ಮಡಿಕೇರಿ: ‘ಪ್ರಜಾವಾಣಿ’ ಪತ್ರಿಕೆ ಬುಧವಾರ ಆಯೋಜಿಸಿದ್ದ ‘ಫೋನ್ ಇನ್’ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ಓದುಗರು ಪ್ರಶ್ನೆಗಳ ಸುರಿಮಳೆಗರೆದರು.
ಬರೋಬ್ಬರಿ ಒಂದು ಗಂಟೆ ನಿರಂತರವಾಗಿ ಕೇಳಿ ಬಂದ ಎಲ್ಲ ಪ್ರಶ್ನೆಗಳಿಗೂ ಜಿಲ್ಲಾಧಿಕಾರಿ ಅವರು ಸಮಾಧಾನದಿಂದ ಉತ್ತರಿಸಿ, ಸಮಸ್ಯೆಗೆ ಪರಿಹಾರಕ್ಕೆ ಸೂಚಿಸಿದರು.
ನಿವೇಶನ ರಹಿತರು ಇನ್ನೆಷ್ಟು ದಿನ ಕಾಯುವುದು ಎಂದು ಪ್ರಶ್ನಿಸಿದರೆ, ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಕಾಟ ತಪ್ಪಿಸಿ ಎಂದು ಕೆಲವರು ಮನವಿ ಮಾಡಿದರು. ಹಸಿ ಕಸವನ್ನು ಮನೆಯಲ್ಲೇ ಗೊಬ್ಬರವನ್ನಾಗಿ ಮಾಡುವುದಕ್ಕೆ ಪ್ರೇರಣೆ ನೀಡಬೇಕು ಎಂಬ ಪರಿಸರ ಕಾಳಜಿಯ ಕರೆಯೂ ಬಂದಿತ್ತು.
‘ಬಿರುನಾಣಿ ಗ್ರಾಮದಿಂದ ಕಂದಾಯ ಇಲಾಖೆಯ ದಾಖಲೆ ಪಡೆಯಲು 70 ಕಿ.ಮೀ ದೂರದ ವಿರಾಜಪೇಟೆಗೆ ಬರಬೇಕಿದೆ. ಪೊನ್ನಂಪೇಟೆಯ ನಾಡಕಚೇರಿಯಲ್ಲೇ ದಾಖಲಾತಿಗಳು ಸಿಗುವಂತೆ ನೋಡಿಕೊಳ್ಳಬೇಕು’ ಎಂದು ವಿರಾಜಪೇಟೆ ತಾಲ್ಲೂಕಿನ ಸೋಮಯ್ಯ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಪೊನ್ನಂಪೇಟೆಯಲ್ಲಿ ತಾಲ್ಲೂಕು ಭವನದ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ’ ಎಂದರು.
‘ಪಾಲಿಬೆಟ್ಟದ ಸರ್ಕಾರಿ ಪಿಯು ಕಾಲೇಜು ಮಳೆಯಿಂದ ಹಾನಿಯಾಗಿದ್ದು, ಕುಸಿಯುವ ಹಂತದಲ್ಲಿದೆ’ ಎಂಬ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಈ ಕುರಿತು ಪರಿಶೀಲಿಸುವ ಭರವಸೆ ನೀಡಿದರು.
ಶನಿವಾರಸಂತೆ ಮಾಜಿ ಸೈನಿಕ ಹರೀಶ್ ಅವರು ಕರೆ ಮಾಡಿ, ಮಾಜಿ ಸೈನಿಕರಿಗೆ ನಿವೇಶನ ಹಂಚಿಕೆ ಕುರಿತು ಪ್ರಸ್ತಾಪಿಸಿದ ಸಮಸ್ಯೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಜಿಲ್ಲೆಯಲ್ಲಿ ಇದಕ್ಕೆಂದೇ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ಆದ್ಯತೆ ಮೇರೆಗೆ ಮಾಜಿ ಸೈನಿಕರಿಗೆ ಹಂಚಿಕೆ ಮಾಡಲಾಗುವುದು’ ಎಂದರು.
ಕ್ರೈಸ್ತರ ಸ್ಮಶಾನಕ್ಕೆ ಹದ್ದುಬಸ್ತು ಮಾಡುವಂತೆ ಕೋರಿದ ಮಾಲ್ದಾರೆಯ ಅಗಸ್ಟನ್ ಅವರಿಗೆ ಸ್ಮಶಾನದ ಆರ್‌ಟಿಸಿ ತೆಗೆದುಕೊಂಡು ಬಂದು ಭೇಟಿ ಮಾಡುವಂತೆ ಸೂಚಿಸಿದರು.
‘ಮಾಲ್ದಾರೆಯ ಸರ್ಕಾರಿ ಶಾಲೆಗೆ ಮಕ್ಕಳು ಕಾಡಂಚಿನಿಂದ ಬರಲು ಬಸ್ ಕೊರತೆ ಇದೆ’ ಎಂಬಆಂಟೋನಿ ಅವರ ಕರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಬಸ್ ಸಂಚರಿಸ ಬೇಕಾದ ವೇಳೆಯನ್ನು ಪತ್ರದಲ್ಲಿ ಬರೆದು ಕೊಡುವಂತೆ ತಿಳಿಸಿದರು.
ಸುಂಟಿಕೊಪ್ಪದ ಟ್ಯಾಕ್ಸಿ ಚಾಲಕರೊಬ್ಬರು ಕರೆ ಮಾಡಿ, ‘ಪ್ರವಾಸಿಗಳಿಗೆ ಜಿಲ್ಲೆಯಲ್ಲಿ ಸೂಕ್ತವಾದ ಶೌಚಾಲಯಗಳು ಇಲ್ಲ, ಇರುವ ಶೌಚಾಲಯಗಳಿಗೂ ನಿರ್ವಹಣೆ ಇಲ್ಲ’ ಎಂದು ದೂರಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸ್ವಚ್ಛ ಭಾರತ ಮಿಷನ್‌ನಡಿ ಶೌಚಾಲಯಗಳನ್ನು ನಿರ್ಮಿಸಿ, ಅದರ ನಿರ್ವಹಣೆಯನ್ನು ಖಾಸಗಿಯವರಿಗೆ ಒಪ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸೋಮವಾರಪೇಟೆಯ ಭೀಮಯ್ಯ ಕರೆ ಮಾಡಿ ಮಳೆ ಹಾನಿಯಿಂದ ಮನೆ ಸಿಕ್ಕಿಲ್ಲ ಎಂದರೆ, ಮಡಿಕೇರಿಯ ಮನಮೋಹನ್ ಸಹ ಮಳೆಹಾನಿಯಿಂದ ಪರಿಹಾರ ಸಿಕ್ಕಿಲ್ಲ ಎಂದರು.
‘ಮಳೆಹಾನಿ ಕುರಿತು ಯಾವುದೇ ಅರ್ಜಿಗಳೂ ಬಾಕಿ ಉಳಿದಿಲ್ಲ’ ಎಂದು ಜಿಲ್ಲಾಧಿಕಾರಿ, ಈ ಕುರಿತ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.