ADVERTISEMENT

ಗೋಣಿಕೊಪ್ಪಲು: ಕೆಸರಿನ ಓಕುಳಿ ಸಂಭ್ರಮಿಸದ ಜನ

ಎರಡು ದಿನಗಳ ಕಾಲ ನಡೆದ ಹಳ್ಳಿಗಟ್ಟು ಬೋಡ್ ನಮ್ಮೆ

​ಪ್ರಜಾವಾಣಿ ವಾರ್ತೆ
Published 21 ಮೇ 2024, 6:26 IST
Last Updated 21 ಮೇ 2024, 6:26 IST
ಭದ್ರಕಾಳಿ ದೇವಸ್ಥಾನಕ್ಕೆ ಹೊರಟ ಹಬ್ಬದ ಕೃತಕ ಕುದುರೆ ಹಾಗೂ ಮೊಗಗಳು (ಪೋಜಿತ ತಟ್ಟೆ)
ಭದ್ರಕಾಳಿ ದೇವಸ್ಥಾನಕ್ಕೆ ಹೊರಟ ಹಬ್ಬದ ಕೃತಕ ಕುದುರೆ ಹಾಗೂ ಮೊಗಗಳು (ಪೋಜಿತ ತಟ್ಟೆ)   

ಗೋಣಿಕೊಪ್ಪಲು: ಕೆಸರಿನ ಓಕುಳಿಯ ಹಬ್ಬವೆಂದು ಹೆಸರಾದ ಹಾಗೂ ಕಲ್ಲಿನ ಆನೆ ದೇವಸ್ಥಾನಕ್ಕೆ ಮುಖಮಾಡಿ ನಿಂತಿರುವ ರಾಜ್ಯದ ಏಕೈಕ ದೇವಸ್ಥಾನವೆಂದು ಖ್ಯಾತಿ ಪಡೆದಿರುವ ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕೋತ್ಸವ ಬೋಡ್ ನಮ್ಮೆ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.

ಹಳ್ಳಿಗಟ್ಟುವಿನ ಚಮ್ಮಟೀರ ಬಲ್ಯಮನೆಯಿಂದ ಪೊಲವಂದೆರೆ ಹೊರಡುವ ಮೂಲಕ ಹಬ್ಬಕ್ಕೆ ಶನಿವಾರ ಚಾಲನೆ ದೊರೆತಿತ್ತು. ಭಾನುವಾರ ಕುದುರೆ ಹಾಗೂ ಕೆಸರು ಎರಚಾಟದ ಹಬ್ಬದಲ್ಲಿ ಜನರು ಸಂಭ್ರಮಿಸಿದರು. ಅಂದು ಮಧ್ಯಾಹ್ನ 3.30ಕ್ಕೆ ಚಮ್ಮಟೀರ ಹಾಗೂ ಮೂಕಳೇರ ಬಲ್ಯಮನೆಯಿಂದ ತಲಾ ಒಂದೊಂದು ಕೃತಕ ಕುದುರೆ ಮೊಗ ಹಾಗೂ ವಿವಿಧ ವೇಷಧಾರಿಗಳು ಹೊರಟು ಸಂಜೆ 5 ಗಂಟೆಗೆ ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನದ ಸಮೀಪದ ಕೆರೆಯ ಸಮೀಪದ ಅಂಬಲದಲ್ಲಿ ಸೇರಿದರು. ಬಳಿಕ ಊರಿನ ಜನರು ಹತ್ತಿರದ ಕೆರೆಯಲ್ಲಿ ಕೆಸರನ್ನು ತಂದು ಪರಸ್ಪರ ಎರಚಾಡಿಕೊಂಡು ಹಬ್ಬದ ಸಂಭ್ರಮಿಸಿದರು.

ಕೆಸರೆರೆಚಾಟದ ಸಂಭ್ರಮ ನೋಡಲು ಇಲ್ಲಿ ನೂರಾರು ಸಂಖ್ಯೆಯಲ್ಲಿ ಬೇರೆ ಊರುಗಳ ಜನರು ಆಗಮಿಸಿದ್ದರು. ಆದರೆ ಊರಿನ ಜನರಿಗೆ ಬಿಟ್ಟರೆ ಬೇರೆಯವರಿಗೆ ಕೆಸರು ಎರಚುವುದು ನಿಷೇಧವಿತ್ತು. ಒಂದು ವೇಳೆ ಎರಚಿದರೆ ಅವರಿಗೆ ದಂಡ ಹಾಕುವ ಪದ್ಧತಿಯೂ ಬೆಳೆದು ಬಂದಿದೆ. ಹೀಗಾಗಿ ಊರಿನವರು ಕೆಸರು ಎರಚಾಟದಲ್ಲಿ ಮುಳುಗಿದ್ದರೂ ಇತರರು ಯಾವುದೆ ಅಂಜಿಕೆ ಇಲ್ಲದೆ ನಿಂತು ಹಬ್ಬದ ಸಂಭ್ರಮ ವನ್ನು ವೀಕ್ಷಿಸಿ ಆನಂದಿಸಿದರು. ಇಲ್ಲಿ ಊರಿನ ಮಹಿಳೆಯರಿಗೂ ಕೆಸರು ಎರಚುವಂತಿಲ್ಲ. ಇಲ್ಲಿ ಹೊರಗಿನವರು ಅಥವಾ ನೆಂಟರು ಎಂದು ಗುರುತಿಸುವುದಕ್ಕೆ ಒಂದೊಂದು ಬೆತ್ತವನ್ನು ಅವರ ಕೈಗೆ ಕೊಟ್ಟಿದ್ದರು. ಈ ಬೆತ್ತ ಹಿಡಿದವರಿಗೆ ಯಾರು ಕೆಸರು ಎರಚಲಿಲ್ಲ.

ADVERTISEMENT

ಭದ್ರಕಾಳಿ ದೇವಸ್ಥಾನದ ವಿಶಾಲವಾದ ಗದ್ದೆ ಮೈದಾನದಲ್ಲಿ ಕೆರೆಯೊಂದಿದೆ. ಇದನ್ನು ಕೆಸರು ಎರಚಾಟದ ಕೆರೆ ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷ ನಡೆಯುವ ಹಬ್ಬದಲ್ಲಿ ಈ ಕೆರೆಯ ಮಣ್ಣೇ ಕೆಸರು ಎರಚಾಟದ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ. ಮುಂಗಾರು ಪೂರ್ವ ಮಳೆಗೆ ಗದ್ದೆ ಬಯಲು ಹಸಿರಾಗಿರುತ್ತದೆ. ಕೆರೆಗೂ ಹೊಸ ನೀರು ಬಂದಿರುತ್ತದೆ. ಇಂಥ ಸಂದರ್ಭದಲ್ಲಿ ನಡೆಯುವ ಹಬ್ಬ ನೋಡುಗರ ಕಣ್ಮನ ಸೆಳೆಯಿತು.

ಅಂಬಲದಲ್ಲಿ ಪರಸ್ಪರ ಕೆಸರು ಎರಚಾಟ ಹಾಗೂ ಕುದುರೆ ಮೊಗಗಳು ಹಾಗೂ ವಿವಿಧ ವೇಷಧಾರಿಗಳ ಸಂಭ್ರಮದ ಬಳಿಕ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿ ವಿವಿಧ ಆಚರಣೆಯೊಂದಿಗೆ ಮಹಾಪೂಜೆ ಸಲ್ಲಿಸಲಾಯಿತು. ದೇವರಿಗೆ ಕಾಣಿಕೆ ಅರ್ಪಿಸಿದ ಬಳಿಕ ಸಂಜೆ 6.30ಕ್ಕೆ ಹಬ್ಬ ಮುಕ್ತಾಯ ಗೊಂಡಿತು. ದೇವಾಲಯದ ಅಧ್ಯಕ್ಷ ಚಮ್ಮಟಿರ ಪ್ರವೀಣ್ ಉತ್ತಪ್ಪ, ಕಾರ್ಯದರ್ಶಿ ಮೂಕಳೇರ ರಮೇಶ್, ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು, ಊರಿನ ಹಿರಿಯರು, ಭಕ್ತರು ಹಾಜರಿದ್ದರು.

ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಹಳ್ಳಿಗಟ್ಟುವಿನಲ್ಲಿ ನಡೆದ ಬೋಡ್ ನಮ್ಮೆಯಲ್ಲಿ ಜನತೆ ಕೆಸರು ಎರಚಿಕೊಂಡು ಸಂಭ್ರಮಿಸಿದರು
ಬೋಡ್ ನಮ್ಮೆಯ ಕೆಸರೆರಾಚಟದಲ್ಲಿ ಮಕ್ಕಳ ಸಂಭ್ರಮ
ಕೆಸರು ಎರಚಾಟದಿಂದ ರಕ್ಷಣೆ ಪಡೆಯಲು ಕೈಯಲ್ಲಿ ಕೋಲು ಹಿಡಿದು ನಿಂತಿದ್ದ ಅತಿಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.