ADVERTISEMENT

ನಾಪೋಕ್ಲು: ಇವರ ಮನೆಯೇ ವಸ್ತು ಸಂಗ್ರಹಾಲಯ

ಸುರೇಶ್‌ ಸಿ.ಎಸ್‌
Published 13 ಸೆಪ್ಟೆಂಬರ್ 2023, 6:12 IST
Last Updated 13 ಸೆಪ್ಟೆಂಬರ್ 2023, 6:12 IST
<div class="paragraphs"><p>ಸಂಗ್ರಹದಲ್ಲಿರುವ ವಾಚು, ಟೇಬಲ್ ಕ್ಲಾಕ್‌ಗಳೊಂದಿಗೆ ಕಿಗ್ಗಾಲು ಹರೀಶ್</p></div>

ಸಂಗ್ರಹದಲ್ಲಿರುವ ವಾಚು, ಟೇಬಲ್ ಕ್ಲಾಕ್‌ಗಳೊಂದಿಗೆ ಕಿಗ್ಗಾಲು ಹರೀಶ್

   

ನಾಪೋಕ್ಲು: ನಿಮ್ಮಲ್ಲಿ ಬೇಡವೆಂದು ಮೂಲೆಗೆಸೆದ ವಸ್ತುಗಳಿವೆಯೇ? ನನಗೆ ಕೊಡಿ. ಜತನದಿಂದ ಸಂಗ್ರಹಿಸಿಡುವೆ-ಎನ್ನುವ ಕಿಗ್ಗಾಲು ಗ್ರಾಮದ ಹರೀಶ್, ಹಳೆಯ ವಸ್ತುಗಳನ್ನು ಕಾಪಿಟ್ಟು, ತಮ್ಮ ಮನೆಯಲ್ಲಿ ಮಿನಿ ವಸ್ತುಸಂಗ್ರಹಾಲಯವೊಂದನ್ನು ರೂಪಿಸಿದ್ದಾರೆ.

ಕಿಗ್ಗಾಲು ಹರೀಶ್ ಮೂರ್ನಾಡಿನ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು. ಕಲೆ, ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿದವರು. ಕಾಲ ಸರಿದಂತೆ ಅಪ್ರಸ್ತುತವಾಗುವ, ಜನಬಳಕೆಯಿಂದ ದೂರವಾಗುವ ವಸ್ತುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇವರು ಸಂಗ್ರಹಿಸುವುದು ಎಲ್ಲವೂ ಹಳೆಯ ವಸ್ತುಗಳು. ಗಡಿಯಾರಗಳು, ವಾಚುಗಳು, ತಕ್ಕಡಿ, ಚೆನ್ನೆಮಣೆ, ಟೆಲಿಫೋನ್ ಬೂತ್, ಜಾನುವಾರುಗಳ ಕೊರಳಿಗೆ ಕಟ್ಟುವ ಗಂಟೆ, ವ್ಯಾಸಪೀಠ, ಬಿಂದಿಗೆಗಳು, ನಾಣ್ಯಗಳು, ದೇಶ- ವಿದೇಶಗಳ ಕರೆನ್ಸಿಗಳು, ಸಿಗರೇಟ್ ಲೈಟರ್‌ಗಳು ಹೀಗೆ ಹತ್ತು ಹಲವು ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ.

ADVERTISEMENT

ಇವೆಲ್ಲವೂ ಒಂದು ಕಾಲದಲ್ಲಿ ಜನರ ಬಳಕೆಯ ವಸ್ತುಗಳೇ. ಕಾಲ ಬದಲಾದಂತೆ ಹೊಸ ಹೊಸ ವೈಜ್ಞಾನಿಕ ಉಪಕರಣಗಳು, ವಸ್ತುಗಳು ಜನರನ್ನು ಆಕರ್ಷಿಸುತ್ತಿದ್ದಂತೆ ಹಳೆಯ ವಸ್ತುಗಳು ಮೂಲೆ ಸೇರುತ್ತಿವೆ. ಇವುಗಳ ಸಂಗ್ರಾಹಕರಾಗಿ ಹರೀಶ್ ಕಾರ್ಯಪ್ರವೃತ್ತರಾಗಿದ್ದಾರೆ.

ಹರೀಶ್ ಅವರ ಮನೆಯ ಒಳಹೊಕ್ಕುವ ಮುನ್ನವೇ ಎತ್ತಿನ ಗಾಡಿಯೊಂದು ಕಂಡು ಬರುತ್ತದೆ. ಇದು ಉಪಯೋಗಕ್ಕೆ ಇರಿಸಿದ್ದಲ್ಲ. ಕೇವಲ ವೀಕ್ಷಣೆಗೆ ಮಾತ್ರ.

‘ಎತ್ತಿನ ಗಾಡಿಯನ್ನು ಗುಂಡ್ಲುಪೇಟೆಯಿಂದ ಖರೀದಿಸಲಾಗಿದೆ. ಗಾಡಿಗೆ ಹಾಗೂ ಸಾಗಾಟಕ್ಕೆ ₹ 7,500 ವೆಚ್ಚವಾಗಿದೆ’ ಎನ್ನುವ ಹರೀಶ್ ಈ ಎತ್ತಿನ ಗಾಡಿಯನ್ನು ಜಿಲ್ಲಾ ಜಾನಪದ ಪರಿಷತ್ತು ವತಿಯಿಂದ 2019ರಲ್ಲಿ ಏರ್ಪಡಿಸಲಾಗಿದ್ದ ಜಾನಪದ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಿ ಮೆಚ್ಚುಗೆ ಗಳಿಸಿದ್ದರು. ಎತ್ತಿನ ಗಾಡಿ ಖರೀದಿಸಲು ಮಡಿಕೇರಿ ಕುಶಾಲನಗರ ಗೋಣಿಕೊಪ್ಪಲು ಮತ್ತಿತರ ಭಾಗಗಳಲ್ಲಿ ಸುತ್ತಾಡಿದ್ದಾರೆ. ಕೊನೆಗೆ ಗುಂಡ್ಲುಪೇಟೆಯಲ್ಲಿ ಖರೀದಿಸಿದ್ದಾರೆ.

ಮೈಸೂರಿನ ಜಟಕಾವನ್ನು ಖರೀದಿಸಿ ಮನೆಯಲ್ಲಿರಿಸುವ ಆಲೋಚನೆಯನ್ನು ಹೊಂದಿದ್ದಾರೆ. ಸ್ಟುಡಿಯೊದವರು ಉಪಯೋಗಿಸದೆ ಬಿಟ್ಟ ಹಳೆ ಕ್ಯಾಮೆರಾಗಳನ್ನು ಹೊತ್ತು ತಂದಿದ್ದಾರೆ. ಮೂರ್ನಾಡಿನ ಅಂಗಡಿಯೊಂದರಲ್ಲಿ ಉಪಯೋಗವೇ ಇಲ್ಲದೆ ಬಿದ್ದಿದ್ದ ಕಾಯಿನ್ ಬೂತ್ ಅನ್ನು ಕೇಳಿ ತಂದಿದ್ದಾರೆ. ಹೀಗೆ ಹೋದಲೆಲ್ಲಾ ಇವರ ದೃಷ್ಟಿಗೆ ಬೀಳುವ ಹಳೆಯ ವಸ್ತುಗಳು ಇವರ ಸಂಗ್ರಹಾಲಯದಲ್ಲಿ ಶೇಖರಣೆಗೊಳ್ಳುತ್ತಿವೆ.

‘ಇದೋ ನೋಡಿ, ವಿಶೇಷವಾದ ಚಾಕು. ಹತ್ತು ವರ್ಷಗಳ ಹಿಂದೆ ನೇಪಾಳಕ್ಕೆ ಪ್ರವಾಸ ಹೋಗಿದ್ದಾಗ ₹ 100 ಕೊಟ್ಟು ಖರೀದಿಸಿದ್ದು. ಇದು 40 ವರ್ಷಗಳ ಹಿಂದಿನ ತಾಮ್ರದ ಬಿಂದಿಗೆ. ತಾಯಿಯ ಮದುವೆಯ ಸಮಯದಲ್ಲಿ ಖರೀದಿಸಿದ್ದು. ನನ್ನ ಸ್ನೇಹಿತ ಭತ್ತದ ಬೇಸಾಯ ಮಾಡುತ್ತಾನೆ. ಈಗೆಲ್ಲಾ ಯಂತ್ರೋಪಕರಣಗಳು ಬಂದಿವೆ. ನೊಗ-ನೇಗಿಲು ಮೂಲೆ ಸೇರಿದೆ. ಮೂಲೆ ಗುಂಪಾದ ನೊಗ- ನೇಗಿಲುಗಳನ್ನು ಕೊಂಡು ತಂದಿದ್ದೇವೆ ನೋಡಿ’ ಹೀಗೆ ಹತ್ತು ಹಲವು ವಸ್ತುಗಳನ್ನು ಆಸಕ್ತಿಯಿಂದ
ಖರೀದಿಸಿದ ಕತೆಯನ್ನು ಹರೀಶ್ ಮುಂದಿಡುತ್ತಾರೆ.

ತಾವು ಸಂಗ್ರಹಿಸಿದ ಹಳೆಯ ವಸ್ತುಗಳೊಂದಿಗೆ ಕಿಗ್ಗಾಲು ಗ್ರಾಮದ ಕಿಗ್ಗಾಲು ಗ್ರಾಮದ ಹರೀಶ್ ಅವರ ಮನೆಯಲ್ಲಿ ಹಳೆಯ ವಸ್ತುಗಳ ಸಂಗ್ರಹ.


ಇಂಪಾದ ಸಂಗೀತ ಆಲಿಸಲು ಇಂದು ಬಗೆಬಗೆಯ ಸಾಧನಗಳು ಬಂದಿವೆ.
ಕೈಗೆಟುಕುವ ದರದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಲಭಿಸುತ್ತಿವೆ. ಚಿಪ್‌ಗಳು, ಪೆನ್ ಡ್ರೈವ್ ಬಳಕೆಯಾಗುತ್ತಿವೆ. ಮೊಬೈಲ್‌ನಲ್ಲೂ ಹಾಡು ಕೇಳಬಹುದಾಗಿದೆ. ಇಂಟರ್‌ನೆಟ್‌ನಿಂದ ಹಾಡುಗಳನ್ನು ಆಲಿಸಬಹುದಾಗಿದೆ. ಹೀಗಿರುವಾಗ ಹಳೆಯ ರೇಡಿಯೊಗಳು ಟೇಪ್ ರೆಕಾರ್ಡರ್‌ಗಳು,  ಗ್ರಾಮಾಫೋನ್ ಗಳು, ಕ್ಯಾಸೆಟ್ ಪ್ಲೇಯರ್‌ಗಳು ಮೂಲೆಗುಂಪಾಗಿವೆ. ಇವುಗಳನ್ನೆಲ್ಲಾ ಹರೀಶ್ ಸಂಗ್ರಹಿಸಿಟ್ಟಿದ್ದಾರೆ.  ಅಷ್ಟೇ ಅಲ್ಲ ಮನೆಯಲ್ಲಿ ಬಳಕೆಗೆ 40ರಿಂದ 50 ನೂತನವಾದ ಸಂಗೀತ ಸಾಧನಗಳು ಇವರ ಬಳಿ ಇವೆ.

‘ಹಳೆಯ ವಸ್ತುಗಳನ್ನು ಬಳಸಲಾರದೆ ಮೂಲೆಗೆ ಎಸೆಯುತ್ತೇವೆ. ಮುಂದಿನ ತಲೆಮಾರಿಗೆ ಈ ವಸ್ತುಗಳ ಪರಿಚಯವೇ ಇರುವುದಿಲ್ಲ. ಮಕ್ಕಳಿಗೆ ಅವುಗಳನ್ನು ಪರಿಚಯ ಮಾಡಿಸುವ ಉದ್ದೇಶದಿಂದ ಹಳೆಯ ವಸ್ತುಗಳ ಸಂಗ್ರಹಕ್ಕೆ ಮನಸ್ಸು ಮಾಡಿದ್ದೇನೆ. ವಸ್ತುಗಳನ್ನು ಜೋಡಿಸಿಡಲು ಮನೆಯಲ್ಲಿ ಸಾಕಷ್ಟು ಸ್ಥಳಾವಕಾಶವಿರುವುದರಿಂದ ಸಮಸ್ಯೆ ಇಲ್ಲ ಎನ್ನುತ್ತಾರೆ’ ಹರೀಶ್.

ಹಳೆಯ ವಸ್ತುಗಳನ್ನು ಸಂಗ್ರಹಿಸುವ ಸಂದರ್ಭ ಹರೀಶ್ ಅವರಿಗೆ ವಿಭಿನ್ನ ಅನುಭವಗಳಾಗಿವೆ. ಬೇಡವೆಂದು
ಎಸೆಯುವ ವಸ್ತುಗಳನ್ನು ಹಲವರು ಖುಷಿಯಿಂದ ಕೊಡುತ್ತಾರೆ. ಮತ್ತೆ ಕೆಲವರು ಕೊಡುವ ಮನಸ್ಸು ಮಾಡಿ ಬಳಿಕ ಕೊಡಲು ಹಿಂದೇಟು ಹಾಕುತ್ತಾರೆ. ಇವರಿಗೇನೋ
ಲಾಭ ಇದೆ ಎನ್ನುವವರೂ ಇದ್ದಾರೆ. ಇನ್ನು ಕೆಲವರು ದುಪ್ಪಟ್ಟು ದರ ಕೇಳುತ್ತಾರೆ.

‘ವಿಭಿನ್ನ ಮನೋಭಾವದ ಜನರನ್ನು ಸಂಪರ್ಕಿಸಿ ಸಾಕಷ್ಟು ವಸ್ತುಗಳನ್ನು ಸಂಗ್ರಹಿಸಿದ್ದೇನೆ. ಮತ್ತಷ್ಟು
ಹಳೆಯ ವಸ್ತುಗಳನ್ನು ಸಂಗ್ರಹಿಸಿ ಮನೆಯನ್ನು ಮಿನಿ ವಸ್ತುಸಂಗ್ರಹಾಲಯವಾಗಿ ರೂಪಿಸುತ್ತೇನೆ’  ಎಂದು ಹರೀಶ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.