ADVERTISEMENT

ಹಾಕಿ ಪಂದ್ಯಾವಳಿ: ಅಂತಿಮ ಸುತ್ತಿಗೆ ಜಾರ್ಖಂಡ್ ಮತ್ತು ಚಂಡೀಗಢ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 14:01 IST
Last Updated 7 ಜನವರಿ 2024, 14:01 IST
ಸೋಮವಾರಪೇಟೆ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕ್ಷಣ..17ರ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯದಲ್ಲಿ ಜಾರ್ಖಂಡ್ ಮತ್ತು ಮಧ್ಯಪ್ರದೇಶ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯಾಟದ ಒಂದು ರೋಚಕ ಕ್ಷಣ..
ಸೋಮವಾರಪೇಟೆ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕ್ಷಣ..17ರ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯದಲ್ಲಿ ಜಾರ್ಖಂಡ್ ಮತ್ತು ಮಧ್ಯಪ್ರದೇಶ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯಾಟದ ಒಂದು ರೋಚಕ ಕ್ಷಣ..   

ಸೋಮವಾರಪೇಟೆ: ಇಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 67ನೇ ಬಾಲಕಿಯರ (ಶಾಲೆಗಳ) ಹಾಕಿ ಪಂದ್ಯಾವಳಿಯಲ್ಲಿ  ಜಾರ್ಖಂಡ್ ಮತ್ತು ಚಂಡೀಗಢ ತಂಡಗಳು ಭಾನುವಾರ ಫೈನಲ್ ಪ್ರವೇಶಿಸಿದವು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಇಲ್ಲಿನ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ಭಾನುವಾರ ನಡೆದ ಹಾಕಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಮತ್ತು ಚಂಡೀಗಡ ತಂಡಗಳು ಜಯ ದಾಖಲಿಸಿ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದವು.

ಉತ್ತಮ ಹೊಂದಾಣಿಕೆಯ ಮತ್ತು ಕರಾರುವಾಕ್ಕಾದ ಪಾಸ್ ಹಾಗೂ ವೇಗದ ಆಟಕ್ಕೆ ಹೆಸರಾದ ಆಟಗಾರರನ್ನು ಹೊಂದಿರುವ ಜಾರ್ಖಂಡ್ ತಂಡ, ಮಧ್ಯಪ್ರದೇಶ ತಂಡದ ಎದುರು 7-0 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು.

ADVERTISEMENT

ಮಧ್ಯಪ್ರದೇಶ ತಂಡ ಲೀಗ್ ಹಾಗೂ ಕ್ವಾರ್ಟರ್ ಫೈನಲ್ ಹಂತದಲ್ಲಿ ಉತ್ತಮ ಆಟವಾಡಿ ಬಲಿಷ್ಠ ತಂಡವಾಗಿ ಹೊರ ಹೊಮ್ಮುವುದರೊಂದಿಗೆ ಉಪಾಂತ್ಯ ಪ್ರವೇಶಿಸಿದ್ದರೂ, ಜಾರ್ಖಂಡ್ ತಂಡದ ಸಮಯೋಚಿತ ಹಾಗೂ ಉತ್ತಮ ತಾಂತ್ರಿಕ ಕೌಶಲ್ಯಕ್ಕೆ ಶರಣಾಗಬೇಕಾಯಿತು.

ಜಾರ್ಖಂಡ್ ತಂಡದ ರೋಷನಿ ಮತ್ತು ಸುಶ್ಮಿತಾ ಲಾಕ್ರಾ ತಲಾ 2 ಗೋಲು ಗಳಿಸಿದರೆ, ಅನುಪ್ರಿಯಾ, ಜಮುನಾ, ಲಿಯೋನಿ ಹೆಮ್ರಾಮ್ ತಲಾ ಒಂದು ಗೋಲು ಗಳಿಸಿದರು. ಜಾರ್ಖಂಡ್ ತಂಡ 6 ಫೀಲ್ಡ್ ಗೋಲುಗಳನ್ನು ಮತ್ತು ಒಂದು ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸಿತು.

ದಿನದ ಎರಡನೇ ಸೆಮಿಫೈನಲ್ ಪಂದ್ಯ ಬಲಿಷ್ಠ ತಂಡಗಳಾದ ಚಂಡೀಗಡ ಮತ್ತು ಮಣಿಪುರ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸಮಬಲದ ಹೋರಾಟ ಕಂಡುಬಂಡರೂ ಚಂಡೀಗಡ ತಂಡ ಮಣಿಪುರ ತಂಡವನ್ನು 4-2 ಗೋಲುಗಳಿಂದ ಮಣಿಸಿತು.

ಮಣಿಪುರ ತಂಡಕ್ಕೆ 8 ಪೆನಾಲ್ಟಿ ಕಾರ್ನರ್ ಅವಕಾಶ ದೊರೆತರೂ, ಅದರ ಲಾಭವನ್ನು ಪಡೆಯಲು ವಿಫಲವಾಯಿತು. ಚಂಡೀಗಡ ತಂಡದ ಪ್ರತಿಭಾವಂತ ಮುನ್ನಡೆ ಆಟಗಾರ್ತಿ ತಮನ್ನಾ ಸತತ 4 ಗೋಲು ದಾಖಲಿಸಿದರು. ಮಣಿಪುರ ತಂಡದ ಲೈಸ್ರಮ್ ಕರ್ವಾ ಹಾಗೂ ಹೈಡ್ರೋವ್ ತಲಾ ಒಂದೊಂದು ಫೀಲ್ಡ್ ಗೋಲು ದಾಖಲಿಸಿದರು.

ಸೋಮವಾರಪೇಟೆ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 17ರ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯದಲ್ಲಿ ಮಣಿಪುರ ಮತ್ತು ಚಂಢಿಗಡ ತಂಡದ ನಡುವೆ ತೀವ್ ಪೈಪೋಟಿ ನಡೆಯಿತು.
ಇಂದಿನ ಪಂದ್ಯಗಳು
ಬೆಳಿಗ್ಗೆ 10 ಗಂಟೆಗೆ ಮಣಿಪುರ ಮತ್ತು ಮಧ್ಯಪ್ರದೇಶ ತಂಡಗಳ ನಡುವೆ ಮೂರನೇ ಸ್ಥಾನಕ್ಕೆ ಪಂದ್ಯ ನಡೆಯಲಿದ್ದು ಮಧ್ಯಾಹ್ನ 3ಕ್ಕೆ ಜಾರ್ಖಂಡ್ ಮತ್ತು ಚಂಢಿಗಡ ತಂಡದ ನಡುವೆ ಅಂತಿಮ ಪಂದ್ಯಾಟ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.