ಮಡಿಕೇರಿ: ಇಲ್ಲಿನ ಪತ್ರಿಕಾಭವನದಲ್ಲಿ ಕೊಡವ ಮಕ್ಕಡ ಕೂಟ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ದೀಪಾ ನರೇಂದ್ರ ಬಾಬು ಅವರ ಕನ್ನಡ ಕಾದಂಬರಿ ‘ಗುಳೆ’ಯನ್ನು ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಬಿಡುಗಡೆ ಮಾಡಿದರು.
‘ಗುಳೆ’ ಎಂದರೆ ಒಂದು ಬಗೆಯಲ್ಲಿ ವಲಸೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ಊರಿಗೆ ವಲಸೆ ಹೋದವರೇ’ ಎಂದು ಹೇಳುತ್ತಾ ಮಾತಿಗಿಳಿದ ಲೇಖಕಿ ದೀಪಾ ನರೇಂದ್ರಬಾಬು, ‘ವಲಸೆ ಎಂಬುದು ಕೇವಲ ಒಂದು ಜನಾಂಗಕ್ಕೆ, ಒಂದು ಕಾಲಕ್ಕೆ ಮಾತ್ರ ಸೀಮಿತವಲ್ಲ’ ಎಂದರು.
ಕೊಡಗಿನ ಕಾಫಿ ಮತ್ತು ಚಹಾ ತೋಟಗಳಲ್ಲಿ ಕೆಲಸ ಮಾಡಲು ವಲಸೆ ಬಂದ ಕಾರ್ಮಿಕರ ಬದುಕನ್ನು ಕುರಿತು ಕಾದಂಬರಿಯಲ್ಲಿ ಬರೆಯಲಾಗಿದೆ. ಅವರು ತಮ್ಮ ಕೆಲಸದ ನಡುವೆಯೂ ಅವರ ದೈವಾಚಾರಗಳ ಬಗ್ಗೆ ತೋರುವ ಆಸಕ್ತಿ ಹಾಗೂ ಅವರ ಪುಟ್ಟ ಮಕ್ಕಳೂ ಅದನ್ನು ಪಾಲಿಸಿಕೊಂಡು ಹೋಗುವ ರೀತಿ ಸೇರಿದಂತೆ ಬದುಕಿಗೆ ಸಂಬಂಧಿಸಿದ ಇನ್ನಿತರ ವಿಚಾರಗಳು ಪುಸ್ತಕದಲ್ಲಿವೆ ಎಂದು ಅವರು ಹೇಳಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ, ‘ಇದು ಸುಲಲಿತವಾಗಿ ಓದಬಹುದಾದ ಪುಸ್ತಕ. ಸಿನಿಮಾಕ್ಕೆ ಸರಿ ಹೊಂದುವಂತಹ ಕಾದಂಬರಿ ಇದಾಗಿದೆ’ ಎಂದು ಶ್ಲಾಘಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ‘ಸುವರ್ಣ ಕರ್ನಾಟಕದ ಹೊತ್ತಿನಲ್ಲಿ ಕನ್ನಡ ಪುಸ್ತಕ ಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ. ಕನ್ನಡ ರಾಜ್ಯೋತ್ಸವದ ಮುನ್ನೆಲೆಯಲ್ಲಿ ಈ ಕೃತಿ ಹೊರಬಂದಿದ್ದು ಸಕಾಲಿಕವೂ ಆಗಿದೆ’ ಎಂದರು.
ಚಲನಚಿತ್ರ ನಿರ್ದೇಶಕಿ ಹಾಗೂ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ‘ಬೇರೆ ಕಡೆಯಿಂದ ಬಂದವರು ಹೇಗೆ ತಮ್ಮ ಆಚಾರ ವಿಚಾರಗಳನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಷಯ ಕಾದಂಬರಿಯಲ್ಲಿದೆ. ಪುಸ್ತಕ ಓದಿಸಿಕೊಂಡು ಹೋಗುತ್ತದೆ’ ಎಂದು ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಮಾತನಾಡಿ, ‘ಪ್ರಕಾಶಕ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ನಾಯಕತ್ಬ ಗುಣವು ಸಾಮಾಜಿಕ ಕಳಕಳಿ ಇರುವಂತದ್ದು. ಅವರು ಇದುವರೆಗೂ 98 ಪುಸ್ತಕಗಳನ್ನು ಪ್ರಕಾಶನ ಮಾಡಿರುವುದು ಸುಲಭದ ಮಾತಲ್ಲ’ ಎಂದು ಶ್ಲಾಘಿಸಿದರು.
ಹೊರಬಂತು ಕೊಡವ ಮಕ್ಕಡ ಕೂಟದ 98ನೇ ಪುಸ್ತಕ ಡಾ.ದೀಪಾ ನರೇಂದ್ರ ಬಾಬು ಅವರ ‘ಗುಳೆ’ ಪುಸ್ತಕ ಹಲವು ಗಣ್ಯರು ಭಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.