ಸುಂಟಿಕೊಪ್ಪ: ಸಮೀಪದ ಹರದೂರು ಗ್ರಾಮ ಪಂಚಾಯತಿಗೆ ಸೇರಿದ ಮುತ್ತಿನ ತೋಟದ ಬಳಿ ಬದುಕು ಸಾಗಿಸುತ್ತಿರುವ ವೃದ್ದ ದಂಪತಿಗಳಾದ ಮಾಯಿಲ (83) ಗಿರಿಜಾ (75) ಅವರ ನೆರವಿಗೆ ಜಿಲ್ಲಾಡಳಿತ ಮುಂದಾಗಬೇಕು ಎಂದು ವಿದ್ಯಾರ್ಥಿನಿ ಶ್ರೀಶಾ ಒತ್ತಾಯಿಸಿದ್ದಾರೆ.
ಇವರನ್ನು ಸಾಕಲು ಮಕ್ಕಳಿಲ್ಲ, ತಿನ್ನಲು ಕೇವಲ ಪಡಿತರ ಅಕ್ಕಿಯನ್ನೇ ಅವಲಂಬಿಸಿದ್ದಾರೆ, ಕೇವಲ ಪತ್ನಿಯ ತಿಂಗಳ ಪಿಂಚಣಿಯಲ್ಲಿಯೇ ಬದುಕು ಸಾಗಿಸುತ್ತಿರುವ ಈ ಬಡ ದಂಪತಿಗಳ ಕಡೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಶ್ರೀಶಾ ಹೇಳಿದ್ದಾರೆ.
ಇವರು ಮಣ್ಣಿನಿಂದ ನಿರ್ಮಿಸಿದ ಈಗಲೂ, ಆಗಲೂ ಬೀಳುವ ಸ್ಥಿತಿಯಲ್ಲಿಯೇ ಭಯದಿಂದಲೇ ಬದುಕು ಸಾಗಿಸುತ್ತಿರುವುದು ಮಾನವ ಸಮಾಜ ತಲೆ ತಗ್ಗಿಸುವಂತಹ ಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಭಸದಿಂದ ಬೀಸುವ ಮಳೆ, ಗಾಳಿಗೆ ಎಲ್ಲಿ ಬೀಳುತ್ತದೋ ಎಂದು ಹೆದರಿಕೆಯಿಂದಲೇ ಸರಿಯಾಗಿ ನಿದ್ದೆ ಮಾಡದೆ ದಿನ ದೂಡುತ್ತಿದ್ದಾರೆ. ಪತಿ ಅನಾರೋಗ್ಯ ಪೀಡಿತರಾಗಿದ್ದು, ಸರಿಯಾಗಿ ಕಿವಿ ಕೇಳದೆ ಕಣ್ಣು ಕಾಣದ ಸ್ಥಿತಿಯಲ್ಲಿದ್ದರೂ ತಮ್ಮ ಪಿಂಚಣಿ ಹಣದಿಂದ ದಿನನಿತ್ಯದ ಸಾಮಗ್ರಿಗಳನ್ನು ಮತ್ತು ಪಡಿತರ ಅಕ್ಕಿಯನ್ಬು ತಂದು ಬೇಯಿಸಿ ಕೊಡುವುದರ ಮೂಲಕ ಆ ವೃದ್ದ ಪತ್ನಿ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶ್ರೀಶಾ, ‘ಇಂತಹ ಬದುಕು ಶತೃಗಳಿಗೂ ಬರಬಾರದು. ಯಾರೂ ಕೂಡ ಈ ದಂಪತಿಗಳ ಸಹಾಯಕ್ಕೆ ಬರದಿರುವುದು ವಿಪರ್ಯಾಸ. ತಾನು ಈ ಬಗ್ಗೆ ಜಿಲ್ಲಾಧಿಕಾರಿಗಳು, ಶಾಸಕರು, ಹರದೂರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿ ಆ ಬಡ ವಯೋವೃದ್ಧ ದಂಪತಿಗಳಿಗೆ ಒಂದು ಕೋಣೆಯ ಮನೆಯನ್ನಾದರೂ ಕಟ್ಟಿಸಲು ಮನವಿ ಮಾಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.