ಕುಶಾಲನಗರ: ತಾಲ್ಲೂಕಿನ ಹಾರಂಗಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು.
ತುಂತುರು ಹನಿಗಳಿಂದ ಆರಂಭಗೊಂಡ ಮಳೆ ನಂತರ ದೊಡ್ಡ ಗಾತ್ರದ ಆಲಿಕಲ್ಲು ಸಹಿತ ಮಳೆ ಸುರಿಯಿತು. ಆಲಿಕಲ್ಲು ಮಳೆಗೆ ಗ್ರಾಮಸ್ಥರು ಆಶ್ಚರ್ಯದೊಂದಿಗೆ ಆತಂಕಗೊಂಡರು. ಒಂದು ತಾಸಿಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಮಳೆಯಿಂದ ಅನೇಕ ಮನೆಗಳಿಗೆ ಹಾನಿ ಉಂಟಾಗಿದೆ. ಹಾರಂಗಿ ವ್ಯಾಪ್ತಿಯಲ್ಲಿ ಬಹುತೇಕ ಮನೆಗಳ ಸಿಮೆಂಟ್ ಶೀಟು, ಹೆಂಚುಗಳು ಹಾರಿಹೋಗಿವೆ. ಗುಡಿಸಲುಗಳಿಗೆ ಹಾನಿ ಉಂಟಾಗಿದೆ. ಇದರಿಂದ ಮಳೆ ನೀರು ಮನೆ ಒಳಗೆ ನುಗ್ಗಿ ವಸ್ತುಗಳು ಹಾಳಾಗಿವೆ. 6 ಕೆ.ಜಿ ಗಾತ್ರದ ಆಲಿಕಲ್ಲುಗಳು ಬಿದ್ದಿವೆ.
ಸ್ಥಳಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಆಲಿಕಲ್ಲು ಮಳೆಯಿಂದ ಜಖಂಗೊಂಡಿರುವ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಶರತ್ ಇದ್ದರು.
ಗುಡುಗುಸಹಿತ ಜೋರು ಮಳೆ
ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ 2.45ರಿಂದ ಮಿಂಚು, ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಉತ್ತಮ ಮಳೆ ಸುರಿಯಿತು.
ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ ಇದ್ದಕ್ಕಿದ್ದಂತೆ ಮಳೆ ಆರಂಭವಾಗಿ ಅರ್ಧ ಗಂಟೆ ಸುರಿಯಿತು. ಒಂದೂವರೆ ಗಂಟೆ ಬಿಡುವು ನೀಡಿದ ಮಳೆ ಪುನಃ ಸಂಜೆ 4.45ರಿಂದ ಗುಡುಗು–ಮಿಂಚು ಸಹಿತ ಸುರಿಯಲಾರಂಭಿಸಿತು. ಮೈ ನಡುಗಿಸುವ ಚಳಿಯಿಂದ ಜನ ಮನೆಯಿಂದ ಹೊರಬರಲಿಲ್ಲ. ರಸ್ತೆ, ಚರಂಡಿಯಲ್ಲಿ ನೀರು ಹರಿಯಿತು. 5ರಿಂದ ಮಳೆ ತೀವ್ರತೆ ಹೆಚ್ಚಾಯಿತು. ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಜನಜೀವನ ಅಸ್ತವ್ಯಸ್ತವಾಯಿತು.
ಶನಿವಾರಸಂತೆಗೆ ಮುಕ್ಕಾಲು ಇಂಚು, ಮುಳ್ಳೂರಿಗೆ 1 ಇಂಚು, ಕಾಜೂರಿಗೆ 30 ಸೆಂಟ್, ಬಿಳಾಹ ಗ್ರಾಮಕ್ಕೆ 1 ಇಂಚು, ಮೂದರವಳ್ಳಿ ಗ್ರಾಮಕ್ಕೆ 75 ಸೆಂಟ್, ನಿಡ್ತ ಗ್ರಾಮಕ್ಕೆ 55 ಸೆಂಟ್ ಮಳೆಯಾಗಿದೆ.
ಮಳೆ: ರೈತರ ಹರ್ಷ
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬುಧವಾರ ಮಧ್ಯಾಹ್ನ ಧಾರಾಕಾರ ವರ್ಷಧಾರೆ ಸುರಿಯಿತು.
ಕಾಫಿ ಬೆಳೆಗಾರರು ಕಾಫಿ ಗಿಡಗಳಿಗೆ ಗೊಬ್ಬರ ಹಾಕಲು ಪ್ರಾರಂಭಿಸಿದ್ದು, ಇಂದಿನ ಮಳೆಯಿಂದ ಅನುಕೂಲವಾಗಲಿದೆ. ಮುಂದಿನ ಸಾಲಿನ ಕಾಳು ಮೆಣಸಿನ ದಾರ ಬಿಡಲು ಪ್ರಾರಂಭವಾಗಿದ್ದು, ಉತ್ತಮ ಇಳುವರಿ ಪಡೆಯಬಹುದಾಗಿದೆ. ಅಲ್ಲದೆ, ಹಸಿರು ಮೆಣಸು, ಶುಂಠಿ ಬೆಳೆಗೆ ನೀರು ಹಾಯಿಸುವುದು ತಪ್ಪಿದಂತಾಗಿದೆ.
ವರ್ಷಧಾರೆಗೆ ಧರೆಗುರುಳಿದ ಮರ
ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಮಂಗಳವಾರ ರಾತ್ರಿ ಗಾಳಿ ಸಹಿತ ಮಳೆ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಶಾಂತಿಗೇರಿ ಬಳಿ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಕಳೆದ 2–3 ದಿನಗಳಿಂದ ಸಂಜೆ ವೇಳೆ ಮಳೆ ಸುರಿಯುತ್ತಿದೆ. ಮಂಗಳವಾರ ರಾತ್ರಿ ಬೀಸಿದ ಗಾಳಿಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ರಸ್ತೆ ಸಂಚಾರ ಮತ್ತು ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯ ಉಂಟಾಯಿತು. ಬುಧವಾರ ಸಂಜೆ ಮೋಡ ಕವಿದ ವಾತಾವರಣದಿಂದ ಕೂಡಿತ್ತು.
ಮಡಿಕೇರಿಯಲ್ಲಿ ವರುಣನ ಆರ್ಭಟ
ಮಡಿಕೇರಿ: ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಹಾಗೂ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ಮಡಿಕೇರಿಯಲ್ಲೂ ಒಂದು ತಾಸು ಮಳೆ ಆರ್ಭಟಿಸಿತು. ಗುಡುಗು, ಸಿಡಿಲಿನ ಅಬ್ಬರವೂ ಜೋರಾಗಿತ್ತು. ಮಡಿಕೇರಿಯಲ್ಲಿ ದಿಢೀರ್ ಸುರಿದ ಮಳೆಯಿಂದ ಚರಂಡಿಗಳು ತುಂಬಿ ಹರಿದವು. ಮಳೆಯಿಂದ ಕಾಫಿ ಬೆಳೆಗೆ ಅನುಕೂಲವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.