ADVERTISEMENT

ಏಲಕ್ಕಿ ಜತೆಗೆ ಸಮಗ್ರ ಕೃಷಿ; ಯಶಸ್ಸು ಕಂಡ ತೀರ್ಥಾನಂದ್‌

ಮನೆ ಸದಸ್ಯರೂ ಕೃಷಿ ಕೆಲಸದಲ್ಲಿ ತೊಡಗಿದರೆ ಲಾಭ ಅಧಿಕ

ಶ.ಗ.ನಯನತಾರಾ
Published 21 ಅಕ್ಟೋಬರ್ 2022, 6:52 IST
Last Updated 21 ಅಕ್ಟೋಬರ್ 2022, 6:52 IST
ಶನಿವಾರಸಂತೆ ಸಮೀಪದ ಬಿಳಾಹ ಗ್ರಾಮದ ಪ್ರಗತಿಪರ ಏಲಕ್ಕಿ ಬೆಳೆಗಾರ ಬಿ.ಕೆ.ತೀರ್ಥಾನಂದ್ ಪತ್ನಿ ಶ್ವೇತಾ ಜತೆ ಏಲಕ್ಕಿ ತೋಟದಲ್ಲಿ
ಶನಿವಾರಸಂತೆ ಸಮೀಪದ ಬಿಳಾಹ ಗ್ರಾಮದ ಪ್ರಗತಿಪರ ಏಲಕ್ಕಿ ಬೆಳೆಗಾರ ಬಿ.ಕೆ.ತೀರ್ಥಾನಂದ್ ಪತ್ನಿ ಶ್ವೇತಾ ಜತೆ ಏಲಕ್ಕಿ ತೋಟದಲ್ಲಿ   

ಶನಿವಾರಸಂತೆ: ಸಾಂಬಾರ ಪದಾರ್ಥಗಳ ರಾಣಿ ‘ಏಲಕ್ಕಿ’. ಸುವಾಸನೆಯಿಂದಷ್ಟೇ ಅಲ್ಲ, ಧಾರಣೆಯಲ್ಲೂ ಗಗನಕ್ಕೇರಿರುವ ವಾಣಿಜ್ಯ ಬೆಳೆ. ಈ ಬೆಳೆಯ ಬಗ್ಗೆ ಒಲವು ಮೂಡಿಸಿಕೊಂಡು ‘ನೆಲ್ಯಾಣಿ ಗೋಲ್ಡ್’ ಏಲಕ್ಕಿ ಜತೆಗೆ ಕಾಫಿ, ಕಾಳುಮೆಣಸು, ಬಟರ್ ಫ್ರೂಟ್, ವೆನಿಲ್ಲಾ ಸಹ ಬೆಳೆದು ಯಶಸ್ವಿಯಾಗಿ ಪ್ರಗತಿಪರ ಕೃಷಿಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಬಿ.ಕೆ.ತೀರ್ಥಾನಂದ್‌.

ಸಮೀಪದ ಬಿಳಾಹ ಗ್ರಾಮದಲ್ಲಿ 4 ವರ್ಷದ ಹಿಂದೆ 10 ಎಕರೆ ಕಾಫಿ ತೋಟದಲ್ಲಿ 4 ಎಕರೆಯಷ್ಟು ಜಾಗದಲ್ಲಿ ಮರ ತೆಗೆಸಿ ಏಲಕ್ಕಿ ತೋಟ ಮಾಡಿದ ತೀರ್ಥಾನಂದ ಹೋಬಳಿಯ ಬೆರಳೆಣಿಕೆಯ ಏಲಕ್ಕಿ ಬೆಳೆಗಾರರಲ್ಲಿ ಒಬ್ಬರಾಗಿದ್ದು, ಯಶಸ್ವಿಯಾಗಿದ್ದಾರೆ.

ಪದವಿ ಪಡೆಯುವ ಮೊದಲೇ ಕೃಷಿಯಲ್ಲಿ ಆಸಕ್ತಿ ಮೂಡಿಸಿದ ರೈತ ತಂದೆ ಬಿ.ಕೆ.ಕರೇಗೌಡ ತಾಯಿ ಗೌರಮ್ಮ ಅವರೆ ತನಗೆ ಆದರ್ಶ ಎನ್ನುವ ತೀರ್ಥಾನಂದ, 30 ವರ್ಷದಿಂದ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 13 ವರ್ಷಗಳ ಹಿಂದೆ ಜೀವನ ಸಂಗಾತಿಯಾಗಿ ಬಂದ ಶ್ವೇತಾ ಕೃಷಿಯಲ್ಲಿ ಒಲವು ಮೂಡಿಸಿಕೊಂಡು ಪತಿಗೆ ಸಾಥ್ ನೀಡುತ್ತಾ ತಾವೂ ಕಾರ್ಮಿಕರ ಜತೆ ದುಡಿಯುತ್ತಾರೆ.

ADVERTISEMENT

ತೋಟದಲ್ಲಿ 2 ಸಾವಿರ ನೆಲ್ಯಾಣಿ ಗೋಲ್ಡ್ (ಹಸಿರು ಏಲಕ್ಕಿ) ಏಲಕ್ಕಿ ಗಿಡವಿದೆ. ನೆರಳಿನ ಜತೆಗೆ ಗಿಡಗಳಿಗೆ ಅಧಿಕ ನೀರಿನ ಅವಶ್ಯಕತೆಯಿದೆ. ಕೊಳವೆ ಬಾವಿಯ ನೀರನ್ನು ಮೈಕ್ರೊ ವ್ಯವಸ್ಥೆಯಲ್ಲಿ ಹಾಯಿಸುತ್ತಾರೆ. ಕಳೆ ತೆಗೆಸಿ, ವರ್ಷಕ್ಕೆ 10 ತಿಂಗಳಲ್ಲಿ 12 ಬಾರಿ ಸ್ಪ್ರೆ ಮಾಡಿಸುತ್ತಾರೆ. ಸಾವಯವದ ಜತೆಗೆ ರಾಸಾಯನಿಕ ಗೊಬ್ಬರವನ್ನೂ ಬಳಸುತ್ತಾರೆ. ವರ್ಷಕ್ಕೆ ₹ 5 ಲಕ್ಷ ಖರ್ಚು ಮಾಡಿದರೆ ₹ 7-8 ಲಕ್ಷ ಆದಾಯ ಲಭಿಸಿ ₹ 2-3 ಲಕ್ಷ ಲಾಭ ಗಳಿಸುತ್ತಿದ್ದಾರೆ.

ಸಕಲೇಶಪುರದ ಕಂಪನಿಗೆ ಏಲಕ್ಕಿ ಮಾರಾಟ ಮಾಡುವ ತೀರ್ಥಾನಂದ್, ಕಳೆದ ವರ್ಷ 1,400 ಕೆ.ಜಿ. ಏಲಕ್ಕಿ ಬೆಳೆದಿದ್ದರು. ಈ ವರ್ಷ ಅತಿವೃಷ್ಟಿಯ ಕಾರಣದಿಂದ 600-700 ಕೆ.ಜಿ. ಏಲಕ್ಕಿ ಕೊಯ್ದು ಮಾರಾಟ ಮಾಡಿದ್ದಾರೆ. ಪ್ರಸ್ತುತ ಮಾರಕಟ್ಟೆಯಲ್ಲಿ ನೆಲ್ಯಾಣಿ ಗೋಲ್ಡ್ ಏಲಕ್ಕಿ ಧಾರಣೆ ₹ 600-1,600 ಹಾಗೂ ಎಸ್‌ಕೆಪಿ (ಹಳದಿ ಏಲಕ್ಕಿ) ₹ 350-600 ಇದೆ.

ಏಲಕ್ಕಿ ಕಾಯಿ ಜತೆಗೆ ಏಲಕ್ಕಿ ಕಂದನ್ನು (ಗಿಡ) ಇವರು ಮಾರಾಟ ಮಾಡುತ್ತಾರೆ. ಕಳೆದ ವರ್ಷ ಗಿಡವೊಂದಕ್ಕೆ ₹ 100ಕ್ಕೆ ಮಾರಾಟ ಮಾಡಿದ್ದು, ಈ ವರ್ಷ ₹ 60ಕ್ಕೆ ಮಾರಾಟ ಮಾಡಿದ್ದಾರೆ. ತೋಟದಲ್ಲಿ ಕಾಫಿ, ಕಾಳುಮೆಣಸು, ಬಟರ್ ಫ್ರೂಟ್, ವೆನಿಲ್ಲಾ ಬೆಳೆಯುತ್ತಿದ್ದು, 150 ಬಟರ್ ಫ್ರೂಟ್ ಮರಗಳಿವೆ. 2 ವರ್ಷಗಳಿಂದ ವೆನಿಲ್ಲಾ ಬೆಳೆಯುತ್ತಿರುವ ತೀರ್ಥಾನಂದ್ 700 ಗಿಡಗಳನ್ನು ನೆಟ್ಟಿದ್ದಾರೆ.

ಸೋಮವಾರಪೇಟೆ ತಾಲ್ಲೂಕು ಕೃಷಿ ಇಲಾಖೆ ತೀರ್ಥಾನಂದ್ ಅವರನ್ನು ಪ್ರಗತಿಪರ ಕೃಷಿಕನಾಗಿ ಗುರುತಿಸಿ, ನಗದು ಬಹುಮಾನ ನೀಡಿ ಪುರಸ್ಕರಿಸಿದೆ. ಕೃಷಿಯಿಂದಲೇ ಜೀವನ ಸಾಗಿಸುತ್ತಿರುವ ತೀರ್ಥಾನಂದ್ ಇತರ ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.