ADVERTISEMENT

ನಾಪೋಕ್ಲು: ನಿಸರ್ಗದ ಮಡಿಲಲ್ಲಿ ಮೂರು ಇಗ್ಗುತ್ತಪ್ಪ ದೇಗುಲ

ಇಂದು ನಡೆಯಲಿದೆ ಸಂಭ್ರಮದ ಪತ್ತಲೋದಿ ಉತ್ಸವ

ಸಿ.ಎಸ್.ಸುರೇಶ್
Published 27 ಅಕ್ಟೋಬರ್ 2024, 5:29 IST
Last Updated 27 ಅಕ್ಟೋಬರ್ 2024, 5:29 IST
ನಾಪೋಕ್ಲು ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯ
ನಾಪೋಕ್ಲು ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯ   

ನಾಪೋಕ್ಲು: ಕೊಡಗಿನ ಮಾತೆಯಾಗಿ ಕಾವೇರಿ ಖ್ಯಾತಿ ಪಡೆದಿದ್ದರೆ, ಆರಾಧ್ಯದೈವವಾಗಿ ಇಗ್ಗುತ್ತಪ್ಪ ಇಲ್ಲಿಯ ಜನತೆಯ ಮನಮಂದಿರದಲ್ಲಿ ನೆಲೆಸಿದ್ದಾರೆ.

ಮಡಿಕೇರಿ ತಾಲ್ಲೂಕಿನಲ್ಲಿ ಮೂರು ಇಗ್ಗುತ್ತಪ್ಪ ದೇವಾಲಯಗಳಿವೆ. ಕಕ್ಕಬ್ಬೆ, ನೆಲಜಿ ಮತ್ತು ಪೇರೂರು ಗ್ರಾಮಗಳಲ್ಲಿನ ಇಗ್ಗುತ್ತಪ್ಪ ದೇವಾಲಯಗಳು ಭಕ್ತ ಜನರ ನಂಬಿಕೆಯ ತಾಣಗಳಾಗಿವೆ. ಈ ದೇವಾಲಯಗಳು ಭಾನುವಾರ ಪತ್ತಲೋದಿ ಉತ್ಸವಕ್ಕೆ ಸಜ್ಜಾಗುತ್ತಿವೆ.

ಕಾವೇರಿ ತೀರ್ಥೋದ್ಭವ ಕಳೆದು ಪವಿತ್ರ ತುಲಾ ಮಾಸದ ಹತ್ತನೇ ದಿನದ ಉತ್ಸವ ಆರಾಧನೆ ಎಂದೇ ಖ್ಯಾತಿ ಪಡೆದು ಹಲವು ವರ್ಷಗಳಿಂದ ಪರದಂಡ ಕುಟುಂಬಸ್ಥರಿಂದ ಆಚರಿಸಿಕೊಂಡು, ಬರಲಾಗುತ್ತಿರುವ ಆರಾಧನೋತ್ಸವ ಭಾನುವಾರ (ಅ. 27ರಂದು) ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಜರುಗಲಿದೆ.

ADVERTISEMENT

ಆ ದಿನ ಎಂದಿನಂತೆ ಪೂಜೆಗಳು, ಸತ್ಯನಾರಾಯಣ ಪೂಜೆ, ಮಹಾಪೂಜೆಗಳು ನಡೆಯಲಿದ್ದು ತುಲಾಭಾರ ಸೇವೆಗಳು ನಡೆಯುತ್ತವೆ ಎಂದು ದೇವಸ್ಥಾನದ ದೇವತಕ್ಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.

‘ಪತ್ತಲೋದಿ ಉತ್ಸವಕ್ಕಾಗಿ ದೇವಾಲಯದ ಆಡಳಿತ ಮಂಡಳಿಗಳು ಸಿದ್ಧತೆ ನಡೆಸಿವೆ. ಪ್ರತಿವರ್ಷ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯ ಸೇರಿದಂತೆ ಪೇರೂರು, ನೆಲಜಿ ಗ್ರಾಮಗಳ ಇಗ್ಗುತ್ತಪ್ಪ ದೇವಾಲಯಗಳಲ್ಲೂ ಈ ಉತ್ಸವ ಸಂಭ್ರಮದಿಂದ ನಡೆಯಲಿದೆ. ಕಾವೇರಿ ಸಂಕ್ರಮಣದ ಬಳಿಕ ಇಗ್ಗುತ್ತಪ್ಪ ದೇವಾಲಯಗಳಲ್ಲಿ ಆರಂಭಗೊಳ್ಳುವ ಮೊದಲ ಉತ್ಸವ ಇದು’ ಎನ್ನುತ್ತಾರೆ ಪೇರೂರು ಗ್ರಾಮದ ಬೊಟ್ಟೋಳಂಡ ಮಿಟ್ಟು ಪೂಣಚ್ಚ.

ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ಮಳೆ ದೇವರು ಎಂಬ ಖ್ಯಾತಿ ಹೊಂದಿದ್ದು, ಕೊಡಗಿನಲ್ಲಿ ಕೃಷಿಯನ್ನೇ ನಂಬಿ ಬದುಕುವ ಮಂದಿ ಮಳೆಗಾಗಿ ಪಾಡಿಯ ಇಗ್ಗುತ್ತಪ್ಪನನ್ನು ಪ್ರಾರ್ಥಿಸುತ್ತಾರೆ. ಕೊಡಗಿನ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಈ ದೇವಾಲಯಕ್ಕೆ ಅಗ್ರಸ್ಥಾನ. ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆಯಿಂದ ಸುಮಾರು 3 ಕಿ.ಮೀ. ದೂರ ಸಾಗಿದರೆ ನಿಸರ್ಗದ ಚೆಲುವಿನಲ್ಲಿ ಕಂಗೊಳಿಸುವ ಇಗ್ಗುತ್ತಪ್ಪ ದೇವಾಲಯವನ್ನು ತಲುಪಬಹುದು. ಸುತ್ತಲಿನ ನಿಸರ್ಗ ವೈಭವ ಹಿನ್ನೋಟಕ್ಕೆ ರಮಣೀಯ ತಡಿಯಂಡ ಮೋಳ್ ಪರ್ವತ ಸಾಲುಗಳು ನಿಮ್ಮ ಮನಕ್ಕೆ ಮುದ ನೀಡುತ್ತವೆ.

ಪಾಡಿಬೆಟ್ಟಕ್ಕೆ ಇಗ್ಗುತ್ತಪ್ಪ ಬೆಟ್ಟ ಅಥವಾ ಸುಬ್ರಹ್ಮಣ್ಯ ದೇವರ ಬೆಟ್ಟವೆಂದು ಸ್ಥಳೀಯವಾಗಿ ಕರೆಯಲಾಗುತ್ತದೆ. ಗುಡ್ಡದ ಮೇಲಿರುವ ಈ ಭವ್ಯ ದೇವಾಲಯಕ್ಕೆ ಮೆಟ್ಟಿಲುಗಳ ಮೂಲಕ ಹೋಗಬೇಕು. ಪಾಡಿಯ ಇಗ್ಗುತ್ತಪ್ಪನಿಗೆ ಭವ್ಯಸೂರು ನಿರ್ಮಾಣಗೊಂಡಿದ್ದು ಕ್ರಿ.ಶ. 1810ರಲ್ಲಿ. ಈ ರಮಣೀಯ ತಾಣಕ್ಕೆ ತೆರಳುವವರು ಬೆಳ್ಳಿಯ ಆನೆಯನ್ನು ಅದರ ಬೆನ್ನಮೇಲೆ ಅರಸ ಲಿಂಗರಾಜ ಬರೆಸಿದ ಶಾಸನವನ್ನು ವೀಕ್ಷಿಸಬಹುದು.

ಈ ಸುಂದರ ದೇವಾಲಯವು ಅಪ್ಪಾರಂಡ ಬೋಪು ಎಂಬ ಅಧಿಕಾರಿಯಿಂದ ಕ್ರಿ.ಶ 1834-35ರ ಅವಧಿಯಲ್ಲಿ ನವೀಕರಣಗೊಂಡಿದೆ. ಅದೇ ಸಂದರ್ಭದಲ್ಲಿ ಗೋಪುರಕ್ಕೆ ಸುವರ್ಣ ಕಲಶವನ್ನು ಮಾಡಿಸಿದ ಬಗೆಗೆ ಉಲ್ಲೇಖವಿದೆ. ವರ್ಷದ ಎಲ್ಲಾ ದಿನಗಳಲ್ಲೂ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಿತ್ಯ ದೇವಾಲಯಕ್ಕೆ ಬರುವ ಭಕ್ತ ಸಮೂಹಕ್ಕೆ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ.

ಸಮೀಪದ ನೆಲಜಿ ಗ್ರಾಮದಲ್ಲಿಯೂ ಇಗ್ಗುತ್ತಪ್ಪ ದೇವಾಲಯವಿದೆ, ಗ್ರಾಮದ ಜನರ ಪ್ರಮುಖ ಧಾರ್ಮಿಕ ಕ್ಷೇತ್ರವಿದು. ವಿಶೇಷ ಉತ್ಸವಗಳು ಇಲ್ಲಿ ವಿಜೃಂಭಣೆಯಿಂದ ಜರುಗುತ್ತವೆ. ಪೇರೂರು ಗ್ರಾಮದಲ್ಲಿ ಮತ್ತೊಂದು ಇಗ್ಗುತ್ತಪ್ಪ ದೇವಾಲಯವಿದೆ. ಪ್ರತಿವರ್ಷ ಶಿವರಾತ್ರಿಯ ದಿನದಂದು ಇಲ್ಲಿ ವಾರ್ಷಿಕ ಉತ್ಸವ ಜರುಗುತ್ತದೆ. ಇನ್ನಿತರ ಧಾರ್ಮಿಕ ಉತ್ಸವಗಳನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪತ್ತಲೋದಿ ಉತ್ಸವಕ್ಕೆ ದೇವಾಲಯಗಳು ಸಜ್ಜಾಗುತ್ತಿವೆ.

ನಾಪೋಕ್ಲು ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದ ವಿಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.