ಕುಶಾಲನಗರ: ಕೇರಳದ ನಾಡಹಬ್ಬ ಭಾವೈಕ್ಯದ ಪ್ರತೀಕವಾದ ಓಣಂ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೆಲೆಸಿರುವ ಮಲೆಯಾಳಿ ಭಾಷಿಕರು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಓಣಂ ಎಂದಾಕ್ಷಣ ಮನೆಯ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿ (ಪೂಳಕಂ), ಮಧ್ಯೆ ಬೆಳಗುವ ಹಣತೆ, ಸುಣ್ಣ ಬಣ್ಣ ಬಳಿದು ಶೃಂಗರಿಸಿದ ಮನೆ, ಅಡುಗೆ ಮನೆಯಲ್ಲಿ ಘಮ್ಮೆನ್ನುವ ಭಕ್ಷ್ಯಬೋಜನಗಳು, ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಮಹಿಳೆಯರ ಹೊಸ ಹುರುಪು ಹಬ್ಬದ ಸಂದರ್ಭ ಕಂಡು ಬಂದ ವಿಶೇಷತೆಗಳು.
ಕುಶಾಲನಗರ ಹೋಬಳಿ ವ್ಯಾಪ್ತಿಯ ಗುಡ್ಡೆಹೊಸೂರು, ಏಳನೇ ಹೊಸಕೋಟೆ, ಹಾರಂಗಿ, ಚಿಕ್ಕತ್ತೂರು, ಕೂಡಿಗೆ, ಸಿದ್ಧಲಿಂಗಪುರ, ಅರಸಿಣಕುಪ್ಪೆ, ನಾಕೂರು- ಶಿರಂಗಾಲ, ನಂಜರಾಯಪಟ್ಟಣ ಮತ್ತಿತರ ಗ್ರಾಮ ಗಳಲ್ಲಿ ಹಬ್ಬದ ಅಂಗವಾಗಿ ಮಳೆಯಾಳಿ ಭಾಷಿಕರು (ಕೇರಳಿ ಯನ್ನರು) ಸಾಂಪ್ರದಾಯಿಕ ಹೊಸ ಉಡುಗೆ ಧರಿಸಿ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮಳೆಯಾಳಿಗಳು ಪರಸ್ಪರ ಸಿಹಿ ವಿತರಿಸುವ ಮೂಲಕ ಓಣಂ ಶುಭಾಶಯ ಹಂಚಿಕೊಂಡರು. ಸಿಂಹಮಾಸದಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಕೇರಳಿಯರಿಗೆ ಈ ಸಿಂಹಮಾಸ ಚಿನ್ನದ ಮಾಸವಾಗಿದ್ದು, ಈ ಮಾಸದಲ್ಲಿ ಹಸ್ತಾ ನಕ್ಷತ್ರದಿಂದ ಹತ್ತು ದಿನಗಳ ಕಾಲ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗೆಯೇ ಪಟ್ಟಣದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಹೋಟೆಲ್ ಉದ್ಯಮಿ ಅತಿಥಿ ಭಾಸ್ಕರ್ ಅವರ ಕುಟುಂಬ ಸದಸ್ಯರು ಮತ್ತು ಹೋಟೆಲ್ ಸಿಬ್ಬಂದಿ ಒಟ್ಟಾಗಿ ತಮ್ಮ ಅತಿಥಿ ಕಂಪರ್ಟ್ ಪ್ರವೇಶ ದ್ವಾರದಲ್ಲಿ ಪೂಕಳಂ ರಚಿಸಿದ್ದ ಚಿತ್ರಣ ಹೋಟೆಲ್‌ಗೆ ಬರುವ ಪ್ರವಾಸಿಗರ ಕಣ್ಮನ ಸೆಳೆಯಿತು. ಹಾಗೆಯೇ ಬೈಚನಹಳ್ಳಿಯ ಎಂ.ಜಿ.ವಿಶ್ವನಾಥ್ ಅವರ ಕುಟುಂಬಸ್ಥರು ಹಾಗೂ ಬಂಧುಗಳು ಒಟ್ಟಿಗೆ ಸೇರಿ ಓಣಂ ಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಂ.ಜಿ.ವಿಶ್ವನಾಥ್, ‘ಮಲೆಯಾಳಿ ಭಾಷಿಗರ ಪ್ರಮುಖ ರಾಷ್ಡ್ರೀಯ ಹಬ್ಬವಾದ ಓಣಂ ಆಚರಣೆ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಓಣಂ ಆಚರಣೆಗೆ ಕೇವಲ ಮನೆಗಳು ಅಲ್ಲದೇ ಇಡೀ ನಾಡೇ ತೆರೆದುಕೊಳ್ಳುತ್ತದೆ. ಹಾಗಾಗಿ ಕುಶಾಲನಗರದಲ್ಲಿ ವಿಶೇಷವಾಗಿ ಈ ಹಬ್ಬವನ್ನು ಆಚರಿಸಿದ್ದಾಗಿ’ ಹೇಳಿದರು.
ಓಣಂ ಅಂಗವಾಗಿ ತಯಾರಿಸಲಾದ ವಿವಿಧ ಭಕ್ಷ್ಯಭೋಜನಗಳನ್ನು ಬಂಧು-ಮಿತ್ರರೊಂದಿಗೆ ಒಟ್ಟಿಗೆ ಸೇರಿ ಸವಿದರು.
ಜಾತಿ, ಮತ, ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಮಳೆಯಾಳಿ ಭಾಷಿಕರಾದ ಹಿಂದೂ, ಮುಸ್ಲಿಂ, ಕ್ರೈಸ್ತರು ಓಣಂವನ್ನು ಸಡಗರದಿಂದ ಆಚರಿಸಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.