ಮಡಿಕೇರಿ: ‘ಕೊಡಗು ಜಿಲ್ಲೆ ಪ್ರತ್ಯೇಕ ಲೋಕಸಭಾ ಸ್ಥಾನ ಹೊಂದಬೇಕು. ಇದಕ್ಕಾಗಿ ನಾನು ಪ್ರಬಲವಾದ ಧ್ವನಿ ಎತ್ತುತ್ತೇನೆ’ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ವಿಶೇಷ ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳನ್ನು ಹೊಂದಿರುವ ಪ್ರದೇಶ ಕೊಡಗು. ಇದು ಯಾವಾಗಲೂ ಜನಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಮಂಗಳೂರು ಇಲ್ಲವೇ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರುತ್ತಿದೆ. ಡಾರ್ಜಿಲಿಂಗ್ ಹಾಗೂ ಲಕ್ಷದ್ವೀಪದ ಮಾದರಿಯಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಪ್ರತ್ಯೇಕ ಲೋಕಸಭಾ ಸ್ಥಾನ ಕೊಡಗಿಗೆ ನೀಡಬೇಕು ಎಂದು ಅವರು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.
‘2026ರ ವೇಳೆ ಕ್ಷೇತ್ರ ಮರುವಿಂಗಡನೆ ಆಗುವ ಸಾಧ್ಯತೆಗಳಿವೆ. ಆಗ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ನೀಡಬೇಕು ಎಂದು ನಾನು ಪ್ರಬಲವಾಗಿ ಧ್ವನಿ ಎತ್ತುತ್ತೇನೆ’ ಎಂದು ಭರವಸೆ ನೀಡಿದರು.
ಶಾಮನೂರು ಶಿವಶಂಕರಪ್ಪ ಮಾತ್ರವಲ್ಲ ಇನ್ನೂ ಹಲವು ಕಾಂಗ್ರೆಸ್ ನಾಯಕರಿಗೆ ದೇಶದ ವಿಚಾರ ಬಂದಾಗ ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕು ಎಂಬ ಇಚ್ಛೆ ಇದೆ. ಸದ್ಯ, ಶಾಮನೂರು ಶಿವಶಂಕರಪ್ಪ ಬಹಿರಂಗವಾಗಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದ್ದಾರೆ. ಇನ್ನೂ ಹಲವು ನಾಯಕರಿಗೆ ಮೋದಿ ಬಗ್ಗೆ ಮೆಚ್ಚುಗೆಯ ಭಾವನೆ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.