ADVERTISEMENT

ಕೊಡಗು : ಮತ್ತೆ ಮೂರಂಕಿ ದಾಟಿದ ಎಚ್‌ಐವಿ ಸೋಂಕಿತರ ಸಂಖ್ಯೆ!

ಜಿಲ್ಲೆಯಲ್ಲಿ ತುಸು ಏರುಮುಖ ಕಂಡ ಏಡ್ಸ್, ಆರೋಗ್ಯ ಇಲಾಖೆಯಿಂದ ನಿರಂತರ ಜಾಗೃತಿ

ಕೆ.ಎಸ್.ಗಿರೀಶ್
Published 1 ಡಿಸೆಂಬರ್ 2023, 4:55 IST
Last Updated 1 ಡಿಸೆಂಬರ್ 2023, 4:55 IST
ಎಚ್‌ಐವಿ ಸೋಂಕಿತರ ಸಂಖ್ಯೆ ಇಳಿಮುಖ !
ಎಚ್‌ಐವಿ ಸೋಂಕಿತರ ಸಂಖ್ಯೆ ಇಳಿಮುಖ !   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದೆರಡು ಸಾಲಿಗೆ ಹೋಲಿಸಿದರೆ ಎಚ್‌ಐವಿ ಸೋಂಕಿತರು ಹಾಗೂ ಏಡ್ಸ್‌ ರೋಗಿಗಳ ಸಂಖ್ಯೆ ತುಸು ಏರಿಕೆಯಾಗುತ್ತಿದೆ. ಕೇವಲ ಎರಡೇ ಅಂಕಿಗಳಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ ಮೂರಂಕಿ ದಾಟಿದೆ. ಈ ವರ್ಷವೂ ಶತಕ ಪೂರೈಸುವತ್ತ ಮುನ್ನಡೆದಿದೆ.

2016–17ನೇ ಸಾಲಿನಲ್ಲಿ 158 ಇದ್ದ ಸೋಂಕಿತರ ಸಂಖ್ಯೆ ನಂತರ 2020–21ರವರೆಗೂ ಪ್ರತಿ ವರ್ಷ ನೂರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ಆದರೆ, 2020–21ರಲ್ಲಿ 67, 2021–22ರಲ್ಲಿ 78 ಮಂದಿಯಲ್ಲಿ ಮಾತ್ರವೇ ಸೋಂಕು ಪತ್ತೆಯಾಗಿತ್ತು. ಆದರೆ, ಕಳೆದ ಸಾಲಿನಲ್ಲಿ ಅಂದರೆ 2022–23ನೇ ಸಾಲಿನಲ್ಲಿ ಸೋಂಕಿತರ ಸಂಖ್ಯೆ 117ಕ್ಕೆ ಮುಟ್ಟಿತು. ಪ್ರಸಕ್ತ ಸಾಲಿನಲ್ಲೂ ಅಕ್ಟೋಬರ್‌ವರೆಗೆ ಸೋಂಕಿತರ ಸಂಖ್ಯೆ 60ರ ಗಡಿ ತಲುಪಿದೆ. ಈ ಬಾರಿ ಸೋಂಕು 8 ಮಂದಿ ಗರ್ಭಿಣಿಯರು ಹಾಗೂ 6 ಮಂದಿ ಮಕ್ಕಳಲ್ಲೂ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

ಕೊಡಗು ಜಿಲ್ಲೆಯಲ್ಲಿ 44 ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಿವೆ. ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ 1 ಎಆರ್‌ಟಿ ಕೇಂದ್ರವಿದೆ. 4 ಲಿಂಕ್ ಎಆರ್‌ಟಿ ಕೇಂದ್ರಗಳು ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಹಾಗೂ ಗೋಣಿಕೊಪ್ಪಲುವಿನಲ್ಲಿವೆ. ಇಲ್ಲಿ ಉಚಿತವಾಗಿ ಔಷಧವನ್ನು ವಿತರಿಸಲಾಗುತ್ತಿದೆ. 7 ಇಐಡಿ ಕೇಂದ್ರಗಳಿದ್ದು, ಆಶೋದಯ ಸಮಿತಿ, ಒಡಿಪಿ ಹಾಗೂ ಸ್ನೇಹಾಶ್ರಾಯ ಸಮಿತಿ, ಸರ್ವೋದಯ ಎಚ್‌ಐವಿ ಬಾಧಿತರ ಸಂಘಗಳು ಎಚ್‌ಐವಿ ಪೀಡಿತರ ನೆರವಿಗೆ ನಿಂತಿವೆ.

ADVERTISEMENT

ಎಆರ್‌ಟಿ ಕೇಂದ್ರವು ಜಿಲ್ಲೆಯಲ್ಲಿ 2009ರಲ್ಲಿ ಆರಂಭವಾಗಿದ್ದು, ಅಕ್ಟೋಬರ್‌ವರೆಗೆ ಇಲ್ಲಿ 2,563 ಎಚ್‌ಐವಿ ಸೋಂಕಿತರು ನೋಂದಾವಣೆಗೊಂಡಿದ್ದರು. ಇವರ ಪೈಕಿ 2,168 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಪೊನ್ನಂಪೇಟೆಯಲ್ಲೇ ಅಧಿಕ!

ಎಚ್‌ಐವಿ ಸೋಂಕಿತರ ಅಂಕಿಅಂಶಗಳನ್ನು ಗಮನಿಸಿದರೆ ಪೊನ್ನಂಪೇಟೆ ತಾಲ್ಲೂಕಿನಲ್ಲೇ ಅತ್ಯಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಇಲ್ಲಿ 18 ಮಂದಿಯಲ್ಲಿ ಎಚ್‌ಐವಿ ಪತ್ತೆಯಾಗಿದೆ. ಕಳೆದ ಸಾಲಿನಲ್ಲಿ ವಿರಾಜಪೇಟೆ ತಾಲ್ಲೂಕು ಒಳಗೊಂಡಂತೆ 51 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇನ್ನುಳಿದವಂತೆ, ಪ್ರಸಕ್ತ ಸಾಲಿನಲ್ಲಿ ಸೋಮವಾರಪೇಟೆಯಲ್ಲಿ 13, ವಿರಾಜಪೇಟೆ ತಾಲ್ಲೂಕಿನಲ್ಲಿ 10, ಮಡಿಕೇರಿ ತಾಲ್ಲೂಕಿನಲ್ಲಿ 9 ಹಾಗೂ ಕುಶಾಲನಗರದಲ್ಲಿ ಕೇವಲ 3 ಮಂದಿಯಲ್ಲಷ್ಟೇ ಸೋಂಕು ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.