ಮಡಿಕೇರಿ: ಸೂರ್ಯ ಪಡುವಣದಲ್ಲಿ ಅಸ್ತಮಿಸುತ್ತಿದ್ದಂತೆ ಇಲ್ಲಿನ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಸಾವಿರಾರು ಮಂದಿ ಸೇರತೊಡಗಿದರು.
ಕತ್ತಲಾವರಿಸಿ, ದಟ್ಟವಾದ ಮಂಜು, ಮೈಕೊರೆಯುವ ಚಳಿ ವ್ಯಾಪಿಸಿದರೂ ಬರುತ್ತಿದ್ದ ಭಕ್ತರ ಸಂಖ್ಯೆ ಕಡಿಮೆಯಾಗಲಿಲ್ಲ. ಭಕ್ತರ ನೂಕುನುಗ್ಗಲಿನ ನಡುವೆ ಇಲ್ಲಿನ ಬ್ರಹ್ಮಕುಂಡಿಕೆಯಲ್ಲಿ ಸಂಜೆ 7.22ಕ್ಕೆ ಜೀವನದಿ ಉಕ್ಕುತ್ತಿದ್ದಂತೆ ಜಯಘೋಷ ಮುಗಿಲು ಮುಟ್ಟಿತು.
ಎಲ್ಲೆಲ್ಲೂ ಸಂಭ್ರಮ, ಸಡಗರ ಮನೆ ಮಾಡಿತ್ತು. ನಡುಗುತ್ತ, ಕೈ ಮುಗಿಯುತ್ತ ಕಾವೇರಿ ಮಾತೆಗೆ ಜಯಕಾರ ಹಾಕುತ್ತಿದ್ದ ಭಕ್ತ ವೃಂದದ ಮೇಲೆ ಅರ್ಚಕರು ಉಕ್ಕಿದ ಕಾವೇರಿ ಜಲವನ್ನು ಪ್ರೋಕ್ಷಿಸಿದರು. ಮೈಮೇಲೆ ಬಿದ್ದ ಹನಿಗಳಿಂದ ಭಕ್ತರು ರೋಮಾಂಚಿತರಾಗಿ ಕೈ ಮುಗಿದರು.
ಬ್ರಹ್ಮಕುಂಡಿಕೆಯಲ್ಲಿದ್ದ ನೀರನ್ನು ಸಾಲುಗಟ್ಟಿ ನಿಂತ ಸಾವಿರಾರು ಭಕ್ತರು ತೀರ್ಥರೂಪದಲ್ಲಿ ಸೇವಿಸಿದರೆ, ನೂರಾರು ಭಕ್ತರು ಪುಷ್ಕರಿಣಿಗೆ
ಇಳಿದು ಮಿಂದು ಪುನೀತಭಾವ ಮೆರೆದರು. ಅನ್ನದಾನ, ಪ್ರಸಾದ ವಿನಿಯೋಗಗಳು ನಡೆದು, ಭಕ್ತರ ಹಸಿವನ್ನು ಇಂಗಿಸಿದವು.
ಭಾಗಮಂಡಲದಿಂದ ತಲಕಾವೇರಿ ಯವರೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಕಡಿದಾದ ರಸ್ತೆಯಲ್ಲಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಾಹನದ ನಿಲುಗಡೆ ತಾಣದಿಂದ ತಲಕಾವೇರಿಗೆ ಭಕ್ತರು ಕಾಲ್ನಡಿಗೆಯಲ್ಲೇ ಬಂದರು.
ನೂರಾರು ವ್ಯಾಪಾರಸ್ಥರು ವಿವಿಧ ಬಗೆಯ ಪರಿಕರಗಳನ್ನು ಮಾರಾಟ ಮಾಡಲು ಅಲ್ಲಲ್ಲಿ ತಾತ್ಕಾಲಿಕ ಅಂಗಡಿಗಳನ್ನು ತೆರೆದಿದ್ದರು. ‘ಕಾವೇರಿ ಜಾತ್ರೆ’ಯಲ್ಲಿ ಪಾಲ್ಗೊಂಡ ಭಕ್ತರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿ ಖುಷಿಪಟ್ಟರು. ತೀರ್ಥದ ಬಾಟಲಿಗಳ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು.
ಎಲ್ಲ ವಯೋಮಾನದವರು ತಡರಾತ್ರಿಯವರೆಗೂ ತಲಕಾವೇರಿಯಲ್ಲಿ ಸಾಲು ನಿಂತಿ ಕಾವೇರಿ ಮಾತೆಯ ದರ್ಶನ ಪಡೆದರು. ಸುಮಾರು 6 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ತರಲಾಗಿದ್ದ ಹೂಗಳಿಂದ ದೇಗುಲಗಳನ್ನು ಸಿಂಗರಿಸಲಾಗಿತ್ತು.
ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಶಾಸಕರಾದ ಕೆ.ಜಿ.ಬೋಪಯ್ಯ ಅಪ್ಪಚ್ಚು ರಂಜನ್, ಶಾಸಕ ಸುಜಾ ಕುಶಾಲಪ್ಪ, ಮುಖಂಡರಾದ ವೀಣಾ ಅಚ್ಚಯ್ಯ ಇದ್ದರು.
ಕೆಲವರು ಒಳಗೆ ಬಿಡುವಂತೆ ಪೊಲೀ ಸರೊಂದಿಗೆ ವಾಗ್ವಾದ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.