.
ಯಡಿಯೂರಪ್ಪ ಅವರನ್ನು ಖುದ್ದು ಭೇಟಿ ಮಾಡಿದ್ದ ಬೋಪಯ್ಯ, ಮಳೆಗಾಲ ಸಮೀಪದಲ್ಲಿದೆ. ಕಳೆದ ಬಾರಿ ಮಳೆಯಿಂದ ಹಾನಿಗೊಳಗಾದ ರಸ್ತೆ, ಸೇತುವೆ, ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ‘ನನ್ನ ಮನವಿಗೆ ತಕ್ಷಣ ಸ್ಪಂದಿಸಿ ಕಾಮಗಾರಿ ಪೂರ್ಣಗೊಳಿಸಲು ಸಿ.ಎಂ ಅನುಮೋದನೆ ನೀಡಿದ್ದಾರೆ’ ಎಂದು ಬೋಪಯ್ಯ ಮಾಹಿತಿ ನೀಡಿದ್ದಾರೆ.
ಕಾರ್ಮಿಕರ ಕಳುಹಿಸಲು ಅನುಮತಿ:ಲಾಕ್‌ಡೌನ್‌ನಿಂದ ವಿರಾಜಪೇಟೆ ಮೂರಾರ್ಜಿ ಶಾಲೆ, ಮಡಿಕೇರಿಯ ಬಿಸಿಎಂ ಹಾಸ್ಟೆಲ್‌ನಲ್ಲಿ ಕೊಡಗಿಗೆ ಕಾಫಿ ಪಸಲು ಕೊಯ್ಲು ಮಾಡಲು ಬಂದಿದ್ದ ಹೊರ ಜಿಲ್ಲೆಯ ಕಾರ್ಮಿಕರು ಆಶ್ರಯ ಪಡೆದುಕೊಂಡಿದ್ದಾರೆ. ಕಾಫಿ ಕೊಯ್ಲಿಗೆ ಜಿಲ್ಲೆಗೆ ಬಂದಿದ್ದ ಹೊರ ಜಿಲ್ಲೆ ಕಾರ್ಮಿಕರನ್ನು ವಾಪಸ್ ಕಳುಹಿಸಲು ಅನುಮತಿಗಾಗಿ ಮನವಿ ಮಾಡಲಾಗಿತ್ತು. ಇದಕ್ಕೂ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ ಎಂದೂ ತಿಳಿಸಿದ್ದಾರೆ.
ಮನೆ ಹಸ್ತಾಂತರವೂ ವಿಳಂಬ:ಜಂಬೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಸಂತ್ರಸ್ತರ ಮನೆಗಳಿಗೂ ಮರಳು, ಕಬ್ಬಿಣ ಹಾಗೂ ಸಿಮೆಂಟ್ ಲಭಿಸುತ್ತಿಲ್ಲ. ಹೀಗಾಗಿ, ಮನೆ ನಿರ್ಮಾಣ ಕಾಮಗಾರಿಯೂ ಸ್ಥಗಿತಗೊಂಡಿತ್ತು. ಮಾರ್ಚ್ ಅಥವಾ ಏಪ್ರಿಲ್ ಅಂತ್ಯಕ್ಕೆ ಮನೆ ಹಸ್ತಾಂತರ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಭರವಸೆ ನೀಡಿದ್ದರು. ಆದರೆ, ಮನೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವ ಕಾರಣಕ್ಕೆ, ಸದ್ಯಕ್ಕೆ ಮನೆಗಳ ಹಸ್ತಾಂತರ ಅಸಾಧ್ಯ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಜಿಲ್ಲಾಡಳಿತದಿಂದ ಷರತ್ತು ಬದ್ಧ ಅವಕಾಶ
ಲಾಕ್‌ಡೌನ್ ಅವಧಿಯಲ್ಲಿ ನಡೆಸಬಹುದಾದ ಕಾಮಗಾರಿಗೆ ಜಿಲ್ಲಾಡಳಿತ ಷರತ್ತು ಬದ್ಧ ಅವಕಾಶ ನೀಡಿದೆ. ಈ ಅವಧಿಯಲ್ಲಿ ಪಾಲಿಸಬಹುದಾದ ನಿಯಮಗಳು ಇಲ್ಲಿವೆ.
* ತಡೆಗೋಡೆ, ಸೇತುವೆ, ರಸ್ತೆ ಕಾಮಗಾರಿಗಳು, ನೀರಾವರಿ ಯೋಜನೆಗಳು, ಕಟ್ಟಡ ಸೇರಿದಂತೆ ಎಲ್ಲ ವಾಣಿಜ್ಯ ಯೋಜನೆಗಳು.
* ಸ್ಥಳೀಯವಾಗಿ ಲಭ್ಯರಿರುವ ಕಾರ್ಮಿಕರನ್ನೇ ಬಳಸಿಕೊಳ್ಳಬೇಕು.
* ಮುಂದಿನ ಆದೇಶದ ತನಕ ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಕಾರ್ಮಿಕರ ಸಂಚಾರಕ್ಕೆ ಅವಕಾಶ ಇಲ್ಲ.
* ಕಾರ್ಮಿಕರಿಗೆ ಕಾಮಗಾರಿ ನಡೆಸುವ ಸ್ಥಳದ ಆಸುಪಾಸಿನಲ್ಲಿಯೇ ವಸತಿ ಸೌಕರ್ಯ ಕಲ್ಪಿಸಬೇಕು.
* ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಹಾರ ವ್ಯವಸ್ಥೆ, ಹ್ಯಾಂಡ್ ಸ್ಯಾನಿಟೈಸರ್, ಸೋಪು ವ್ಯವಸ್ಥೆ ಕಲ್ಪಿಸಬೇಕು.
* ಕಾಮಗಾರಿ ಪ್ರದೇಶ, ಸ್ಥಳದ ಹೊರತು ವಿನಾ ಕಾರಣ ಹೊರ ಪ್ರದೇಶದಲ್ಲಿ ತಿರುಗಾಡುವಂತಿಲ್ಲ.
* ಎಲ್ಲ ಕಾರ್ಮಿಕರ ಆರೋಗ್ಯ ಸ್ಥಿತಿಯ ಬಗ್ಗೆ ಪ್ರತಿವಾರಕ್ಕೆ ಒಮ್ಮೆ ಮೆಡಿಕಲ್ ಸ್ಕ್ರೀನಿಂಗ್ ನಡೆಸಬೇಕು.
* ಕಾಮಗಾರಿಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳ ಸಾಗಾಣಿಕೆಗೆ ಜಿಲ್ಲೆಯೊಳಗೆ ಮತ್ತು ಅಂತರ ಜಿಲ್ಲಾ ಸಂಚಾರಕ್ಕೆ ಪಾಸ್ ಪಡೆಯುವ ಅಗತ್ಯತೆ ಇರುವುದಿಲ್ಲ. ಆದರೂ, ಚಾಲಕ ಮತ್ತು ಒಬ್ಬ ಸಹಾಯಕರಿಗೆ (ಇಬ್ಬರು ಮಾತ್ರ) ಸಂಚಾರಕ್ಕೆ ಅವಕಾಶ.
* ಕಾಮಗಾರಿ ನಡೆಸುವ ಸ್ಥಳದಲ್ಲಿ ಶುಚಿತ್ವ, ನೈರ್ಮಲ್ಯ ಕಾಪಾಡುವುದು ಮತ್ತು ಸೋಂಕು ನಿವಾರಕಗಳ ಸಿಂಪಡಣೆ ಕಡ್ಡಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.