ಮಡಿಕೇರಿ: ದೂರದ ಕೋಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯೊಬ್ಬರ ಕೊಲೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಅದರ ಬೆನ್ನಲ್ಲೇ ಕೊಡಗಿನಲ್ಲಿಯ ವೈದ್ಯರ ಆತಂಕವನ್ನೂ ಹೆಚ್ಚಿಸಿದೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಹಿಂದೆಂದೂ ಕಂಡರಿಯದಷ್ಟು ಸಂಖ್ಯೆಯಲ್ಲಿ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೋಲ್ಕೊತ್ತಾದಲ್ಲಿ ನಡೆದಂತಹ ಘಟನೆ ಮತ್ತೆಂದೂ ಇನ್ನೆಲ್ಲೂ ನಡೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಮಾತ್ರವಲ್ಲ, ಕೊಡಗಿನಲ್ಲಿಯೂ ವೈದ್ಯರಿಗೆ ಭದ್ರತೆ ಬೇಕು ಎಂದು ಬಹುತೇಕ ಮಂದಿ ಹೇಳಿದ್ದು ಪ್ರತಿಭಟನೆಯಲ್ಲಿ ಕೇಳಿ ಬಂತು
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸಾಕಷ್ಟು ದೂರದಲ್ಲಿದೆ. ಕಾಡಿನಂತಹ ಪರಿಸರದ ಮಧ್ಯೆ ಬಿಕೊ ಎನ್ನುವಂತಹ ವಾತಾವರಣದಲ್ಲಿ ಕಾಲೇಜಿನ ಕಟ್ಟಡ ಕಟ್ಟಲಾಗಿದೆ. ಕಳೆದ ವರ್ಷವಷ್ಟೇ ಇಲ್ಲಿ ವ್ಯಕ್ತಿಯೊಬ್ಬ ಅಸಭ್ಯ ವರ್ತನೆ ತೋರಿದ್ದ. ಮಾತ್ರವಲ್ಲ, ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ನಡೆಸಿ ಜಿಲ್ಲಾಡಳಿದ ಗಮನ ಸೆಳೆದಿದ್ದರು.
ಪ್ರತಿಭಟನೆ ನಂತರ ಮಾತ್ರವೇ ಕಾಲೇಜಿಗೆ ಗೇಟ್ ಅನ್ನು ಅಳವಡಿಸಲಾಯಿತು. ಭದ್ರತಾ ಸಿಬ್ಬಂದಿಯೊಬ್ಬರನ್ನು ನಿಯೋಜಿಸಲಾಯಿತು. ಆದರೆ, ಇದು ಸಾಕಾಗುತ್ತಿಲ್ಲ ಎಂಬುದು ವೈದ್ಯ ವಿದ್ಯಾರ್ಥಿಗಳ ಅಳಲು.
ನಗರದಿಂದ ಹೊರಟರೆ ಕಾಲೇಜಿನವರಗೆ ಮಾತ್ರವಲ್ಲ, ಅಲ್ಲಿಂದ ಮುಂದಕ್ಕೂ ಒಂದೇ ಒಂದು ಪೊಲೀಸ್ ಚೌಕಿಯಾಗಲಿ, ಪೊಲೀಸ್ ಹೊರಠಾಣೆಯಾಗಲಿ ಇಲ್ಲ. ಸಾವಿರಾರು ಸಂಖ್ಯೆಯಲ್ಲಿರುವ ವೈದ್ಯ ವಿದ್ಯಾರ್ಥಿಗಳಿಗೆ ಏನಾದರೂ ಹಾನಿಯದರೆ ಕನಿಷ್ಠ ಅಂಬುಲೆನ್ಸ್ ಸೇವೆಯೂ ಅಲ್ಲಿಲ್ಲ. ಇತ್ತೀಚೆಗೆ ಈ ಭಾಗದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ, ಈ ಭಾಗದಲ್ಲಿ ಕನಿಷ್ಠ ಒಂದು ಪೊಲೀಸ್ ಹೊರಠಾಣೆಯನ್ನಾದರೂ ತೆರೆಯಬೇಕು ಎನ್ನುವುದು ಅವರ ಒತ್ತಾಯ.
ಇನ್ನು ಕಾಲೇಜಿಗೆ ಸೇರುವ ಭೋದನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಒಂದು ಪೊಲೀಸ್ ಹೊರಠಾಣೆ ಇದೆಯಾದರೂ ಅದು ಹೆಚ್ಚು ಸಕ್ರಿಯವಾಗಿಲ್ಲ ಎಂಬುದು ವೈದ್ಯರ ದೂರು. ಹೆಚ್ಚಿನ ಸಮಯ ಇಲ್ಲಿ ಪೊಲೀಸರು ಇರುವುದೇ ಇಲ್ಲ ಎಂದು ಬಹುತೇಕ ವೈದ್ಯರು ದೂರುತ್ತಾರೆ.
ಇನ್ನು ಇದರ ಎದುರು ಇರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕನಿಷ್ಠ ಒಂದೇ ಒಂದು ಪೊಲೀಸ್ ಹೊರಠಾಣೆಯೂ ಇಲ್ಲ. ಇಲ್ಲಿ ಏನಾದರೂ ಗಲಾಟೆಗಳಾದರೆ ತಕ್ಷಣಕ್ಕೆ ಸಹಾಯಕ್ಕೆ ಬರಲು ಒಂದು ಹೊರಠಾಣೆ ಬೇಕು ಎನ್ನುವುದು ಇಲ್ಲಿಯವರ ಅಭಿಪ್ರಾಯ.
ಎರಡೂ ಆಸ್ಪತ್ರೆಗಿರುವ ಸುರಂಗ ಮಾರ್ಗದಲ್ಲಿ ಭದ್ರತೆ ಎಂಬುದು ಮರೀಚಿಕೆ ಎನಿಸಿದೆ. ಇಲ್ಲಿ ಆಸ್ಪತ್ರೆಗೆ ಸಂಬಂಧಪಡದ ವ್ಯಕ್ತಿಗಳೇ ಕುಳಿತಿರುತ್ತಾರೆ. ರಾತ್ರಿ ವೇಳೆ ಇಲ್ಲಿ ನಡೆದಾಡುವುದು ಭಯ ತರಿಸುವಂತಿದೆ ಎಂದು ಕೆಲವು ವೈದ್ಯರು ಹೇಳುತ್ತಾರೆ. ಇಲ್ಲಿ ಕನಿಷ್ಠ ಒಬ್ಬ ಭದ್ರತಾ ಸಿಬ್ಬಂದಿಯನ್ನಾದರೂ ನಿಯೋಜಿಸಬೇಕು ಎನ್ನುವುದು ಅವರ ಆಗ್ರಹವಾಗಿದೆ.
ಸ್ವಯಂಘೋಷಿತ ಸ್ವಯಂಸೇವಕರ ಕಡಿವಾಣಕ್ಕೆ ಒತ್ತಾಯ
ಆಸ್ಪತ್ರೆಯಲ್ಲಿ ಸ್ವಯಂಘೋಷಿತ ಸ್ವಯಂಸೇವಕರು ಇದ್ದು, ಅವರ ಕಡಿವಾಣಕ್ಕೂ ಕ್ರಮ ಕೈಗೊಳ್ಳಬೇಕು ಎಂದು ವೈದ್ಯರು ಆಗ್ರಹಿಸುತ್ತಾರೆ. ಕೆಲವರು ತಮ್ಮನ್ನು ಸ್ವಯಂಸೇವಕರು ಎಂದು ಪರಿಚಯಿಸಿಕೊಂಡು ತಮ್ಮವರಿಗೆ ಮೊದಲು ಚಿಕಿತ್ಸೆ ನೀಡಬೇಕು ಎಂದು ಹಠ ಹಿಡಿಯುತ್ತಾರೆ. ಇದರಿಂದ ಬಹಳಷ್ಟು ಹೊತ್ತಿನಲ್ಲಿ ಸಾಲಿನಲ್ಲಿ ನಿಂತವರಿಗೂ ಇವರಿಗೂ ಜಗಳಗಳಾಗಿವೆ. ನಿರಾಕರಿಸಿದರೆ ಅವರು ವೈದ್ಯರೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ಇಂತಹ ಅನೇಕ ಘಟನೆಗಳು ನಡೆದಿದ್ದರೂ ಯಾರೊಬ್ಬರೂ ದೂರು ನೀಡಲು ಮುಂದಾಗಿಲ್ಲ ಎಂದು ಕೆಲವು ವೈದ್ಯರು ಹೇಳುತ್ತಾರೆ.
ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ರೋಗಿಗಳ ಕಡೆಯವರು ಜಿಲ್ಲಾಸ್ಪತ್ರೆಯಲ್ಲಿ ಗಲಾಟೆ ನಡೆಸಿದ್ದರು. ಆ ವೇಳೆ ತಕ್ಷಣಕ್ಕೆ ಪೊಲೀಸರು ಬರಲಿಲ್ಲ. ದೂರು ನೀಡಲೂ ಠಾಣೆಗೆ ವೈದ್ಯರು ಬರಬೇಕು ಎಂದು ಹೇಳುತ್ತಾರೆ. ಎಲ್ಲ ಕೆಲಸ ಬಿಟ್ಟು ಠಾಣೆಗೆ ಹೋಗಿ ದೂರು ನೀಡಬೇಕಿದೆ ಎಂದು ಮತ್ತೊಬ್ಬ ವೈದ್ಯರು ಅಳಲು ತೋಡಿಕೊಳ್ಳುತ್ತಾರೆ.
ಮಾಹಿತಿ ಹಕ್ಕು ಕಾರ್ಯಕರ್ತರು ಎಂದು ಹೇಳಿಕೊಂಡ ಕೆಲವರು ವೈದ್ಯರನ್ನು ಬ್ಲಾಕ್ ಮೇಲ್ ಮಾಡುತ್ತಾರೆ ಎನ್ನುವ ಆರೋಪಗಳನ್ನೂ ವೈದ್ಯರು ಮಾಡುತ್ತಾರೆ.
ಆಸ್ಪತ್ರೆಯಲ್ಲಿ ವಿಶ್ರಾಂತಿಗೆ ಸಾಕಷ್ಟು ವ್ಯವಸ್ಥೆ ಇಲ್ಲ. ಸುರಕ್ಷಿತವಾದ ವಿಶ್ರಾಂತಿ ಕೊಠಡಿಗಳನ್ನು ವೈದ್ಯರಿಗೆ ನೀಡಬೇಕಿದೆ. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗಂತೂ ಹಾಸ್ಟೆಲ್‌ನ ಸೌಕರ್ಯವೂ ಇಲ್ಲಿಲ್ಲ. ಅವರಿಗೆ ಇಲ್ಲಿ ನೀಡುತ್ತಿರುವುದು ಇತರ ರಾಜ್ಯಗಳಿಗಿಂತ ಕಡಿಮೆ ಶಿಷ್ಯವೇತನ ಹಾಗೂ ತೆರಬೇಕಾಗಿರುವುದು ಹೆಚ್ಚು ಶುಲ್ಕ. ಈ ಮಧ್ಯೆ ಹಾಸ್ಟೆಲ್ ಇಲ್ಲದೇ ಇರುವುದರಿಂದ ಅವರು ಬಾಡಿಗೆ ಮನೆಗಳಲ್ಲೇ ವಾಸ ಮಾಡಬೇಕಿದೆ. ಪ್ರವಾಸಿ ಸ್ಥಳ ಎನಿಸಿರುವ ಮಡಿಕೇರಿಯಲ್ಲಿ ಮನೆಗಳ ಬಾಡಿಗೆ ದರವೂ ದುಬಾರಿ. ಇದರಿಂದ ಬಹು ಕಷ್ಟದಲ್ಲೇ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಚೆಗೆ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಬಂದಿದ್ದಾಗಲೂ ಅವರಿಗೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು.
ಈ ಬಗೆಯ ಅಸುರಕ್ಷಿತತೆಯಿಂದಾಗಿಯೇ ಇಲ್ಲಿ ಕಲಿತವರು ಮಾತ್ರವಲ್ಲ ಹೊರ ಜಿಲ್ಲೆಯಲ್ಲಿ ಕಲಿತ ವೈದ್ಯ ವಿದ್ಯಾರ್ಥಿಗಳು ಇಲ್ಲಿ ಕೆಲಸ ಮಾಡಲು ಬಯಸುತ್ತಿಲ್ಲ. ವರ್ಗಾವಣೆಯಾದ ವೈದ್ಯರೂ ಹೊರ ಜಿಲ್ಲೆಗೆ ವರ್ಗಾವಣೆಯಾಗಿ ಹೋಗಲು ತುದಿಗಾಲ ಮೇಲೆ ನಿಂತಿರುತ್ತಾರೆ. ಇದರಿಂದಾಗಿಯೇ ಹೆಚ್ಚಿನ ವೈದ್ಯರು ಇಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ಒಂದು ವೇಳೆ ಈ ಅವ್ಯವಸ್ಥೆಗಳನ್ನೆಲ್ಲ ಪರಿಹರಿಸಿ ವೈದ್ಯರಲ್ಲಿ ಸಂಪೂರ್ಣ ಸುರಕ್ಷಿತ ಭಾವನೆ ಮೂಡಿಸದಿದ್ದರೆ ಈಗ ಇರುವ ವೈದ್ಯರ ಕೊರತೆ ನೀಗುವುದಿಲ್ಲ. ಮಾತ್ರವಲ್ಲ, ವೈದ್ಯರ ಬರವನ್ನೇ ಜಿಲ್ಲೆ ಎದುರಿಸಬೇಕಾಗಬಹುದು.
ಪ್ರತಿಕ್ರಿಯೆಗಳು ಕೊಡಗು ವೈದ್ಯಕೀಯ ಕಾಲೇಜು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಒಟ್ಟು 3 ಪೊಲೀಸ್ ಹೊರಠಾಣೆಗಳ ಬೇಕು. ಕೇವಲ ಠಾಣೆಯನ್ನು ಶುರು ಮಾಡುವುದರಿಂದ ಅಥವಾ ಸಹಿ ಹಾಕಿ ಹೊರಡುವ ಪೊಲೀಸರಿಂದ ಯಾವುದೇ ಪ್ರಯೋಜನ ಇಲ್ಲ. ಅವುಗಳಲ್ಲಿ ದಿನದ 24 ಗಂಟೆಗಳ ಕಾಲವೂ ಪೊಲೀಸರೂ ಇರುವಂತೆ ನೋಡಿಕೊಳ್ಳಬೇಕು.
-ಡಾ.ಸಂತೋಷ್ ಕಿರಿಯ ವೈದ್ಯರ ಸಂಘದ ಅಧ್ಯಕ್ಷ.
ಸುರಂಗದಲ್ಲಿ ಭದ್ರತೆ ಬೇಕು ಕೊಡಗು ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೂ ಇರುವ ಸುರಂಗದಲ್ಲಿ ಭದ್ರತೆ ಬೇಕು. ಕನಿಷ್ಠ ಇಲ್ಲಿ ಒಬ್ಬರಾದರೂ ಭದ್ರತಾ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು.
-ಡಾ.ಪ್ರಜ್ವಲ್ ಕಿರಿಯ ವೈದ್ಯರ ಸಂಘದ ಸಂಘದ
ಪ್ರತಿ ಅಂತಸ್ತಿನಲ್ಲೂ ಭದ್ರತಾ ಸಿಬ್ಬಂದಿ ಬೇಕು ಆಸ್ಪತ್ರೆಯಲ್ಲಿ ಪ್ರತಿ ಅಂತಸ್ತಿನಲ್ಲಿಯೂ ಕನಿಷ್ಠ ಒಬ್ಬರಾದರೂ ಭದ್ರತಾ ಸಿಬ್ಬಂದಿ ಇರಬೇಕು. ಆಗ ಒಂದಿಷ್ಟು ಸುರಕ್ಷತಾ ಭಾವನೆ ಉಂಟಾಗುತ್ತದೆ. ಇನ್ನು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ತುಂಬಾ ಕಡಿಮೆ ಇದೆ. ಶುಲ್ಕ ಮಾತ್ರ ಹೆಚ್ಚಿದೆ. ಇದರ ವಿರುದ್ಧ ನಾವು ಈಗಾಗಲೇ ಆ. 5ರಿಂದ 12ರವರೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದೆವು.
-ಡಾ.ಪವನ್ ಸ್ಥಾನೀಯ ವೈದ್ಯರ ಸಂಘ (ಆರ್‌ಡಿಐ)ದ ಅಧ್ಯಕ್ಷ.
ಪೊಲೀಸರು ಕಣ್ಣಿಗೆ ಕಾಣುವಂತಿದ್ದರೆ ಸಾಕು ಬಹಳಷ್ಟು ಸಂದರ್ಭಗಳಲ್ಲಿ ಪೊಲೀಸರು ಕಣ್ಣಿಗೆ ಬಿದ್ದರೆ ಸಾಕು ಯಾವುದೇ ಗಲಾಟೆಗಳು ಸಂಭವಿಸುವುದಿಲ್ಲ. ಅವರು ಇದ್ದರೆ ಎಂದರೆ ಕಿಡಿಗೇಡಿಗಳಿಗೆ ಒಂದು ಬಗೆಯ ಭಯ ಇರುತ್ತದೆ. ಹಾಗಾಗಿ ಕನಿಷ್ಠ ತುತ್ತು ಚಿಕಿತ್ಸಾ ಸೇವಾ ಘಟಕದ ಬಳಿಯಾದರೂ ದಿನದ 24 ಗಂಟೆಗಳ ಕಾಲ ಒಬ್ಬರಾದರೂ ಪೊಲೀಸರು ಇರಬೇಕು
-ಡಾ.ಅರ್ಜುನ್ ಸಿ ಶೆಟ್ಟಿ ಕಿರಿತ ವೈದ್ಯರು.
ದುರ್ಘಟನೆಗಳು ಸಂಭವಿಸುವುದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕು ಕೋಲ್ಕೊತ್ತಾದಲ್ಲಿ ನಡೆದಂತಹ ದುರ್ಘಟನೆಗಳು ಸಂಭವಿಸುವುದಕ್ಕೂ ಮುನ್ನವೇ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ಇಲಾಖೆ ಕಾಲೇಜಿನ ಆಡಳಿತ ಮಂಡಳಿ ಎಲ್ಲರೂ ಒಟ್ಟಾಗಿ ಒಂದು ಬಾರಿಯಾದರೂ ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಬೇಕು
- ಡಾ.ವಿಶ್ವಾಸ ಗೌಡ ಕಿರಿಯ ವೈದ್ಯರು.
ಭದ್ರತಾ ನ್ಯೂನತೆಗಳ ಪರಿಶೀಲನೆಗೆ ಸಮಿತಿ ಭದ್ರತಾ ನ್ಯೂನತೆಗಳನ್ನು ಕುರಿತು ಪರಿಶೀಲನೆ ನಡೆಸಲು ಸಮಿತಿಯೊಂದರನ್ನು ರಚಿಸಲಾಗಿದೆ. ಸಮಿತಿ ಸಮಗ್ರವಾಗಿ ಕಾಲೇಜು ಆಸ್ಪತ್ರೆಗಳನ್ನು ಪರಿಶೀಲಿಸಿ ವರದಿ ನೀಡಲಿದೆ. ಈ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಹೆಚ್ಚುವರಿ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು
-ಡಾ.ವಿಶಾಲ್ ಕೊಡಗು ವೈದ್ಯಕೀಯ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ.
ಘಟನೆ ಖಂಡನೀಯ ಕೋಲ್ಕೊತ್ತಾದಲ್ಲಿ ನಡೆದ ಘಟನೆ ಖಂಡನೀಯ. ಅಂತಹ ಘಟನೆ ಎಲ್ಲೂ ನಡೆಯಬಾರದು. ಕೊಡಗಿನಲ್ಲೂ ವೈದ್ಯರ ಭದ್ರತೆಗೆ ಅಗತ್ಯ ಕ್ರಮ ವಹಿಸಲಾಗುವುದು.
- ಡಾ.ಮಂತರ್‌ಗೌಡ ಶಾಸಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.