ADVERTISEMENT

ಹಾಕಿ ಟೂರ್ನಿ: ಕೊಡಗು ಬಾಲಕ, ಬಾಲಕಿಯರ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 5:47 IST
Last Updated 26 ಅಕ್ಟೋಬರ್ 2024, 5:47 IST
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಹಾಕಿ ಟೂರ್ನಿಯಲ್ಲಿ ಜಯಗಳಿಸಿದ 17ರ ವಯೋಮಾನದೊಳಗಿನ ಕೊಡಗು ತಂಡದ ಬಾಲಕರು.
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಹಾಕಿ ಟೂರ್ನಿಯಲ್ಲಿ ಜಯಗಳಿಸಿದ 17ರ ವಯೋಮಾನದೊಳಗಿನ ಕೊಡಗು ತಂಡದ ಬಾಲಕರು.   

ಗೋಣಿಕೊಪ್ಪಲು: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಶುಕ್ರವಾರ ನಡೆದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಾಕಿ ಟೂರ್ನಿಯಲ್ಲಿ ಕೊಡಗಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ, ಬಾಲಕಿಯರು ಪಾರಮ್ಯ ಮೆರೆದರು.

17ರ ವಯೋಮಾನದೊಳಗಿನ ಪ್ರೌಢಶಾಲಾ ಹಂತದ ಕೊಡಗು ತಂಡ ಮೈಸೂರು ತಂಡದ ಎದುರು 7-0 ಗೋಲುಗಳಿಂದ ಭರ್ಜರಿ ಜಯಗಳಿಸಿತು. ಆರಂಭದಿಂದಲೂ ಎದುರಾಳಿಗಳ ವಿರುದ್ಧ ಸಾಂಘಿಕ ಹೋರಾಟ ನಡೆಸಿದ ಕೊಡಗು ತಂಡದ ಆಟಗಾರರು ಪಂದ್ಯ ಆರಂಭಗೊಂಡ ಐದೇ ನಿಮಿಷಗಳಲ್ಲಿ ಗೋಲುಗಳಿಸಿ ಜಯದ ಭರವಸೆ ಮೂಡಿಸಿದರು.

ಇದಾದ ಬಳಿಕ ಮತ್ತಷ್ಟು ದಾಳಿ ನಡೆಸಿದ ಕೊಡಗು ತಂಡ 7,9, 11, 13,16ನೇ ನಿಮಿಷದಲ್ಲಿ ಸತತ ದಾಳಿ ನಡೆಸಿ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗೋಲುಗಳ ಸುಳಿಮಳೆಗೆರದರು. ಪಂದ್ಯ ಮುಕ್ತಾಯಗೊಳ್ಳುವ ಹಂತದಲ್ಲಿ ದೊರೆತ ಫೆನಾಲ್ಟ್ ಕಾರ್ನ್‌ನಲ್ಲಿ ಮತ್ತೊಂದು ಗೋಲು ಗಳಿಸಿ ಗೋಲುಗಳ ಅಂತರ ಹೆಚ್ಚಿಸಿದರು.

ADVERTISEMENT

ಕೊಡಗು ತಂಡದ ಉತ್ತಮ ಆಟ ನೋಡಿ ಬೆದರಿದಂತೆ ಕಂಡು ಬಂದ ಮೈಸೂರು ತಂಡದ ಆಟಗಾರರು ಯಾವುದೇ ಪ್ರತಿರೋಧ ತೋರದೆ ಸುಲಭವಾಗಿ ಸೋಲಪ್ಪಿಕೊಂಡರು.

17ರ ವಯೋಮಾನದೊಳಗಿನ ಬಾಲಕಿಯರ ವಿಭಾಗದಲ್ಲಿಯೂ ಕೊಡಗು ತಂಡ 7-3 ಗೋಲುಗಳ ಅಂತರದಿಂದ ಹಾಸನ ತಂಡದ ವಿರುದ್ಧ ಜಯಗಳಿಸಿತು. ಕೊಡಗು ತಂಡದ ವಿದ್ಯಾರ್ಥಿನಿಯರು ಉತ್ತಮವಾಗಿ ಆಡಿ ಅರ್ಹ ಗೆಲುವು ದಾಖಲಿಸಿದರು.

ಕೊಡಗು ತಂಡದ ವಿದ್ಯಾರ್ಥಿನಿಯರು 22, 29ನೇ ನಿಮಿಷದಲ್ಲಿ ಸತತ ಎರಡು ಗೋಲು ಗಳಿಸಿ ಮುನ್ನಡೆ ಗಳಿಸಿದ್ದರು. ಬಳಿಕ 33ನೇ ನಿಮಿಷದಲ್ಲಿ ಹಾಸನ ತಂಡ ಒಂದು ಗೋಲುಗಳಿಸಿ ಮರಳಿ ಹೋರಾಟ ನಡೆಸುವ ಭರವಸೆ ತೋರಿತು. ಆದರೆ ಕೊಡಗು ತಂಡದ ಚುರುಕಿನ ಆಟದ ಎದುರು ಮಂಕಾದಂತೆ ಕಂಡು ಬಂದ ಹಾಸನ ತಂಡ ಗೋಲು ಗಳಿಸಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದವು. ಅಂತಿಮವಾಗಿ ಕೊಡಗು ತಂಡದ ಬಾಲಕಿಯರು ಗೆಲವಿನ ನಗೆ ಬೀರಿದರು.

14ರ ವಯೋಮಾನದ ಪ್ರಾಥಮಿಕ ಶಾಲಾ ವಿಭಾಗದ ಬಾಲಕರು ಹಾಸನ ತಂಡದ ಎದುರು 5-0 ಗೋಲುಗಳ ಅಂತರದಿಂದ ಜಯ ಸಾಧಿಸಿದರು. ಕೊಡಗು ತಂಡದ ಪುಟ್ಟ ಬಾಲಕರು ತೋರಿದ ಚಾಣಾಕ್ಷತನದ ಆಟದ ಎದುರು ಹಾಸನ ತಂಡದ ಬಾಲಕರ ಆಟ ನಡೆಯಲಿಲ್ಲ. ಒಂದಾದ ಮೇಲೆ ಒಂದರಂತೆ ಗೋಲುಗಳ ಮೂಲಕ ಎದುರು ತಂಡದ ಮೇಲೆ ಎರಗಿದ ಕೊಡಗು ತಂಡದ ಬಾಲಕರು ಜಯಗಳಿಸಿ ರಾಜ್ಯಮಟ್ಟದ ಹಾಕಿ ಟೂರ್ನಿಗೆ ಆಯ್ಕೆಯಾದರು.

14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿಯೂ ಕೊಡಗು ತಂಡ ಹಾಸನ ತಂಡದ ವಿರುದ್ಧ 1-0 ಗೋಲಿನಿಂದ ಜಯಗಳಿಸಿತು. ಪಂದ್ಯ ಆರಂಭಗೊಂಡ 9ನೇ ನಿಮಿಷದಲ್ಲಿ ಕೊಡಗು ತಂಡ ಮಿಂಚಿನ ಗೋಲುಗಳಿಸಿ ಮುನ್ನಡೆ ಗಳಿಸಿತು. ಹಾಸನ ತಂಡದ ಆಟಗಾರರು ಗೋಲುಗಳಿಸಿ ಪಂದ್ಯ ಸಮ ಮಾಡಿಕೊಳ್ಳಲು ನಡೆಸಿದ ತಂತ್ರಗಳೆಲ್ಲವೂ ಕೊಡಗು ತಂಡದ ಸಾಂಘಿಕ ಹೋರಾಟದ ಎದುರು ವಿಫಲವಾದವು.

ಅಂತಿಮ ಹಂತದವರೆಗೂ ಒಂದು ಗೋಲಿನ ಮುನ್ನಡೆ ಕಾಯ್ದುಕೊಂಡ ಕೊಡಗು ತಂಡದ ಬಾಲಕಿಯರು ಪಂದ್ಯ ಮುಗಿದಾಗ ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಕೇವಲ ಒಂದು ಗೋಲಿನಿಂದ ಸೋಲಪ್ಪಿಕೊಂಡ ಹಾಸನ ತಂಡದ ಆಟಗಾರರು ನಿರಾಸೆಯಿಂದ ಹೊರ ನಡೆದರು.

ಇದರಿಂದ ಕೊಡಗು ಜಿಲ್ಲೆಯ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರು ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರ ಒಟ್ಟು 4 ತಂಡಗಳು ಅ.26 ರಿಂದ ಮತ್ತೆ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿಯೇ ನಡೆಯಲಿರುವ ರಾಜ್ಯಮಟ್ಟದ ಟೂರ್ನಿಗೆ ಆಯ್ಕೆಯಾದರು.

ಎಲ್ಲಾ ವಿಭಾಗದಲ್ಲಿಯೂ ಉತ್ತಮ ಆಟವಾಡಿ ಗೆಲುವು ಸಾಧಿಸಿದ ಕೊಡಗಿನ ವಿದ್ಯಾರ್ಥಿಗಳ ಬಗ್ಗೆ ಅಭಿನಂದನೆಗಳ ಸುರಿಮಳೆ ಸುರಿದಿತು. ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರು ಪರಸ್ಪರ ಸಂತಸ ಹಂಚಿಕೊಂಡರು.

17 ವಯೋಮಾನದೊಳಗಿನ ಬಾಲಕಿಯರು ಪ್ರಶಸ್ತಿ ಪಡೆದು ಗೆಲುವಿನ ನಗೆ ಬೀರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.