ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಹನುಮ ಜಯಂತಿಯನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಡಿಕೇರಿಯ ರಾಮಮಂದಿರಗಳು, ಶನಿವಾರಸಂತೆ ಪಟ್ಟಣದ ಶ್ರೀರಾಮ ಮಂದಿರ ಸೇರಿದಂತೆ ಹಲವೆಡೆ ಪೂಜಾವಿಧಿಗಳು ನೆರವೇರಿದವು. ಕುಶಾಲನಗರದಲ್ಲಿ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆದ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾದರು.
ಆಂಜನೇಯ ದೇವಾಲಯ ಸೇವಾ ಸಮಿತಿ ಮತ್ತು ರಾಮಾಂಜನೇಯ ಉತ್ಸವ ಸಮಿತಿ ವತಿಯಿಂದ 37ನೇ ಹನುಮ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಏರ್ಪಡಿಸಿದ್ದ ವಿವಿಧ ಉತ್ಸವ ಮಂಟಪಗಳ ಶೋಭಾಯಾತ್ರೆ ಜನಮನ ರಂಜಿಸಿತು. ಇಲ್ಲಿನ ರಥಬೀದಿಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾಕೈಂಕರ್ಯಗಳು ನೆರವೇರಿದವು.
ಆಂಜನೇಯ ವಿಗ್ರಹವನ್ನು, ವಿದ್ಯುತ್ ದೀಪಗಳ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಸೇರಿದ್ದರು. 7 ಉತ್ಸವ ಮಂಟಪಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದವು.
ಎಚ್.ಆರ್.ಪಿ.ಕಾಲೋನಿಯ ಶ್ರೀರಾಮ ಮಂದಿರದ ಆಂಜನಿಪುತ್ರ ಜಯಂತೋತ್ಸವ ಆಚರಣಾ ಸಮಿತಿ, ಮಾದಾಪಟ್ಟಣ ಶ್ರೀರಾಮದೂತ ಉತ್ಸವ ಸಮಿತಿ, ಗುಡ್ಡೆಹೊಸೂರಿನ ವೀರಾಂಜನೇಯ ಸೇವಾ ಸಮಿತಿ, ಗುಮ್ಮನಕೊಲ್ಲಿಯ ಬಸವೇಶ್ವರ ಸೇವಾ ಸಮಿತಿ, ಬೈಚನಹಳ್ಳಿಯ ಮಾರಿಯಾಮ್ಮ ದೇವಸ್ಥಾನ ಸಮಿತಿ, ಕಾಳಮ್ಮ ಕಾಲೋನಿಯ ಕಾಳಿಕಾಂಭ ದೇವಸ್ಥಾನ ಸಮಿತಿ, ಗೋಪಾಲ್ ಸರ್ಕಲ್‌ನ ಗಜಾನನ ಯುವಕ ಸಂಘದ ಉತ್ಸವ ಮಂಟಪಗಳು ಪಾಲ್ಗೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.