ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನ. ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅಂತರ ಗ್ರಾಮ ಹಾಕಿ ಟೂರ್ನಿಯ ಗುರುವಾರದ ಪಂದ್ಯಗಳು ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದವು.
ಬೇತು ಮತ್ತು ಪುಲಿಕೋಟು ತಂಡಗಳ ನಡುವಿನ ಪಂದ್ಯ ಹಾಗೂ ಬಲ್ಲಮಾವಟಿ (ವೈಟ್) ಮತ್ತು ನಾಲಡಿ ತಂಡಗಳ ನಡುವಿನ ಪಂದ್ಯ ಗ್ರಾಮೀಣ ವೀಕ್ಷಕರಿಗೆ ಭರಪೂರ ರಂಜನೆ ನೀಡಿದವು. ಎರಡು ಪಂದ್ಯಗಳಲ್ಲಿ ಸಮಬಲದ ಹೋರಾಟ ನಡೆಯಿತು. ಬೇತು, ಯವಕಪಾಡಿ, ಬಲ್ಲಮಾವಟಿ (ವೈಟ್) ಮತ್ತು ಮರಂದೋಡ ತಂಡಗಳು ಸೆಮಿ ಫೈನಲ್ ಪ್ರವೇಶಿಸಿದವು.
ದಿನದ ಮೊದಲ ಪಂದ್ಯದಲ್ಲಿ ಮರಂದೋಡ ತಂಡ ಕುಂಜಿಲ ತಂಡದ ವಿರುದ್ಧ 3-1 ಅಂತರದಿಂದ ಜಯಗಳಿಸಿತು. ಮರಂದೋಡ ತಂಡದ ಆಟಗಾರರಾದ ಪೊನ್ನಣ್ಣ ಒಂದು ಹಾಗೂ ಸುಬ್ರಮಣಿ ಎರಡು ಗೋಲು ಗಳಿಸಿದರು. ಕುಂಜಿಲ ತಂಡದ ಭರತ್ ಒಂದು ಗೋಲು ಗಳಿಸಿದರು.
2ನೇ ಪಂದ್ಯ ಬೇತು ಮತ್ತು ಪುಲಿಕೋಟು ತಂಡಗಳ ನಡುವೆ ನಡೆಯಿತು. ಈ ಪಂದ್ಯವನ್ನು ಕಾಫಿ ಬೆಳೆಗಾರರಾದ ಕರವಂಡ ಸಂತೋಷ್, ಎಡಕೇರಿ ನಾಣಯ್ಯ, ನುಚ್ಚಿಮಣಿಯಂಡ ಗಣೇಶ್ ಉದ್ಘಾಟಿಸಿದರು. ಬೇತು ತಂಡದ ಆಟಗಾರರು 3-0 ಅಂತರದಿಂದ ಪುಲಿಕೋಟು ತಂಡದ ವಿರುದ್ಧ ಜಯಗಳಿಸಿದರು. ಬೇತು ತಂಡದ ಆಟಗಾರರಾದ ತಮ್ಮಯ್ಯ, ಅಯ್ಯಪ್ಪ, ಗ್ಯಾನ್ ತಲಾ ಒಂದು ಗೋಲು ಗಳಿಸಿದರು.
ವೀಕ್ಷಕರ ಕರತಾಡನದ ನಡುವೆ ಬಲ್ಲಮಾವಟಿ (ವೈಟ್) ಮತ್ತು ನಾಲಡಿ ತಂಡಗಳ ನಡುವೆ ಮೂರನೇ ಪಂದ್ಯ ನಡೆಯಿತು. ಪಂದ್ಯವನ್ನು ದಾನಿಗಳಾದ ಮಾಳೆಯಂಡ ವಿಜು ಅಚ್ಚಪ್ಪ, ಬೊಟ್ಟೋಳಂಡ ಹಂಸ ಮುತ್ತಪ್ಪ ಮತ್ತು ಚಂದುರ ನಿರಂಜನ್ ಉದ್ಘಾಟಿಸಿದರು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದವು. ಬಳಿಕ ನಡೆದ ಪೆನಾಲ್ಟಿ ಶೂಟ್ ಔಟ್‌ನಲ್ಲಿ ನಾಲಡಿ ತಂಡ ನಾಲ್ಕು ಗೋಲು ಗಳಿಸಿತು. ಬಲ್ಲಮಾವಟಿ ತಂಡ 5 ಗೋಲು ಗಳಿಸಿ ಸೆಮಿಫೈನಲ್ ಪ್ರವೇಶಿಸಿತು.
ನಾಲ್ಕನೇ ಪಂದ್ಯ ಪೇರೂರು ಬಿ ಮತ್ತು ಯವಕಪಾಡಿ ತಂಡಗಳ ನಡುವೆ ನಡೆಯಿತು. ಈ ಪಂದ್ಯವನ್ನು ಕಾಫಿ ಬೆಳೆಗಾರರಾದ ಬೊಳಿಯಾಡಿರ ಸಂತು ಸುಬ್ರಮಣಿ, ಅಪ್ಪಚೆಟ್ಟೋಳಂಡ ಪೂ ದೇವಯ್ಯ, ಕುಂಡ್ಯೋಳಂಡ ಶಬನ್ ಉದ್ಘಾಟಿಸಿದರು. ಯವಕಪಾಡಿ ತಂಡವು ಪೇರೂರು ಬಿ ತಂಡದ ವಿರುದ್ಧ 4-0 ಅಂತರದಿಂದ ಜಯ ಸಾಧಿಸಿತು. ಅಂಜಪರವಂಡ ಹೇಮಂತ್ 2 ಗೋಲು ಗಳಿಸಿದರು. ಕರೋಟಿರ ಬೋಪಣ್ಣ ಮತ್ತು ಆಕಾಶ್ ತಲಾ ಒಂದು ಗೋಲು ಗಳಿಸಿದರು.
ಮಧ್ಯಾಹ್ನ ಸುರಿದ ಮಳೆಯಿಂದಾಗಿ ಪ್ರೌಢಶಾಲಾ ವಿಭಾಗದ ಹಾಕಿ ಪಂದ್ಯ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಮುಂದೂಡಲಾಯಿತು. ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲೆ ಹಾಗೂ ಕಕ್ಕಬ್ಬೆ ಪ್ರೌಢಶಾಲೆಗಳ ನಡುವೆ ಆಯೋಜಿಸಲಾಗಿದ್ದ ಹಾಕಿ ಪಂದ್ಯವನ್ನು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಆಯೋಜಿಸಲು ಹಾಕಿ ಸಮಿತಿ ನಿರ್ಧರಿಸಿತು. ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಂಡ ಲವ ಚಿಣ್ಣಪ್ಪ, ದಾನಿ ಬೊಟ್ಟೋಳಂಡ ಹಂಸ ಮುತ್ತಪ್ಪ, ಕ್ರೀಡಾ ಉತ್ಸವದ ಪ್ರಾಯೋಜಕರು, ಕ್ರೀಡಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇಂದಿನ ಸೆಮಿ ಫೈನಲ್ ಪಂದ್ಯಗಳು
11 ಗಂಟೆಗೆ ಬಲ್ಲಮಾವಟಿ (ವೈಟ್ )- ಮರಂದೋಡ 12 ಗಂಟೆಗೆ ಯವಕಪಾಡಿ- ಬೇತು ಮಹಿಳೆಯರ ಹಗ್ಗಜಗ್ಗಾಟ 2 ಗಂಟೆಗೆ ನೆಲಜಿ ಎ-( ನಾಪೋಕ್ಲು-ನಾಲಡಿ ನಡುವಿನ ವಿಜೇತ ತಂಡ) 2.30 ಕ್ಕೆ ಪೇರೂರು-(ಕೊಳಕೇರಿ-ಬಲ್ಲಮಾವಟಿ ವಿಜೇತ ತಂಡ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.