ನಾಪೋಕ್ಲು: ಸಮೀಪದ ಕಕ್ಕಬ್ಬೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬದ ಮುನ್ನಾದಿನವಾದ ಭಾನುವಾರ ಕಲಾಡ್ಚ ಹಬ್ಬವನ್ನು ಭಕ್ತರು ಸಾಂಪ್ರದಾಯಿಕವಾಗಿ ಆಚರಿಸಿದರು.
ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವತಕ್ಕ, ತಕ್ಕಮುಖ್ಯಸ್ಥ ಕುಟುಂಬಸ್ಥರ ಹಾಲು ಬಲಿವಾಡು ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ತಲುಪಿ ಎತ್ತುಪೋರಾಟವನ್ನು ಒಪ್ಪಿಸಲಾಯಿತು.
ನಂತರ, ಭಕ್ತರಿಂದ ತುಲಾಭಾರ ಸೇವೆ ಸೇರಿದಂತೆ ಹರಕೆ ಇನ್ನಿತರ ಪೂಜೆಗಳನ್ನು ನೆರವೇರಿಸಲಾಯಿತು. ಮಹಾಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ನೆರವೇರಿತು. ದೇವರ ಪ್ರಾರ್ಥನೆಯ ಬಳಿಕ ನಡೆದ ದೇವರ ನೃತ್ಯಬಲಿಯನ್ನು ಭಕ್ತರು ವೀಕ್ಷಿಸಿದರು.
ಎತ್ತುಪೋರಾಟದೊಂದಿಗೆ ತಕ್ಕ ಮುಖ್ಯಸ್ಥರು ಭಕ್ತರು ಮಲ್ಮ ಬೆಟ್ಟಕ್ಕೆ ಶ್ರದ್ಧಾಭಕ್ತಿಯಿಂದ ತೆರಳಿದರು. ಪೇರೂರು ಹಾಗೂ ನೆಲಜಿ ಗ್ರಾಮದ ತಕ್ಕ ಮುಖ್ಯಸ್ಥರು ಎತ್ತುಪೋರಾಟದೊಂದಿಗೆ ಆಗಮಿಸಿದರು. ಅರ್ಚಕರು ಶುದ್ಧಕಲಶ ಪೂಜಾಕಾರ್ಯಗಳನ್ನು ನೆರವೇರಿಸಿದ ಬಳಿಕ ಎತ್ತುಪೋರಾಟ ದುಡಿಕೊಟ್ಟ್ ಪಾಟ್ ನೆರವೇರಿತು. ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಂಜೆ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪ್ರದಾಯದಂತೆ ಕಲಾಡ್ಚ ಸಂಭ್ರಮದಿಂದ ಜರುಗಿತು.
ಸಮೀಪದ ಪಾಲೂರು ಮಹಾಲಿಂಗೇಶ್ವರ ದೇವಾಲಯ, ಮಕ್ಕಿಶಾಸ್ತಾವು ದೇವಾಲಯ, ಕಕ್ಕುಂದ ಕಾಡು ವೆಂಕಟೇಶ್ವರ ದೇವಾಲಯ ಹಾಗೂ ನಾಪೋಕ್ಲು ಕೊಡವ ಸಮಾಜಗಳಲ್ಲಿ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಮಕ್ಕಳು ಹಿರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಹುತ್ತರಿಯ ಅಂಗವಾಗಿ ಪಟಾಕಿಗಳ ಅಬ್ಬರ ಜೋರಾಗಿತ್ತು.ಪಟ್ಟಣದಲ್ಲಿ ಐದು ಪಟಾಕಿ ಮಳಿಗೆಗಳಿದ್ದು ಬಿರುಸಿನ ವ್ಯಾಪಾರ ನಡೆಯಿತು. ಗ್ರಾಮೀಣ ಭಾಗಗಳಿಂದ ಆಗಮಿಸಿದ ಮಂದಿ ಆಸಕ್ತಿಯಿಂದ ಹಬ್ಬಕ್ಕೆ ಪಟಾಕಿಗಳನ್ನು ಖರೀದಿಸಿದರು.
ಹುತ್ತರಿಗೂ ಮುನ್ನ ನಡೆಯುವ ಕಲಾಡ್ಚ ಹಬ್ಬ ಇಗ್ಗುತಪ್ಪನ ಆದಿನೆಲೆಯಾದ ಮಲ್ಲ ಬೆಟ್ಟದಲ್ಲಿ ಪೂಜಾಕೈಂಕರ್ಯ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲೂ ಹಲವು ಧಾರ್ಮಿಕ ಕಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.