ADVERTISEMENT

ನಾಪೋಕ್ಲು | ಸುರಿಯುತ್ತಿರುವ ಉತ್ತಮ ಮಳೆ: ಹಸಿರುಕ್ಕಿಸಿದ ಕಾಫಿತೋಟಗಳು

ಮತ್ತೆ ಜೀವಕಳೆ ತಳೆದ ತೋಟಗಳು, ಎಲ್ಲೆಡೆ ಸಂಭ್ರಮ

ಸಿ.ಎಸ್.ಸುರೇಶ್
Published 24 ಮೇ 2024, 6:58 IST
Last Updated 24 ಮೇ 2024, 6:58 IST
ನಾಲ್ಕುನಾಡಿನ ವ್ಯಾಪ್ತಿಯಲ್ಲಿ ಸುರಿದ ಉತ್ತಮ ಮಳೆಯಿಂದ ಕಾಫಿಗಿಡಗಳು ಕಂಗೊಳಿಸುತ್ತಿರುವುದು
ನಾಲ್ಕುನಾಡಿನ ವ್ಯಾಪ್ತಿಯಲ್ಲಿ ಸುರಿದ ಉತ್ತಮ ಮಳೆಯಿಂದ ಕಾಫಿಗಿಡಗಳು ಕಂಗೊಳಿಸುತ್ತಿರುವುದು   

ನಾಪೋಕ್ಲು: ಈ ವರ್ಷ ಹಿಂದಿನ ಎಲ್ಲ ವರ್ಷಗಳಿಗಿಂತ ಬಿಸಿಲಿನ ಬೇಗೆ ಹೆಚ್ಚಾಗಿ, ಬಾಡುತ್ತಿದ್ದ ಕಾಫಿತೋಟಗಳಿಗೆ ಈಚೆಗೆ ಸುರಿದ ಸಮೃದ್ಧ ಮಳೆಯಿಂದ ಜೀವ ಕಳೆ ಮರಳಿದೆ. ಹೂಮಳೆಯೂ ಬಾರದೇ, ಒಂದು ಹನಿಯೂ ಹನಿಯದೇ, ಕಂಗಾಲಾಗಿದ್ದ ಬೆಳೆಗಾರರು ಇದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಬೇಸಿಗೆ ಹೇಗಿತ್ತೆಂದರೆ, ಅಂತರ್ಜಲ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ತೋಟಗಳ ಕೆರೆಗಳು ಮಾತ್ರವಲ್ಲ, ಕೊಳವೆಬಾವಿಗಳೂ ಬತ್ತಿ ಹೋಗಿದ್ದವು. ಬಹುತೇಕ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿತ್ತು. ಇದರಿಂದ ತೋಟವನ್ನು ಕಾಪಾಡಿಕೊಳ್ಳಲು ಬೆಳೆಗಾರರು ಇನ್ನಿಲ್ಲದ ಪಡಿಪಾಟೀಲು ಅನುಭವಿಸಿದ್ದರು.

ತೋಟದೊಳಗಿನ ಕೆರೆಗಳು ಬತ್ತಿದ ನಂತರ ಹೊಳೆ, ತೋಡುಗಳಿಂದ ನೀರು ಪಡೆಯುವ ಬೆಳೆಗಾರರ ಚಿಂತನೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿತು. ಹೊಳೆಗಳಿಂದ ನೀರು ಎತ್ತುವುದನ್ನು ಸಂಪೂರ್ಣ ನಿಷೇಧಿಸಿತು. ಇದು ಬೆಳೆಗಾರರ ಆಕ್ರೋಶಕ್ಕೂ ಕಾರಣವಾಗಿತ್ತು.

ADVERTISEMENT

ಮೇ ತಿಂಗಳ ಬಿಸಿಲ ಝಳದ ನಡುವೆ ನಾಲ್ಕುನಾಡಿನಲ್ಲಿ ರೈತರು ಕೆರೆ ವಿಸ್ತರಣೆಯಲ್ಲಿ ತೊಡಗಿದ್ದರು. ಗದ್ದೆಗಳಲ್ಲಿ ಇದ್ದ ಪುಟ್ಟ ಕೃಷಿಹೊಂಡಗಳನ್ನು ಹಿಗ್ಗಿಸುವ, ಕೆರೆಯನ್ನು ವಿಸ್ತರಿಸುವ ಕಾರ್ಯವನ್ನೂ ಮಾಡಿದರು. ಪ್ರತಿವರ್ಷ ಫೆಬ್ರುವರಿ ಕೊನೆಯ ವಾರ ತಪ್ಪಿದಲ್ಲಿ ಮಾರ್ಚ್ ಮೊದಲ ವಾರದಲ್ಲಿ ನಾಲ್ಕು ನಾಡಿನಲ್ಲಿ ಮಳೆ ಸುರಿದು ಕಾಫಿ ಬೆಳೆಗಾರರು ಸಂತಸಗೊಳ್ಳುತ್ತಿದ್ದರು. ಕಾಫಿಯ ತೋಟಗಳಲ್ಲಿ ಹೂಗಳು ಅರಳಿ ಬೆಳೆಗಾರರಿಗೆ ಆರ್ಥಿಕ ಚೈತನ್ಯದ ಭರವಸೆ ನೀಡುತ್ತಿತ್ತು. ಈ ವರ್ಷ ಮಳೆಯ ಕೊರತೆ ಬಹುತೇಕ ಬೆಳೆಗಾರರನ್ನು ಕಾಡಿತ್ತು. ತೋಟಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕಾಫಿಯ ಹೂಗಳು ಅರಳದೆ ಇಳುವರಿಗೆ ಹೊಡೆತ ಬೀಳುವ ಆತಂಕದಲ್ಲಿದ್ದರು.

ಕೆರೆ, ತೋಡುಗಳಿಂದ ಕೃತಕ ನೀರಾವರಿ ಮೂಲಕ ನೀರು ಹಾಯಿಸುತ್ತಿರುವವರು ಸಂಕಷ್ಟಕ್ಕೀಡಾಗಿದ್ದರು. ತೋಡುಗಳ ನೀರಿನ ಮೂಲಗಳು ಬತ್ತಿ ಹೋಗಿದ್ದು, ಕೆರೆಗಳಲ್ಲಿ ನೀರು ತಳ ತಲುಪಿತ್ತು. ಕಾಫಿಯ ತೋಟಗಳಿಗೆ ನೀರು ಹಾಯಿಸಲೆಂದು ಕೆರೆ ವ್ಯವಸ್ಥೆ ಮಾಡಿಕೊಂಡ ಹಲವು ಬೆಳೆಗಾರರಿಗೆ ನೀರಿನ ಕೊರತೆ ಕಾಡಿತ್ತು.

ಕಾಫಿ ಇಳುವರಿಯನ್ನು ಹೆಚ್ಚಿಸಿಕೊಳ್ಳಲು ಕೆರೆಗಳು, ಕೃಷಿಹೊಂಡಗಳು ನೆರವಾಗುತ್ತಿದ್ದವು. ಈ ವರ್ಷ ಬಹುತೇಕ ಬೆಳೆಗಾರರಿಗೆ ಕೃಷಿ ಹೊಂಡಗಳಿಂದ ತೋಟಗಳಿಗೆ ನೀರು ಪೂರೈಕೆ ಸಾಧ್ಯವಾಗಿರಲಿಲ್ಲ. ಒಂದು ಶಿಫ್ಟ್ ಅಂದರೆ ಕನಿಷ್ಠ 4 ಗಂಟೆಗಳ ಕಾಲ ಕಾಫಿ ಹೂ ಅರಳಿಸಲು ನೀರು ಹಾಯಿಸಬೇಕಾದ ಅನಿವಾರ್ಯತೆ ಇದೆ. ಅಷ್ಟು ಪ್ರಮಾಣದಲ್ಲಿ ನೀರು ಸಿಗದೇ ಅರ್ಧಂಬರ್ಧ ನೀರು ಹಾಯಿಸಿ ಕೈಬಿಟ್ಟಿದ್ದರು.

ಏಪ್ರಿಲ್ ಕಳೆದರೂ ಮಳೆ ಬಾರದಿರುವುದನ್ನು ಕಂಡು ಬೆಳೆಗಾರರೆಲ್ಲರೂ ಚಿಂತಾಕ್ರಾಂತರಾಗಿರುವ ಹೊತ್ತಿನಲ್ಲಿ ದೇವಲೋಕದಿಂದ ಗಂಗೆ ಬಂದಂತೆ, ಅಮೃತ ಸುರಿದಂತೆ ಮಳೆ ಹಿತವಾಗಿ ಸುರಿಯಿತು. ಇದರಿಂದ ಕಾಫಿಗಿಡಗಳಿಗೂ ಹೊಸದಿಂದ ಚೈತನ್ಯ ಬಂದಿತು. ಬೆಳೆಗಾರರೂ ಕೊಂಚ ನಿರಾಳರಾದರು.

ಮುಂಗಾರಿಗೂ ಮುಂಚಿತವಾಗಿ ಸುರಿದ ಉತ್ತಮ ಮಳೆಯಿಂದ ತೋಟದೊಳಗಿನ ಬಹುತೇಕ ಕೆರೆಗಳ ಭರ್ತಿಯಾಗಿವೆ. ಕೃಷಿ ಹೊಂಡಗಳೂ ನೀರಿನಿಂದ ತುಂಬಿವೆ. ಬತ್ತಿದ ಕೊಳವೆಬಾವಿಗಳಲ್ಲಿ ನೀರು ಬರತೊಡಗಿವೆ.

‘ಈ ವರ್ಷ ನೀರಿನ ಕೊರತೆಯಿಂದ ತೋಟಗಳಿಗೆ ನೀರು ಹಾಯಿಸಲು ಸಾಧ್ಯವಾಗಿಲ್ಲ. ಉತ್ತಮ ಇಳುವರಿ ಬೇಕಾದಲ್ಲಿ ತೋಟಗಳಿಗೆ ಸಕಾಲದಲ್ಲಿ ನೀರು ಹಾಯಿಸಲೇಬೇಕು. ಇಂತಹ ಪರಿಸ್ಥಿತಿಯಲ್ಲಿ ಕೆರೆ ವಿಸ್ತರಣೆ ಅನಿವಾರ್ಯವಾಗಿದ್ದು ಇದೀಗ ಮಳೆಯಿಂದಾಗಿ ಕೆರೆಗಳು ಭರ್ತಿಯಾಗಿವೆ’ ಎನ್ನುತ್ತಾರೆ ಬೇತು ಗ್ರಾಮದ ಕೃಷಿಕ ನಾರಾಯಣ. 

ನಾಲ್ಕುನಾಡಿನ ವ್ಯಾಪ್ತಿಯಲ್ಲಿ ಮಳೆಯಿಂದ ಜೀವಕಳೆ ಪಡೆದ ಕಾಫಿ ತೋಟಗಳು
ನಾಲ್ಕುನಾಡಿನ ವ್ಯಾಪ್ತಿಯಲ್ಲಿ ಜೀವಕಳೆ ತಳೆದ ಕಾಫಿತೋಟಗಳು
ನಾಪೋಕ್ಲು ಹೊರವಲಯದಲ್ಲಿ ಖಾಲಿಯಾಗಿದ್ದ ಕೆರೆಯೊಂದು ಮಳೆಯಿಂದಾಗಿ ಭರ್ತಿಯಾಗಿದೆ.
ಕಾಫಿ ತೋಟಕ್ಕೆ ನೀರು ಹಾಯಿಸಲು ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿನ ಕೆರೆಯೊಂದನ್ನು ವಿಸ್ತರಿಸಿದ್ದು ಈಚೆಗೆ ಸುರಿದ ಮಳೆಯಿಂದಾಗಿ ಭರ್ತಿಯಾಗಿದೆ.
ನಾಪೋಕ್ಲುವಿನಲ್ಲಿ ಮಳೆಯಿಂದಾಗಿ ತೋಡುಗಳಲ್ಲಿ ನೀರು ತುಂಬಿ ಹರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.