ADVERTISEMENT

ತುಂಬಿ ಹರಿದ ಭದ್ರಾ, ಹೇಮಾವತಿ, ತುಂಗಾ: ಹಾರಂಗಿಯ ಒಳಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 4:39 IST
Last Updated 29 ಜೂನ್ 2024, 4:39 IST
<div class="paragraphs"><p>ಕೊಡಗಿನಲ್ಲಿ ಬತ್ತುವ ಹಂತ ತಲುಪಿದ್ದ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿರುವ ದೃಶ್ಯ ಗೋಣಿಕೊಪ್ಪಲಿನ ಬಲ್ಯಮಂಡೂರು– ಹರಿಹರ ಬಳಿ ಕಂಡು ಬಂತು</p></div>

ಕೊಡಗಿನಲ್ಲಿ ಬತ್ತುವ ಹಂತ ತಲುಪಿದ್ದ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿರುವ ದೃಶ್ಯ ಗೋಣಿಕೊಪ್ಪಲಿನ ಬಲ್ಯಮಂಡೂರು– ಹರಿಹರ ಬಳಿ ಕಂಡು ಬಂತು

   

ಮಡಿಕೇರಿ/ಚಿಕ್ಕಮಗಳೂರು:  ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ಹೊರತುಪಡಿಸಿ ಉಳಿದೆಲ್ಲ ಕಡೆ ಶುಕ್ರವಾರ ಮಳೆ ನಿಯಂತ್ರಣಕ್ಕೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ.

ಕುಶಾಲನಗರದಲ್ಲಿ ಬಿಸಿಲಿನ ವಾತಾವರಣವಿದ್ದರೆ, ಮಡಿಕೇರಿಯಲ್ಲಿ ಬಿಸಿಲು, ಮಳೆಯ ಕಣ್ಣಾಮುಚ್ಚಾಲೆ ನಡೆಯಿತು. ಒಂದಷ್ಟು ಹೊತ್ತು ಬಿಸಿಲು, ಒಂದಷ್ಟು ಹೊತ್ತು ಸಾಧಾರಣ ಮಳೆ ದಿನವಿಡೀ ಸುರಿಯಿತು.

ADVERTISEMENT

ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 2,562 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಯಲ್ಲಿ 6 ಸೆಂ.ಮೀ ಹಾಗೂ ಭಾಗಮಂಡಲದಲ್ಲಿ 3 ಸೆಂ.ಮೀ ಮಳೆ ಸುರಿದಿದೆ. ಇನ್ನುಳಿದೆಡೆ ಸಾಧಾರಣ ಮಳೆಯಾಗಿದೆ.

ವರ್ಷಂಪ್ರತಿ ಪ್ರವಾಹ ಉಂಟಾಗುವ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ನೆಲ್ಯಹುದಿಕೇರಿಯ ಬೆಟ್ಟದಕಾಡು, ಕುಂಬಾರಗುಂಡಿ ಹಾಗೂ ಬರಡಿ ಭಾಗದಲ್ಲಿ ನದಿ ತೀರದಲ್ಲಿ ವಾಸಿಸುವ ಜನರಿಗೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಂದಾಯ ಇಲಾಖೆ ನೋಟಿಸ್‌ಗಳನ್ನು ನೀಡುತ್ತಿದೆ.

ಮಡಿಕೇರಿ ಸಮೀಪ ಅಬ್ಬಿಫಾಲ್ಸ್‌ಗೆ ತೆರಳುವ ರಸ್ತೆಯಲ್ಲಿ ಈಚೆಗಷ್ಟೇ ಖಾಸಗಿ ಮಾಲೀಕತ್ವದಲ್ಲಿ ನಿರ್ಮಾಣಗೊಂಡಿದ್ದ ಗಾಜಿನ ಸೇತುವೆಯ ಬುಡದಲ್ಲಿ ಮಣ್ಣು ಕುಸಿತವಾಗಿದೆ. ಕೂಡಲೇ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಸಭೆ ಕರೆದ ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ‘ಗ್ಲಾಸ್ ಬ್ರಿಡ್ಜ್’ಗಳನ್ನು ಸ್ಥಗಿತಗೊಳಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಕಳಸ, ಮೂಡಿಗೆರೆ, ಕೊಪ್ಪ, ಶೃಂಗೇರಿ ಸುತ್ತಮತ್ತ ರಾತ್ರಿ ನಿರಂತರವಾಗಿ ಮಳೆ ಸುರಿಯಿತು. ಶುಕ್ರವಾರ ಬೆಳಿಗ್ಗೆಯಿಂದಲೂ ಆಗೊಮ್ಮೆ ಈಗೊಮ್ಮೆ ಮಳೆಯಾಗಿದ್ದು, ಕೊಟ್ಟಿಗೆಹಾರದಲ್ಲಿ ನಿರಂತರವಾಗಿ ಜಡಿ ಮಳೆ ಸುರಿಯಿತು.

ರಾತ್ರಿ ಮತ್ತು ಬೆಳಗಿನ ಜಾವ ಜಾಸ್ತಿ ಮಳೆ ಇದ್ದುದರಿಂದ ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ಶಾಲೆಗಳಿಗೆ ರಜೆ ನೀಡಲಾಗಿತ್ತು. ಭದ್ರಾ, ಹೇಮಾವತಿ, ತುಂಗಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ಮಳೆ ಬಿಡುವು ನೀಡಿತ್ತು. ಮಂಗಳೂರು ತಾಲ್ಲೂಕಿನ ಉಳಾಯಿಬೆಟ್ಟು ಗ್ರಾಮದ ಮೂಡುಜೆಪ್ಪು ಪ್ರದೇಶದಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆಸಂಪರ್ಕ ಕಡಿತಗೊಂಡಿತ್ತು.  ಬೆಳ್ತಂಗಡಿ ತಾಲ್ಲೂಕು ಬಂದಾರು ಗ್ರಾಮದಲ್ಲಿ ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ.

ಗೋಡೆ ಕುಸಿತ:ವೃದ್ಧೆ ಸಾವು


ಕಾರವಾರ ವರದಿ: ತಾಲ್ಲೂಕಿನ ಆರವ ಗ್ರಾಮದ ತೊರ್ಲೆಬಾಗದಲ್ಲಿ ಸತತ ಮಳೆ ಪರಿಣಾಮ ಸಂಪೂರ್ಣ ಒದ್ದೆಯಾಗಿದ್ದ ಮಣ್ಣಿನ ಗೋಡೆ ಕುಸಿದು ರುಕ್ಮಾ ಯಾನೆ ಗುಲಾಬಿ ಮಾಂಜ್ರೇಕರ (70) ಎಂಬುವರು ಮೃತಪಟ್ಟಿದ್ದಾರೆ.

ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಮಾರಾಟಕ್ಕಿರಿಸಿರುವ ಜೀವಂತ ಏಡಿಗಳು ಪ್ರಜಾವಾಣಿ ಚಿತ್ರ/ರಂಗಸ್ವಾಮಿ

‘ಒಬ್ಬಂಟಿ ವಾಸವಿದ್ದ ರುಕ್ಮಾ ಅವರು ತಮ್ಮ ಮನೆಯ ಎದುರಿನ ಅಂಗಡಿಯ ಕಟ್ಟಡದ ಬಳಿ ತೆರಳಿದ್ದ ವೇಳೆ ಗೋಡೆ ಕುಸಿದು, ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ದುರ್ಘಟನೆ ನಡೆದಿದ್ದು, ಶುಕ್ರವಾರ ನಸುಕಿನಲ್ಲಿ ಗೊತ್ತಾಗಿದೆ’ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕೊಡಗಿನಲ್ಲಿ ಬತ್ತುವ ಹಂತ ತಲುಪಿದ್ದ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿರುವ ದೃಶ್ಯ ಗೋಣಿಕೊಪ್ಪಲಿನ ಬಲ್ಯಮಂಡೂರು– ಹರಿಹರ ಬಳಿ ಕಂಡು ಬಂತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.