ವಿರಾಜಪೇಟೆ: ಸಾಧನೆಗೆ ತನು-ಮನದ ಮೇಲೆ ನಿಯಂತ್ರಣ ಸಾಧಿಸುವುದು ಎಲ್ಲಕ್ಕೂ ಮುಖ್ಯವಾದದ್ದು. ಯೋಗದಿಂದ ತನು-ಮನದ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಮೇಜರ್ ಡಾ.ಅಲ್ಲಮ ಪ್ರಭು ಅಭಿಪ್ರಾಯಪಟ್ಟರು.
ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿನ ಕಾವೇರಿ ಆಶ್ರಮದಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಕಾವೇರಿ ಯೋಗ ಕೇಂದ್ರದ 25ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾನವ ಎಷ್ಟೇ ಸಂಪಾದಿಸಿದರೂ ಹಣದಿಂದ ಆರೋಗ್ಯವನ್ನು ಸಂಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಆರೋಗ್ಯವನ್ನು ಕಾಡಾಡಿಕೊಳ್ಳುವತ್ತ ಪ್ರತಿಯೊಬ್ಬರೂ ಗಮನಹರಿಸಬೇಕು. ಯೋಗ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಉತ್ತಮ ನಿದ್ರೆ, ಮಿತವಾದ ಆಹಾರ ಸೇವನೆಯೂ ಉತ್ತಮ ಆರೋಗ್ಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ’ ಎಂದರು.
ಕುಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಹಾಗೂ ಯೋಗ ಶಿಕ್ಷಕರು ಆಗಿರುವ ಅಲಿಮ ಪಿ.ಎಚ್ ಮಾತನಾಡಿ, ‘ಯೋಗ ಕಲಿತದ್ದಕ್ಕಿಂತ ಸಂತಸ ನೀಡುವುದು ಮತ್ತೊಬ್ಬರಿಗೆ ಕಲಿಸಿದಾಗ. ಯೋಗ ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಮೂಲಕ ಸ್ವಾಸ್ಥ ಸಮಾಜವನ್ನು ನಿರ್ಮಿಸಬೇಕಿದೆ. ಎಲ್ಲವೂ ವಾಣಿಜ್ಯೀಕರಣಗೊಳ್ಳುತ್ತಿರುವ ಇಂದಿನ ದಿನದಲ್ಲಿ ಕಾವೇರಿ ಯೋಗ ಕೇಂದ್ರ ಕಳೆದ 25 ವರ್ಷಗಳಿಂದ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾವೇರಿ ಆಶ್ರಮದ ಆತ್ಮಾನಂದ ಸ್ವಾಮೀಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಯೋಗ ಸನಾತನ ಧರ್ಮದ ಒಂದು ಭಾಗವಾಗಿದ್ದು, ಸನಾತನ ಧರ್ಮದ ಆಚರಣೆಗಳು ವಿಜ್ಞಾನದೊಂದಿಗೆ ನಿಕಟ ಸಂಬಂಧ ಹೊಂದಿದೆ. ಯೋಗ ಶಾರೀರಿಕ ಹಾಗೂ ಮಾನಸಿಕವಾಗಿ ಬಂಧಿಸುವ ಮೂಲಕ ಏಕಾಗ್ರತೆಯನ್ನು ತಂದು ಕೊಡುವ ಮೂಲಕ ನಮ್ಮನ್ನ ಗಟ್ಟಿಗೊಳಿಸುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಆಯುಷ್ ಆಸ್ಪತ್ರೆಯ ಡಾ.ರವಿ, ಮಿಲಿಟರಿ ಆಸ್ಪತ್ರೆಯ ಕರ್ನಲ್ ಡಾ. ಲಕ್ಷ್ಮಿ ನಾರಾಯಣ್, ಯೋಗ ಕೇಂದ್ರದ ಯೋಗ ಗುರು ಸೀತಾರಾಂ ರೈ, ಹಿರಿಯ ಯೋಗಪಟು ಬಿ.ಗಣಪತಿ, ಉಪನ್ಯಾಸಕ ಡಾ.ಹೇಮಂತ್, ರತಿ ಉತ್ತಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.