ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನ ಕಳೆದಂತೆ ವಲಸೆ ಕಾರ್ಮಿಕರ ವಿರುದ್ಧ ಸ್ಥಳೀಯರ ಅಸಹನೆ ಹೆಚ್ಚುತ್ತಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರ ಅಸ್ಸಾಮಿಗಳ ಸಂಖ್ಯೆಯೂ ಏರುತ್ತಿದೆ. ಇದರ ಮಧ್ಯೆ, ಯಾವುದೇ ತಪ್ಪು ಮಾಡದೇ ಜೀವನೋಪಾಯಕ್ಕೆ ಬಂದಿರುವ ಲಕ್ಷಾಂತರ ವಲಸೆ ಕಾರ್ಮಿಕರು ದುಡಿಮೆ ಮಾಡುತ್ತಿದ್ದಾರೆ. ಸದ್ಯ, ಕೊಡಗಿನಲ್ಲಿ ಕಂಡು ಬರುತ್ತಿರುವ ಚಿತ್ರಣವಿದು.
ಮೊನ್ನೆಯಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಅಸ್ಸಾಂ ಕಾರ್ಮಿಕರ ಬಗ್ಗೆ ಮಾತನಾಡಿ, ತೋಟದ ಮಾಲೀಕರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. ಅಸ್ಸಾಂನಿಂದ ಮಾತ್ರವಲ್ಲ ಹೊರರಾಜ್ಯದಿಂದ ಬರುವ ಯಾವುದೇ ಕಾರ್ಮಿಕರಾದರೂ ಸರಿ ಅವರಿಂದ ಸೂಕ್ತ ದಾಖಲಾತಿಗಳನ್ನು ಪಡೆದುಕೊಂಡೇ ಕೆಲಸ ನೀಡಬೇಕು. ಇಲ್ಲದಿದ್ದರೆ ಕಾರ್ಮಿಕರು ಭಾಗಿಯಾಗುವ ಅಪರಾಧ ಪ್ರಕರಣಗಳಲ್ಲಿ ತೋಟದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ಆಗಿ ಹೇಳಿರುವುದು ವಲಸೆ ಕಾರ್ಮಿಕರ ಸಮಸ್ಯೆಗೆ ಹಿಡಿದ ಕನ್ನಡಿಯಂತಿದೆ.
ಹಾಗೆ ನೋಡಿದರೆ, ಜಿಲ್ಲೆಯಲ್ಲಿ ಅಸ್ಸಾಂನಿಂದ ಬಂದವರು ಎಸಗಿರುವ ಅಪರಾಧ ಕೃತ್ಯಗಳು ಸಾಕಷ್ಟಿವೆ. ಕೇವಲ ಕಳವು ಮಾತ್ರವಲ್ಲ ಹಲ್ಲೆ ಮೊದಲಾದ ಕ್ರೂರ ಪ್ರಕರಣದಲ್ಲೂ ಅವರು ಆರೋಪಿಗಳಾಗಿದ್ದಾರೆ. ಇದರಿಂದ ಸಹಜವಾಗಿಯೇ ಇವರನ್ನು ಕಂಡರೆ ಸ್ಥಳೀಯರಿಗೆ ಭಯ ಶುರುವಾಗಿದೆ.
ಮತ್ತೊಂದೆಡೆ, ಇವರು ಅತ್ಯಂತ ಕಡಿಮೆ ಕೂಲಿ ಪಡೆಯಲು ಒಪ್ಪಿ ಕೆಲಸಕ್ಕೆ ಬರುವುದರಿಂದ ಸ್ಥಳೀಯ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ತೋಟದ ಕೆಲಸ ಸಿಗದೇ ಈಗ ಸ್ಥಳೀಯರು ಬೇರೆ ಕಡೆ ವಲಸೆ ಹೋಗುವಂತಾಗಿದೆ. ಕೆಲವರು ಬಣ್ಣ ಬಳಿಯುವ ಹಾಗೂ ಕಟ್ಟಡ ನಿರ್ಮಾಣ ಚಟುವಟಿಕೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅಸ್ಸಾಂನಿಂದ ಬಂದವರು ನಮ್ಮ ಕೆಲಸ ಕಿತ್ತುಕೊಂಡರು ಎಂಬ ಅಸಮಾಧಾನವೂ ಸ್ಥಳೀಯ ಕಾರ್ಮಿಕರಲ್ಲಿದೆ.
ಇಷ್ಟೆಲ್ಲ ಆರೋಪಗಳ ಮಧ್ಯೆ ಮುಗುಮ್ಮಾಗಿ ಲಕ್ಷಾಂತರ ಮಂದಿ ಅಸ್ಸಾಂನಿಂದ ಬಂದು ಇಲ್ಲಿ ಬೆವರು ಹರಿಸಿ ದುಡಿಯುತ್ತಿದ್ದಾರೆ. ಕಡಿಮೆ ಕೂಲಿ, ಹೆಚ್ಚು ಅವಧಿಯ ಕೆಲಸದಿಂದ ತೋಟದ ಮಾಲೀಕರಿಗೂ ಇವರು ಅಗತ್ಯವಾಗಿಯೇ ಬೇಕು ಎನ್ನುವಂತಾಗಿದೆ.
ಈ ರೀತಿ ಬರುವ ಬಹುತೇಕ ಮಂದಿ ಹೊಟ್ಟೆಪಾಡಿಗಾಗಿ ಬಂದು ಇಲ್ಲಿಯೇ ಪ್ರಾಮಾಣಿಕವಾಗಿ ದುಡಿದು, ಬದುಕು ಕಟ್ಟಿಕೊಂಡಿದ್ದಾರೆ. ತೋಟಗಳಲ್ಲಿ ಲೈನ್‌ಮನೆಗಳಲ್ಲಿ ಮಾತ್ರವಲ್ಲ ಹೊರಗಡೆ ಬಾಡಿಗೆ ಮನೆಗಳಲ್ಲೂ ಸ್ಥಳೀಯರೊಂದಿಗೆ ವಿಶ್ವಾಸದಿಂದ ಬದುಕುತ್ತಿದ್ದಾರೆ. ಆದರೆ, ಆಗೊಮ್ಮೆ ಈಗೊಮ್ಮೆ ಸಂಭವಿಸುವ ಅಪರಾಧ ಚಟುವಟಿಕೆಗಳು ಇವರನ್ನೆಲ್ಲ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.
ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ ನಡೆದ ಮೇಲಂತೂ ಅಸ್ಸಾಂನವರ ಹೆಸರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇಲ್ಲಿದ್ದಾರೆ ಎಂಬ ಅಭಿಪ್ರಾಯವೂ ಬಲವಾಗಿ ಕೇಳಿ ಬರುತ್ತಿದೆ. ಆದರೆ, ಈ ಕುರಿತು ಸ್ಪಷ್ಟತೆ ಇಲ್ಲ ಎಂದಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ‘ಯಾರಾದರೂ ಬಾಂಗ್ಲಾದೇಶದವರು ಎಂಬ ಅನುಮಾನ ಬಂದರೆ ಸಾಕು ಮಾಹಿತಿ ನೀಡಿ’ ಎಂದು ಮನವಿ ಮಾಡುತ್ತಾರೆ.
ಜವಾಬ್ದಾರಿ ನುಣುಚಿಕೊಳ್ಳುತ್ತಿರುವ ಅಧಿಕಾರಿಗಳು: ಅಸ್ಸಾಂ ಕಾರ್ಮಿಕರ ಕುರಿತು ಕೇಳಿ ಬರುತ್ತಿರುವ ಆರೋಪಗಳಿಗೆ ಇಲ್ಲಿನ ಅಧಿಕಾರಿಗಳು ಅಕ್ಷರಶಃ ಕಿವುಡಾಗಿದ್ದಾರೆ. ಪೊಲೀಸರೂ ಜವಾಬ್ದಾರಿಯನ್ನು ತೋಟದ ಮಾಲೀಕರಿಗೆ ವರ್ಗಾಯಿಸಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳೂ ಈ ಕುರಿತು ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ.
ಅಸ್ಸಾಂನಿಂದ ಹೇಗೆ ಇಷ್ಟೊಂದು ಪ್ರಮಾಣದಲ್ಲಿ ಜನರು ಬರುತ್ತಿದ್ದಾರೆ, ಅವರನ್ನು ಕರೆದುಕೊಂಡು ಬರುವ ಮಧ್ಯವರ್ತಿಗಳು ಯಾರು?, ಅದರಿಂದ ಅವರಿಗೆ ಸಿಗುವ ಲಾಭವೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ಪೊಲೀಸರೂ ಕೈ ಹಾಕಿಲ್ಲ.
ಬೀಟ್ ಪೊಲೀಸರಿಂದ ಮಾಹಿತಿ ಸಂಗ್ರಹ ಸುಲಭ: ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಮಾಹಿತಿಯನ್ನು ಬೀಟ್ ಪೊಲೀಸರು ಸುಲಭವಾಗಿ ಪತ್ತೆ ಮಾಡಬಹುದು ಹಾಗೂ ಸಂಗ್ರಹಿಸಬಹುದು. ತಮ್ಮ ಬೀಟ್ ವ್ಯಾಪ್ತಿಯಲ್ಲಿರುವವರ ವಿವರ ಪಡೆದು, ಹೊಸದಾಗಿ ಬಂದವರ ದಾಖಲಾತಿಗಳನ್ನು ಪರಿಶೀಲಿಸಬಹುದು. ಆದರೆ, ಇಂತಹ ಕೆಲಸಗಳು ಜಿಲ್ಲೆಯಲ್ಲಿ ನಡೆದಂತಿಲ್ಲ. ಇದಕ್ಕೆ ಜಿಲ್ಲೆಯ ಬೀಟ್ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳ್ಳಬೇಕಿದೆ.
ಲೈನ್‌ಮನೆಗಳಿಂದ ಬಾಡಿಗೆ ಮನೆಗಳತ್ತ: ಅಸ್ಸಾಂ ಕಾರ್ಮಿಕರು ಈಗ ಲೈನ್‌ಮನೆಗಳಿಂದ ಬಾಡಿಗೆ ಮನೆಗಳಲ್ಲಿ ನೆಲೆಸಲು ಆರಂಭಿಸಿದ್ದಾರೆ. ಲೈನ್‌ಮನೆಗಳಲ್ಲಿ ಇದ್ದರೆ ಕೂಲಿ ಕಡಿಮೆ ಸಿಗುತ್ತದೆ ಎಂಬ ಕಾರಣಕ್ಕೆ ಒಂದೇ ಬಾಡಿಗೆ ಮನೆಯಲ್ಲಿ ಹೆಚ್ಚು ಮಂದಿ ಉಳಿದುಕೊಂಡು, ತೋಟಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಇದರಿಂದ ಕೂಲಿ ಹೆಚ್ಚು ಸಿಗುತ್ತದೆ ಎಂಬುದು ಅವರು ಲೆಕ್ಕಾಚಾರ. ಮನೆಗಳನ್ನು ಬಾಡಿಗೆಗೆ ಕೊಡುವವರೂ ಎಲ್ಲ ದಾಖಲಾತಿಗಳನ್ನು ಪಡೆದುಕೊಂಡು, ಪೂರ್ವಾಪರ ವಿಚಾರಿಸಿಯೇ ನೀಡಬೇಕು.
ಹೊರರಾಜ್ಯದ ಕಾರ್ಮಿಕರ ದಾಖಲಾತಿ ಪಡೆದೇ ಕೆಲಸ ನೀಡಬೇಕು. ಒಂದು ವೇಳೆ ದಾಖಲಾತಿ ಇಲ್ಲದವರು ತೋಟದ ಲೈನ್‌ಮನೆಯಲ್ಲಿದ್ದು ಅವರಿಂದ ಅಪರಾಧ ಕೃತ್ಯಗಳು ಜರುಗಿದರೆ ತೋಟದ ಮಾಲೀಕರನ್ನೂ ಜವಾಬ್ದಾರಿಯನ್ನಾಗಿ ಮಾಡಲಾಗುವುದುಕೆ.ರಾಮರಾಜನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.