ADVERTISEMENT

ಶಾಲೆಗಳಲ್ಲಿ ಹಬ್ಬದ ಸಂಭ್ರಮ; ಮಕ್ಕಳಿಗೆ ಆತ್ಮೀಯ ಸ್ವಾಗತ

‘ಸೆಲ್ಪೀ ಜ್ಹೋನ್‌’ ಮೂಲಕ ಗಮನ ಸೆಳೆದ ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 4:35 IST
Last Updated 1 ಜೂನ್ 2024, 4:35 IST
ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಸೆಲ್ಫಿ ಜೋನ್‌ ನಿರ್ಮಿಸಿ ಶಾಲಾ ಪ್ರಾರಂಭೋತ್ಸವವನ್ನು ವಿನೂತನವಾಗಿ ಶುಕ್ರವಾರ ಆಚರಿಸಲಾಯಿತು
ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಸೆಲ್ಫಿ ಜೋನ್‌ ನಿರ್ಮಿಸಿ ಶಾಲಾ ಪ್ರಾರಂಭೋತ್ಸವವನ್ನು ವಿನೂತನವಾಗಿ ಶುಕ್ರವಾರ ಆಚರಿಸಲಾಯಿತು   

ಮಡಿಕೇರಿ: ರಾಜ್ಯ ಪಠ್ಯಕ್ರಮದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆರಂಭದ ಮೊದಲ ದಿನವನ್ನು ಕೊಡಗು ಜಿಲ್ಲೆಯಲ್ಲಿ ‘ಪ್ರಾರಂಭೋತ್ಸವ’ದ ಮೂಲಕ ಉತ್ಸವದಂತೆ ಆಚರಿಸಲಾಯಿತು.

ಕೆಲವೆಡೆ ಸೆಲ್ಫಿ ಸ್ಟ್ಯಾಂಡ್ ಮಾಡಿ ಮಕ್ಕಳನ್ನು ಸೆಳೆದರೆ, ಮತ್ತೆ ಬಹುತೇಕ ಕಡೆ ಶಾಲೆಗಳಿಗೆ ತಳಿರು ತೋರಣ ಕಟ್ಟಿ, ಗುಲಾಬಿ ನೀಡಿ, ಸಿಹಿ ವಿತರಿಸಿ ಮಕ್ಕಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು.

ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವತಿಯಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಾಡಿದ್ದ ಸೆಲ್ಫಿ ಸ್ಟ್ಯಾಂಡ್  ಗಮನ ಸೆಳೆಯಿತು. ಈ ಸೆಲ್ಫಿ ಸ್ಟ್ಯಾಂಡ್‌ನ್ನು ಹೊತ್ತುಕೊಂಡ ಶಿಕ್ಷಕರು ಗೋಣಿಕೊಪ್ಪಲಿನ ಬಸ್‌ನಿಲ್ದಾಣದಲ್ಲಿ ಇರಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕುತೂಹಲದ ಕಣ್ಣಿನಿಂದ ಈ ವಿನೂತನ ಪ್ರಯೋಗವನ್ನು ವೀಕ್ಷಿಸಿದರು.

ADVERTISEMENT

ವಿರಾಜಪೇಟೆ ಕ್ಷೇತ್ರ ಶಿಕ್ಷಣಧಿಕಾರಿ ಎಂ.ಪ್ರಕಾಶ್, ಅಕ್ಷರ ದಾಸೋಹದ ಅಧಿಕಾರಿ ರಾಜೇಶ್, ಎಸ್‌ಡಿಎಂಸಿ ಅಧ್ಯಕ್ಷೆ ಶಾಂತಿ ಹಾಗೂ ಶಾಲೆಯ ಹಿರಿಯ ಮುಖ್ಯಶಿಕ್ಷಕ ಎಚ್.ಕೆ.ಪ್ರಕಾಶ್ ಮಕ್ಕಳಿಗೆ ಲಡ್ಡು ನೀಡಿ ಶಾಲೆಗೆ ಬರಮಾಡಿಕೊಂಡರು. ಬ್ಯಾಂಡ್ ವಾದನದ ಜೊತೆಗೆ ಮಕ್ಕಳನ್ನು ಬಸ್‌ನಿಲ್ದಾಣದಿಂದ ಶಾಲೆಗೆ ಕರೆ ತಂದಿದ್ದು ವಿಶೇಷ ಎನಿಸಿತು.

ಮೂರ್ನಾಡುವಿನ ಪಿಎಂಶ್ರೀ ಶಾಲೆ ವತಿಯಿಂದ ಪಟ್ಟಣದಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಮೆರವಣಿಗೆ ನಡೆಸಲಾಯಿತು. ಮಕ್ಕಳ ದಾಖಲಾತಿಗಾಗಿ ನಡೆದ ಈ ಮೆರವಣಿಗೆಯಲ್ಲಿ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಭಾಗಿಯಾದರು. ಕೂಡು ಮಂಗಳೂರಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳನ್ನು ಎತ್ತಿನ ಬಂಡಿಯಲ್ಲಿ ಶಾಲೆಗೆ ಕರೆ ತಂದಿದ್ದು ವಿಶೇಷ ಎನಿಸಿತು.

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಒಟ್ಟು 479 ಪ್ರಾಥಮಿಕ ಶಾಲೆಗಳು ಮತ್ತು 171 ಪ್ರೌಢಶಾಲೆಗಳಲ್ಲಿ ಪ್ರಾರಂಭೋತ್ಸವ ನಡೆಯಿತು. ಡಿಡಿ‍ಪಿಐ ಚಂದ್ರಕಾಂತ್ ಪ್ರತಿಕ್ರಿಯಿಸಿ, ‘ಜೂನ್ 1ರಿಂದ 15ರವರೆಗೆ ಶಾಲಾ ದಾಖಲಾತಿ ಆಂದೋಲನ ನಡೆಯಲಿದ್ದು, ಅರ್ಹ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಮನೆ ಮನೆಗೆ ಭೇಟಿ ನೀಡಿ, ಶಾಲೆಗೆ ಮಕ್ಕಳನ್ನು ಸೇರಿಸಲಾಗುತ್ತದೆ’ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣಾಧಿಕಾರಿ ಎಂ.ಮಹದೇವಸ್ವಾಮಿ ಅವರು ಕುಶಾಲನಗರ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದರು.

ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್ ವಾದನದ ಜೊತೆಗೆ ಶುಕ್ರವಾರ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು
ಡಿಡಿಪಿಐ ಚಂದ್ರಕಾಂತ್ ಅವರು ಬೋಯಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿದರು

ಅನಿರೀಕ್ಷಿತ ಭೇಟಿ ನೀಡಿದ ಡಿಡಿಪಿಐ ಚಂದ್ರಕಾಂತ್

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಎಂ.ಚಂದ್ರಕಾಂತ್ ಅವರು ಬೋಯಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವವನ್ನು ಪರಿಶೀಲಿಸಿದರು. ಶಾಲಾ ಆವರಣ ಕೊಠಡಿ ಶೌಚಾಲಯ ಸ್ವಚ್ಛತೆ ಸಂಪು ಟ್ಯಾಂಕ್ ಸ್ವಚ್ಛತೆ ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡುವುದು ಆಹಾರ ಧಾನ್ಯಗಳ ವ್ಯವಸ್ಥೆಯನ್ನು ಪರಿಶೀಲಿಸಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿದರು. ಮಧ್ಯಾಹ್ನ ಬಿಸಿಯೂಟದಲ್ಲಿ ಪಾಯಸ ಬಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಸಿಹಿಯನ್ನೂ ವಿತರಿಸಿದರು. ಶಿಕ್ಷಕರಿಗೆ ಶೈಕ್ಷಣಿಕ ಮಾರ್ಗದರ್ಶಿಯಂತೆ ಪಾಠ ಪ್ರವಚನ ಹಾಗೂ ಇತರೆ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಸಲಹೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.