ADVERTISEMENT

ಕೊಡಗು | ಪ್ರವಾಸೋದ್ಯಮಕ್ಕೆ ಉತ್ತೇಜನ ಹೇಗೆ? ಸ್ಪಷ್ಟಪಡಿಸಲು ಒತ್ತಾಯ

ಬೃಹತ್ ಪ್ರಮಾಣದ ಭೂಪರಿವರ್ತನೆ ವಿರೋಧಿಸಿ ತಿತಿಮತಿಯಲ್ಲಿ ಸಿಎನ್‌ಸಿ ಜನಜಾಗೃತಿ ಮಾನವ ಸರಪಳಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 5:28 IST
Last Updated 6 ಅಕ್ಟೋಬರ್ 2024, 5:28 IST
ಬೃಹತ್ ಪ್ರಮಾಣದ ಭೂಪರಿವರ್ತನೆ ಹಾಗೂ ಭೂವಿಲೇವಾರಿ ವಿರೋಧಿಸಿ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಶನಿವಾರ ಮಾನವ ಸರಪಳಿ ರಚಿಸಿದರು
ಬೃಹತ್ ಪ್ರಮಾಣದ ಭೂಪರಿವರ್ತನೆ ಹಾಗೂ ಭೂವಿಲೇವಾರಿ ವಿರೋಧಿಸಿ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಶನಿವಾರ ಮಾನವ ಸರಪಳಿ ರಚಿಸಿದರು   

ಮಡಿಕೇರಿ: ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ‘ಬೂಸ್ಟ್’ ಮಾಡುವುದಾಗಿ ಜಿಲ್ಲಾಡಳಿತ ಈಚೆಗಷ್ಟೇ ಹೇಳಿದೆ. ಪ್ರವಾಸೋದ್ಯಮದ ಬೆಳವಣಿಗೆ ಎಂದರೆ ಏನು ಎಂಬುದನ್ನು ಶ್ವೇತಪತ್ರದ ಮೂಲಕ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಬೃಹತ್ ಪ್ರಮಾಣದ ಭೂಪರಿವರ್ತನೆ ಹಾಗೂ ಭೂವಿಲೇವಾರಿ ವಿರೋಧಿಸಿ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಶನಿವಾರ ನಡೆಸಿದ ಮಾನವ ಸರಪಳಿ ವೇಳೆ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿದರು.

ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಆರ್ಥಿಕ ಅಪರಾಧಿಗಳು ಹಾಗೂ ಉದ್ಯಮಪತಿಗಳು ಕೊಡವಲ್ಯಾಂಡ್‌ನ ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಕೊಡವರೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಇದೆಲ್ಲವನ್ನು ತಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಹಿರಿಯರು ಉಳಿಸಿ, ಬೆಳೆಸಿದ ಕೊಡವಲ್ಯಾಂಡ್‌ನ ಹಸಿರ ಪರಿಸರ, ಅಮೂಲ್ಯ ಭೂಸಂಪತ್ತು ಪರರ ಪಾಲಾಗುತ್ತಿದೆ. ಇದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ ಉತ್ತರ ಖಂಡ್‌ನಲ್ಲಿ ಭೂಖರೀದಿಗೆ ವಿರೋಧವಿದೆ. ಕೊಡಗಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಕೇರಳದ ವಯನಾಡಿನ ಮಾದರಿಯ ಘೋರ ದುರಂತ ಸಂಭವಿಸಬಹುದು ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್‌ನ್ನು ಕಳೆದುಕೊಳ್ಳುವ ಹೀನಾಯ ಸ್ಥಿತಿ ಬರಬಹುದೆಂದೂ ಅವರು ಎಚ್ಚರಿಸಿದರು.

ಟೌನ್‌ಶಿಪ್, ನಗರೀಕರಣ, ವಿಲ್ಲಾ, ರೆಸಾರ್ಟ್‌ಗಳ ನಿರ್ಮಾಣದಿಂದ ಕೊಡಗಿನಲ್ಲಿ ಜನಸಂಖ್ಯೆ ಹೆಚ್ಚಾಗಲಿದ್ದು, ಇದನ್ನು ತಡೆದೊಳ್ಳುವ ಶಕ್ತಿ ಇಲ್ಲಿನ ಭೂಪ್ರದೇಶಕ್ಕೆ ಇಲ್ಲವಾದ ಕಾರಣ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಅ.9ರಂದು ಅಮ್ಮತ್ತಿ, ನಂತರದ ದಿನಗಳಲ್ಲಿ ಭಾಗಮಂಡಲ ಹಾಗೂ ಮಡಿಕೇರಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.

ಮಾಂಗೇರ ಪದ್ಮಿನಿ, ಚಿಂಡಮಾಡ ಸರಿತಾ, ಕೂತಂಡ ವಾಣಿ, ಬೋಳ್ತಂಡ ಮೀನಾ, ಕಳ್ಳಿಚಂಡ ಪವಿತ, ಗಾಂಡಂಗಡ ಸುಂದರಿ, ಕೊಚ್ಚೆರ ಸ್ವಾತಿ, ಪಾಲೆಂಗಡ ಗಂಗಮ್ಮ, ಪಾಲೆಂಗಡ ತಂಗಮ್ಮ, ಪಾಲೆಂಗಡ ಶಮ್ಮಿ, ಮನೆಯಪಂಡ ಮನು, ಚೆಕ್ಕೇರ ಕೃತಿಕಾ, ಮದ್ರೀರ ಕೃತಿಕಾ, ಮದ್ರೀರ ಲೀನಾ, ಕೊಚ್ಚೆರ ಚಿತ್ರ, ಪಾಲೆಂಗಡ ಮನು ನಂಜಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.