ADVERTISEMENT

ಒಂದು ವರ್ಷದಲ್ಲಿ ಕೊಡಗಿಗೆ ಸ್ವಾಯತ್ತತೆ: ಡಾ.ಸುಬ್ರಹ್ಮಣಿಯನ್‌ ಸ್ವಾಮಿ

ರಾಜ್ಯಸಭೆಯ ನಿಕಟಪೂರ್ವ ಸದಸ್ಯ ಡಾ.ಸುಬ್ರಹ್ಮಣಿಯನ್‌ಸ್ವಾಮಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 9:56 IST
Last Updated 27 ನವೆಂಬರ್ 2022, 9:56 IST
ಮಡಿಕೇರಿ ಸಮೀಪದ ಕಡಗದಾಳು ಗ್ರಾಮದ ‘ಕ್ಯಾಪಿಟಲ್ ವಿಲೇಜ್’ ರೆಸಾರ್ಟ್‌ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಶನಿವಾರ ನಡೆದ ‘ಕೊಡವ ನ್ಯಾಷನಲ್ ಡೇ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು (ಎಡಚಿತ್ರ). ಕಾರ್ಯಕ್ರಮದಲ್ಲಿ ರಾಜ್ಯಸಭೆಯ ನಿಕಟಪೂರ್ವ ಸದಸ್ಯ ಡಾ.ಸುಬ್ರಹ್ಮಣಿಯನ್‌ಸ್ವಾಮಿ ಮಾತನಾಡಿದರು
ಮಡಿಕೇರಿ ಸಮೀಪದ ಕಡಗದಾಳು ಗ್ರಾಮದ ‘ಕ್ಯಾಪಿಟಲ್ ವಿಲೇಜ್’ ರೆಸಾರ್ಟ್‌ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಶನಿವಾರ ನಡೆದ ‘ಕೊಡವ ನ್ಯಾಷನಲ್ ಡೇ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು (ಎಡಚಿತ್ರ). ಕಾರ್ಯಕ್ರಮದಲ್ಲಿ ರಾಜ್ಯಸಭೆಯ ನಿಕಟಪೂರ್ವ ಸದಸ್ಯ ಡಾ.ಸುಬ್ರಹ್ಮಣಿಯನ್‌ಸ್ವಾಮಿ ಮಾತನಾಡಿದರು   

ಮಡಿಕೇರಿ: ‘ಇನ್ನೊಂದು ವರ್ಷ ದಲ್ಲಿ ಕೊಡಗಿಗೆ ಸ್ವಾಯತ್ತತೆ ಲಭಿಸು ತ್ತದೆ. ಮುಂದಿನ ವರ್ಷ ನ. 26ರಂದು ಸ್ವಾಯತ್ತತೆ ಪಡೆದ ಕೊಡವ ಲ್ಯಾಂಡ್‌ನಲ್ಲೇ ಅದರ ಸಂಭ್ರಮಾ ಚರಣೆ ಮಾಡುವೆ’ ಎಂದು ರಾಜ್ಯ ಸಭೆಯ ನಿಕಟಪೂರ್ವ ಸದಸ್ಯ ಡಾ.ಸುಬ್ರಹ್ಮಣಿ ಯನ್‌ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಕಡಗದಾಳು ಗ್ರಾಮದ ‘ಕ್ಯಾಪಿಟಲ್ ವಿಲೇಜ್’ ರೆಸಾರ್ಟ್‌ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಶನಿವಾರ ನಡೆದ ‘ಕೊಡವ ನ್ಯಾಷನಲ್ ಡೇ’ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಕೊಡವ ನ್ಯಾಷನಲ್ ಕೌನ್ಸಿಲ್‌ನ ಈ ಬೇಡಿಕೆ ನ್ಯಾಯಯುತವಾದದ್ದು. ಸರ್ಕಾರ ಈಡೇರಿಸದೇ ಇದ್ದರೂ ಸುಪ್ರೀಂಕೋರ್ಟ್‌ ಈ ಬೇಡಿಕೆಯನ್ನು ಮಾನ್ಯ ಮಾಡುವ ವಿಶ್ವಾಸ ಇದೆ ಎಂದರು.

ADVERTISEMENT

‘ಗೋವಾ, ತೆಲಂಗಾಣ, ಉತ್ತರಾಖಂಡ್‌ ಪ್ರದೇಶಗಳು ನಿರಂತರ ಹೋರಾಟದ ಫಲವಾಗಿ ಪ್ರತ್ಯೇಕ ರಾಜ್ಯಗಳಾಗಿ ಮಾರ್ಪಟ್ಟಿವೆ. ಕೊಡವರು ಎಂದೆಂದಿಗೂ ಈ ದೇಶದ ಅಂಗವಾಗಿಯೇ ಉಳಿಯಲಿದ್ದಾರೆ. ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರತ್ಯೇಕ ಹೋಂ ಲ್ಯಾಂಡ್ ಕೇಳುತ್ತಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಬೆಂಬಲವಿದೆ’ ಎಂದು ಹೇಳಿದರು.

ಭೂಮಾಫಿಯಾ ತಾಣವಾಗುತ್ತಿರುವ ಕೊಡಗು; ನಾಚಪ್ಪ ಆತಂಕ

ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ‌‘ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ ಮತ್ತು ಕಾವೇರಿ ನದಿ ಉದ್ಭವಿಸಿದ ಪವಿತ್ರ ಭೂಮಿ ಇಂದು ಭೂ ಮಾಫಿಯಾಗಳ ತಾಣವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಬಲ ಸಮುದಾಯಗಳು ಸಣ್ಣ ಸಣ್ಣ ಸಮುದಾಯಗಳನ್ನು ತುಳಿದು ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಕೊಡವರ ಭೂಮಿ, ನೀರು ಮತ್ತು ಕೋವಿ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪವಿತ್ರ ಭೂಮಿ ಕೊಡಗಿನಲ್ಲಿ ಭೂ ಮಾಫಿಯಾ ಮತ್ತು ಸಮಾಜ ಘಾತುಕ ಶಕ್ತಿಗಳು ಪ್ರಬಲ ವಾಗುತ್ತಿವೆ. ಇವುಗಳಿಂದ ಕೊಡಗು ಮುಕ್ತವಾಗಬೇಕಾದರೆ ಪ್ರತ್ಯೇಕ ಕೊಡವ ಲ್ಯಾಂಡ್ ಘೋಷಣೆಯಾಗಬೇಕು ಎಂದು ಪ್ರತಿಪಾದಿಸಿದರು.

ಕೊಡವ ಎನ್ನುವ ಜನಪದೀಯ ಪದವನ್ನು ಕೂಡ ಅಳಿಸುವ ಪ್ರಯತ್ನಗಳು ನಡೆಯುತ್ತಿದೆ. ಜಾತಿ ಮತ್ತು ಆದಾಯ ದೃಢೀಕರಣ ಪತ್ರದಲ್ಲಿ ಕೊಡವ ಜಾತಿ ನಮೂದಿಸಬೇಕೆಂಬ ಮನವಿಯನ್ನು ಇನ್ನೂ ಈಡೇರಿಸಿಲ್ಲ. 1964ರ ಭೂ ಕಾಯ್ದೆಯಡಿ ಎಲ್ಲರಿಗೂ ಭೂಖಾತರಿ ಮಾಡಿಕೊಡಲಾಗಿದೆ. ಆದರೆ, ಕೊಡವರನ್ನು ಈ ಹಕ್ಕಿನಿಂದ ದೂರ ಇಡಲಾಗಿದೆ. ಕೊಡವ ಕುಲಶಾಸ್ತ್ರ ಅಧ್ಯಯನಕ್ಕೂ ಪ್ರಬಲರಿಂದ ತಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿರಾಟ್ ಹಿಂದೂಸ್ತಾನ್ ಸಂಗಮ್ (ವಿಎಚ್‍ಎಸ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಮಾತನಾಡಿ, ‘ಸಿಎನ್‍ಸಿ ಸಂಘಟನೆ, ಸಂವಿಧಾನದಡಿ ನ್ಯಾಯುತವಾದ ಹಕ್ಕುಗಳನ್ನು ಕೇಳುತ್ತಿದೆ. ಇದು ರಾಷ್ಟ್ರ ವಿರೋಧಿ ಬೇಡಿಕೆಯಲ್ಲ’ ಎಂದರು.

ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೊಡವರು ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸಿಎನ್‍ಸಿಯ ಹೋರಾಟಕ್ಕೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೊಡವ ಸಂಸ್ಕೃತಿ ಬಿಂಬಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.