ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಕ್ರೀಡೆ ಮತ್ತು ಸಾಂಸ್ಕೃತಿಕ ಕೇಂದ್ರ ಎನ್ನಿಸಿಕೊಂಡಿರುವ ಪೊನ್ನಂಪೇಟೆ ಮತ್ತೊಂದು ಹಾಕಿ ಹಬ್ಬಕ್ಕೆ ಅಣಿಯಾಗುತ್ತಿದೆ.
ಅ.24ರಿಂದ 30ರವರೆಗೆ ಮೈಸೂರು ವಿಭಾಗ ಮಟ್ಟ ಮತ್ತು ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪೌಢಶಾಲಾ ವಿದ್ಯಾರ್ಥಿಗಳ ಹಾಕಿ ಪಂದ್ಯಗಳು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ನಡೆಯಲಿವೆ.
ಇದಕ್ಕಾಗಿ ಟರ್ಫ್ ಮೈದಾನವನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಟೂರ್ನಿ ಸಂಚಾಲಕ ಹಾಗೂ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತರಬೇತುದಾರ ಡ್ಯಾನಿ ಈರಪ್ಪ ತಮ್ಮ ಸಹಪಾಠಿಗಳೊಡನೆ ನಿರತರಾಗಿದ್ದಾರೆ. ಮೈದಾನದ ಸುತ್ತ ಸ್ವಚ್ಛಗೊಳಿಸಿ ಅಗತ್ಯವಿರುವ ಕಡೆ ನೀರು ಸಿಂಪಡಿಸಿದ್ದಾರೆ. ಗೋಲ್ ಪೋಸ್ಟ್, ಮೈದಾನದ ಮಾರ್ಕಿಂಗ್ ಮೊದಲಾದವುಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಮೈದಾನ ಒಣಗದಂತೆ ನೀರು ಹಾಯಿಸಿ ಹಸಿರುಗೊಳಿಸಿದ್ದಾರೆ.
ವಿಭಾಗ ಮಟ್ಟದ ಟೂರ್ನಿ ಸೆ.24 ಮತ್ತು 25ರಂದು ನಡೆಯಲಿದೆ. 14ರ ವಯೋಮಾನದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರು, ಹಾಸನ, ಮಂಗಳೂರು, ಕೊಡಗು ಜಿಲ್ಲೆಗಳ 4 ತಂಡಗಳು ಪಾಲ್ಗೊಳ್ಳಲಿವೆ. ಬಾಲಕಿಯರ ವಿಭಾಗದಲ್ಲಿ ಕೊಡಗು, ಹಾಸನ ಮತ್ತು ಮಂಗಳೂರು ಜಿಲ್ಲೆಯ 3 ತಂಡಗಳು ಭಾಗವಹಿಸಲಿವೆ.
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಮೈಸೂರು, ಹಾಸನ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 4 ತಂಡಗಳು ಭಾಗವಹಿಸಲಿವೆ. ಬಾಲಕಿಯರ ವಿಭಾಗದಲ್ಲಿ ಕೊಡಗು, ಹಾಸನ ಮತ್ತು ಮಂಗಳೂರು ತಂಡಗಳು ಮಾತ್ರ ಪಾಲ್ಗೊಳ್ಳಲಿವೆ.
ಇದೇ ಮೈದಾನದಲ್ಲಿ ರಾಜ್ಯಮಟ್ಟದ ಪಂದ್ಯಗಳೂ ಸೆ.26ರಿಂದ 30 ರವರೆಗೆ ನಡೆಯಲಿವೆ. ರಾಜ್ಯದ 4 ವಿಭಾಗದಲ್ಲಿ ವಿಜೇತರಾದ ತಂಡಗಳು ರಾಜ್ಯಮಟ್ಟದ ಟೂರ್ನಿಯಲ್ಲಿ ಸೆಣಸಾಡಲಿವೆ. ಇದರಲ್ಲಿ 14ರ ವಯೋಮಾನದೊಳಗಿನ ಬಾಲಕ ಮತ್ತು ಬಾಲಕಿಯ ವಿಭಾಗದಲ್ಲಿ ತಲಾ 3 ತಂಡಗಳು ಭಾಗವಹಿಸಲಿವೆ. 17ರ ವಯೋಮಾನದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಸ್ಪೋರ್ಟ್ಸ್ ಹಾಸ್ಟೆಲ್ ತಂಡ ಸೇರಿದಂತೆ ತಲಾ 5 ತಂಡಗಳು ಪಾಲ್ಗೊಳ್ಳಲಿವೆ. ಒಟ್ಟು 7 ದಿನಗಳ ಕಾಲ ದಕ್ಷಿಣ ಕೊಡಗಿನ ಕ್ರೀಡಾ ಪ್ರೇಮಿಗಳು ಹಾಕಿ ಆಟದ ರಸದೌತಣ ಸವಿಯಲಿದ್ದಾರೆ.
ಸೆ.24ರಂದು ಮಧ್ಯಾಹ್ನ 2 ಗಂಟೆಗೆ ಜಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸ್‌ರಾಜ್ ಟೂರ್ನಿ ಉದ್ಘಾಟಿಸಲಿದ್ದಾರೆ. ಶಾಸಕ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಡಾ.ಮಂತರ್‌ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜ ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಹೊರ ಜಿಲ್ಲೆಗಳ ಆಟಗಾರರು ಆರಂಭಿಸಿದ್ದು, ಅವರಿಗೆ ವಸತಿ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಕೊಡಗು ಹಾಕಿ ತವರೂರು ಎನ್ನಿಸಿಕೊಂಡಿರುವುದರಿಂದ ಮೈಸೂರು ವಿಭಾಗ ಮಟ್ಟ ಹಾಗೂ ರಾಜ್ಯಮಟ್ಟದ ಟೂರ್ನಿಗಳನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರ ಆಶಯದಂತೆ ಪೊನ್ನಂಪೇಟೆಯಲ್ಲಿ ನಡೆಸಲಾಗುತ್ತಿದೆ ಎಂದು ಟೂರ್ನಿಯ ಮತ್ತೊಬ್ಬ ಸಂಚಾಲಕರಾದ ರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ಎಸ್.ತಿಮ್ಮಯ್ಯ ಹೇಳಿದರು.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡ ಸಂಚಾಲಕ ಡ್ಯಾನಿ ಈರಪ್ಪ, ‘ಹೊರಗಿನಿಂದ ಬರುವ ವಿದ್ಯಾರ್ಥಿ ಆಟಗಾರರಿಗೆ ಉಳಿದುಕೊಳ್ಳಲು ಸ್ಪೋರ್ಟ್ಸ್ ಹಾಸ್ಟೆಲ್ ಮತ್ತು ಸಮಾಜಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಟೂರ್ನಿಯನ್ನು ಯಶಸ್ವಿಗೊಳಿಸಲು ಜಿಲ್ಲೆಯ ಮತ್ತು ತಾಲ್ಲೂಕಿನ ಎಲ್ಲ ದೈಹಿಕ ಶಿಕ್ಷಣ ಶಿಕ್ಷಕರು ಸಹಕರಿಸುತ್ತಿದ್ದಾರೆ’ ಎಂದು ಹೇಳಿದರು.
ಇಂದು ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ ಒಟ್ಟು 7 ದಿನಗಳ ಕಾಲ ಹಾಕಿಯ ರಸದೌತಣ ನಡೆಯಲಿವೆ ವಿಭಾಗಮಟ್ಟ, ರಾಜ್ಯಮಟ್ಟದ ಪಂದ್ಯಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.