ADVERTISEMENT

ದೊಡ್ಡಭಂಡಾರ ಗ್ರಾಮದಲ್ಲಿ ಮಲ್ಲೇಶ್ವರಸ್ವಾಮಿ ದೇಗುಲ ಉದ್ಘಾಟನೆ

45 ವರ್ಷಗಳ ನಂತರ ಪೂಜಾವಿಧಿ ಆರಂಭ, ಹಲವು ಮಠಾಧೀಶರು ಭಾಗಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 5:29 IST
Last Updated 13 ಫೆಬ್ರುವರಿ 2024, 5:29 IST
   

ಶನಿವಾರಸಂತೆ: ಇಲ್ಲಿನ ಕೊಡ್ಲಿಪೇಟೆ ಸಮೀಪದ ದೊಡ್ಡ ಭಂಡಾರ ಗ್ರಾಮದಲ್ಲಿ ಸೋಮವಾರ ಮಲ್ಲೇಶ್ವರ ಸ್ವಾಮಿಯ ದೇಗುಲ ಉದ್ಘಾಟನೆಗೊಂಡಿತು. ಇದರ ಬೆನ್ನಲ್ಲೇ 45 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪೂಜಾವಿಧಿಗಳು ಇಲ್ಲಿ ಆರಂಭಗೊಂಡವು.

ಸೋಮವಾರ ಸಂಜೆ ಗಣಪತಿ ಪೂಜೆಯೊಂದಿಗೆ ಆರಂಭವಾದ ಪೂಜಾವಿಧಿಗಳು ಮ‌ಲ್ಲೇಶ್ವರಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ, ರುದ್ರಹೋಮ ಮೊದಲಾದವು ನಡೆದವು.

ನಂತರ, ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡ್ಲಿಪೇಟೆಯ ಕಿರುಕೊಡ್ಲಿಮಠದ ಮಠಾಧೀಶರಾದ ಸದಾಶಿವ ಸ್ವಾಮೀಜಿ, ‘ರಾಜರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನಕ್ಕೆ ಇತಿಹಾಸ ಮತ್ತು ಶಕ್ತಿ ಇದೆ. ಮನುಷ್ಯ ನೆಮ್ಮದಿಯಿಂದ ಬದುಕಬೇಕಾದರೆ ಧರ್ಮದ ಆಧಾರದಲ್ಲಿ ಬದುಕಬೇಕು. ವಿಜ್ಞಾನದಿಂದ ಅನುಕೂಲವನ್ನು ಪಡೆಯುತ್ತಿದ್ದೇವೆ. ಅನುಕೂಲದ ಜೊತೆಗೆ ನೆಮ್ಮದಿಯ ಜೀವನಕ್ಕೆ ಧಾರ್ಮಿಕ ಕೇಂದ್ರಗಳು ಮುಖ್ಯ. ದೇವರಲ್ಲಿ ಪ್ರಾರ್ಥಿಸುವಾಗ ನ್ಯೂನ್ಯತೆಗಳನ್ನು ದೂರ ಹೋಗುವಂತೆ ಪ್ರಾರ್ಥಿಸಬೇಕು’ ಎಂದು ತಿಳಿಸಿದರು.

ADVERTISEMENT

ಕಲ್ಲು ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ‘ಒಂದು ಊರು ಅಭಿವೃದ್ಧಿಯಾಗಬೇಕಾದರೆ ಪ್ರಕೃತಿಯ ಸೊಬಗನ್ನು ಹೆಚ್ಚಿಸಬೇಕು. ಕೆರೆಕಟ್ಟೆ, ದೇವಸ್ಥಾನ ಶಾಲೆಗಳನ್ನು ನಿರ್ಮಾಣ ಮಾಡಬೇಕು. ಇಂದಿನ ರೈತಾಪಿ ವರ್ಗದವರು ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸಿ ಪೋಷಿಸಿ ಸ್ವಯಂ ಅಭಿವೃದ್ಧಿಗೊಳಿಸಬೇಕು’ ಎಂದು ಕರೆ ನೀಡಿದರು.

ಶ್ರೀ ತಪೋವನ ಮನೆ ಹಳ್ಳಿ ಮಠದ ಮಠಾಧೀಶರಾದ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ‘ಚಂಚಲ ಮನಸ್ಸನ್ನು ದೂರವಾಗಿಡಲು ಸದಾ ದೇವರನ್ನು ಪ್ರಾರ್ಥಿಸಬೇಕು. ಮನುಷ್ಯ ಜಾಗೃತಗೊಂಡು ಸಂಸ್ಕಾರ ಯುಕ್ತ ಕಾರ್ಯ ಮಾಡಬೇಕು. ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಶ್ರದ್ಧಾ ಮನಸ್ಸಿನಿಂದ ಜೀವನ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

ಬಿಜೆಪಿ ಮುಖಂಡ ಅಪ್ಪಚ್ಚುರಂಜನ್ ಮಾತನಾಡಿ, ‘ಒಗ್ಗಟ್ಟಿನಿಂದ ಎಲ್ಲರೂ ಸೇರಿ ದೇವಸ್ಥಾನ ನಿರ್ಮಿಸಿದರೆ ಊರಿಗೆ ನೆಮ್ಮದಿ ಇರುತ್ತದೆ. ಮನುಷ್ಯ ಸುಖದಲ್ಲಿದ್ದಾಗ ದೇವರನ್ನು ಮರೆಯಬಾರದು. ಶಾಂತಿ ನೆಮ್ಮದಿಗಾಗಿ ಸದಾ ದೇವರನ್ನು ಪ್ರಾರ್ಥಿಸಬೇಕು ಹುಟ್ಟೂರನ್ನು ಮರೆಯಬಾರದು. ಹುಟ್ಟೂರನ್ನು ಮರೆತರೆ ತಂದೆ ತಾಯಿಯನ್ನು ಮರೆತಂತೆ’ ಎಂದು ತಿಳಿಸಿದರು

ಇದೇ ವೇಳೆ ವಿಗ್ರಹ ಕೆತ್ತನೆ ಮಾಡಿದ ಕೊಡ್ಲಿಪೇಟೆಯ ಶಿಲ್ಪಿ ಎಚ್.ಎಸ್.ವರಪ್ರಸಾದ್ ಅವರನ್ನು ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಲ್ಲೇಶ್ವರ ದೇವಾಲಯ ಸಮಿತಿಯ ಶಿವರಾಮೇಗೌಡ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಶೇಷೇಗೌಡರು, ಉಪಾಧ್ಯಕ್ಷ ಜವರೇಗೌಡ, ಹಿರಿಯರು ಶಿವರಾಮ್, ಬೆಸೂರು ಗ್ರಾಮ ಪಂಚಾಯತ್, ಉಪಾಧ್ಯಕ್ಷ ಡಿ.ಆರ್.ಹರೀಶ್, ಭಾಗವಹಿಸಿದ್ದರು.

ಮಲ್ಲೇಶ್ವರ ಸ್ವಾಮಿಯ ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಭಕ್ತರು ಪ್ರಸಾದ ಸೇವಿಸಿದರು
ಶನಿವಾರಸಂತೆಯ ಕೊಡ್ಲಿಪೇಟೆ ಸಮೀಪದ ದೊಡ್ಡಭಂಡಾರದಲ್ಲಿ ಉದ್ಘಾಟನೆಗೊಂಡ ದೇಗುಲದಲ್ಲಿನ ಮಲ್ಲೇಶ್ವರ ಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.