ಮಡಿಕೇರಿ: ಕೊಡವರ ಸ್ವಯಂ-ನಿರ್ಣಯದ ಹಕ್ಕುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಗೌರವಿಸಬೇಕು ಮತ್ತು ಖಾತರಿಪಡಿಸಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ‘ಪ್ರಾಚೀನ ಆದಿಮ ಸಂಜಾತ ಸೂಕ್ಷ್ಮ ಜನಾಂಗ ಕೊಡವರನ್ನು ವಿಶ್ವ ರಾಷ್ಟ್ರ ಸಂಸ್ಥೆಯ ನಿರ್ಣಯ 217ಎ(III) ರನ್ವಯ ಮಾನ್ಯತೆ ನೀಡಿ ಕೊಡವರ ಸ್ವಯಂ-ನಿರ್ಣಯದ ಹಕ್ಕುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಗೌರವಿಸಬೇಕು ಮತ್ತು ಖಾತರಿಪಡಿಸಬೇಕು’ ಎಂದು ಒತ್ತಾಯಿಸಿದರು.
ಜೊತೆಗೆ, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡಬೇಕು ಎಂದು ಆಗ್ರಹಿಸಿದರು.
ಕೊಡವರು ಅಳಿವಿನಂಚಿನಲ್ಲಿರುವ ಸಮುದಾಯವಾಗಿದ್ದು, ಸಂವಿಧಾನದಡಿ ರಕ್ಷಣೆ ನೀಡಬೇಕು. ಸಮಗ್ರ ಜನಾಂಗೀಯ ಕುಲಶಾಸ್ತ್ರ ಅಧ್ಯಯನ ನಡೆಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಮನವಿ ಪತ್ರ ಸ್ವೀಕರಿಸಿದರು.
ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರು ಗುರು- ಕಾರೋಣ, ಸೂರ್ಯ-ಚಂದ್ರ, ಕಾವೇರಿ, ಭೂಮಿ ತಾಯಿ, ಪ್ರಕೃತಿ ಮಾತೆ ಮತ್ತು ಸಂವಿಧಾನದ ಹೆಸರಿನಲ್ಲಿ ಸಿಎನ್‍ಸಿಯ ರಾಜ್ಯಾಂಗದತ್ತ ಬೇಡಿಕೆಯ ಪರ ಪ್ರಮಾಣ ವಚನ ಸ್ವೀಕರಿಸಿದರು.
ಮುಖಂಡರಾದ ಬೊಳ್ಳಮ್ಮ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಬೊಟ್ಟಂಗಡ ಸವಿತಾ, ಚೋಳಪಂಡ ಜ್ಯೋತಿ ನಾಣಯ್ಯ, ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಚೆಪ್ಪುಡಿರ ಜಾನ್ಸಿ ಪೊನ್ನಪ್ಪ, ಜಮ್ಮಡ ಮೋಹನ್, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಚಂಬಂಡ ಜನತ್, ಮಂದಪಂಡ ಮನೋಜ್, ಕಾಟುಮಣಿಯಂಡ ಉಮೇಶ್, ಪಾರ್ವಂಗಡ ನವೀನ್, ಮಣವಟ್ಟಿರ ಚಿಣ್ಣಪ್ಪ ಭಾಗವಹಿಸಿದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.