ಮಡಿಕೇರಿ: ಜಿಲ್ಲೆಯಲ್ಲಿರುವ ಅನಧಿಕೃತ ಹೋಂಸ್ಟೇ ನೋಂದಣಿಗೆ ಆಗಸ್ಟ್ 2ರ ಕಾಲಾವಕಾಶ ನೀಡಲಾಗಿದೆ.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಂಸ್ಟೇಗಳು ಸರ್ಕಾರದ ಆದೇಶದಂತೆ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ; ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಬಹಳಷ್ಟು ಹೋಂಸ್ಟೇಗಳು ನೋಂದಣಿಯಾಗಿಲ್ಲ. ಇದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ. ನಿಗದಿತ ದಿನಾಂಕದ ಒಳಗೆ ನೋಂದಣಿ ಮಾಡಿಕೊಳ್ಳದಿದ್ದರೆ ಅಂತಹ ಹೋಂಸ್ಟೇಗಳನ್ನು ರದ್ದುಗೊಳಿಸಿ, ಜಾಗದ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಹೋಂಸ್ಟೇಗಳ ನೋಂದಣಿಗಾಗಿ ಪ್ರವಾಸೋದ್ಯಮ ಇಲಾಖೆಯು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅಂತರ್ಜಾಲ ತಾಣ http://karnatakatourism.org ಅಥವಾ http://tayf.in.hs ಮೂಲಕ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಆನ್‌ಲೈನ್‌ನಲ್ಲಿ ನೋಂದಣಿ ಮಾಡಲು ಭಾವಚಿತ್ರ, ಆಧಾರ್ ಕಾರ್ಡ್, ಹೊರಾಂಗಣ ಹಾಗೂ ಒಳಾಂಗಣ ಛಾಯಾಚಿತ್ರಗಳು, ಹೋಂಸ್ಟೇ ಜಾಗದ ಮಾಲೀಕತ್ವದ ದಾಖಲಾತಿ (ಆರ್‌ಟಿಸಿ ಅಥವಾ ನಮೂನೆ-3) ಪೊಲೀಸ್ ಇಲಾಖೆಯಿಂದ ನೀಡಲಾಗಿರುವ ನಿರಾಕ್ಷೇಪಣಾ ಪತ್ರ, ಸ್ಥಳೀಯ ಸಂಸ್ಥೆ ನೀಡಿರುವ ನಿರಾಕ್ಷೇಪಣಾ ಪತ್ರಗಳನ್ನು ಸ್ಕ್ಯಾನ್ ಮಾಡಿದ ದಾಖಲಾತಿಗಳನ್ನು ಅಂತರ್ಜಾಲ ತಾಣದಲ್ಲಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದೆ.
ನೋಂದಣಿ ಶುಲ್ಕ ₨ 500 ಆಗಿದ್ದು, ಹೋಂಸ್ಟೇ ನಡೆಸಲು ಇಚ್ಛಿಸುವ ಮಾಲೀಕರು ಮೊದಲು ಪ್ರವಾಸೋದ್ಯಮ ಇಲಾಖೆಗೆ ಅಗತ್ಯ ದಾಖಲಾತಿಗಳೊಂದಿಗೆ ಕೋರಿಕೆ ಸಲ್ಲಿಸಬೇಕು. ನಂತರ, ಪ್ರವಾಸೋದ್ಯಮ ಇಲಾಖೆಯು ನೀಡುವ ಹಿಂಬರಹದ ಆಧಾರದ ಮೇಲೆ ಹೋಂ-ಸ್ಟೇಗಳ ಸ್ಥಳ ಹಾಗೂ ದಾಖಲಾತಿಗಳ ಪರಿಶೀಲನೆ ಮತ್ತು ಪ್ರವಾಸೋದ್ಯಮ ಇಲಾಖೆಯು ನಿಗದಿಪಡಿಸಿರುವ ಹೋಂಸ್ಟೇ ಮಾರ್ಗಸೂಚಿಗೆ ಅನುಗುಣವಾಗಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಎನ್‌ಒಸಿ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.
ಅರ್ಹ ಹೋಂಸ್ಟೇಗಳಿಗೆ ಪ್ರಮಾಣ ಪತ್ರ ನೀಡುವವರೆಗೆ ಮಾಲೀಕರು ಆನ್‌ಲೈನ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡಿರುವ ಪ್ರತಿಯನ್ನು ಇಟ್ಟುಕೊಂಡಿರಬೇಕು. ಪರಿವೀಕ್ಷಣೆಗಾಗಿ ಅಧಿಕಾರಿಗಳು ಭೇಟಿ ನೀಡಿದಾಗ ಹೋಂಸ್ಟೇ ಪ್ರಮಾಣ ಅಥವಾ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿಯನ್ನು ತೋರಿಸಬೇಕು. ಇಲ್ಲವಾದಲ್ಲಿ ಹೋಂಸ್ಟೇ ಜಾಗದ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.