ADVERTISEMENT

ಮಡಿಕೇರಿ: ಅಂತರರಾಜ್ಯ ಅಪರಾಧ ಸಭೆ

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 8:40 IST
Last Updated 6 ಮಾರ್ಚ್ 2024, 8:40 IST

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಮಂಗಳವಾರ ನಡೆದ ಅಂತರರಾಜ್ಯ ಅಪರಾಧ ಸಭೆಯಲ್ಲಿ ಕೇರಳದ 4 ಹಾಗೂ ಕರ್ನಾಟಕದ 4 ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ಐಜಿಪಿ ಅಮಿತ್‌ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಕೈಗೊಳ್ಳಬೇಕಿರುವ ಭದ್ರತಾ ಕ್ರಮಗಳ ಕುರಿತು ಪ್ರಮುಖವಾಗಿ ಚರ್ಚೆ ನಡೆಯಿತು.

ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ಸಕ್ರಿಯವಾಗಿರುವ ನಕ್ಸಲರ ಚಲನವಲನಗಳ ಕುರಿತು ಸುದೀರ್ಘವಾದ ಮಾಹಿತಿ ಹಂಚಿಕೆಗಳು ನಡೆದವು. ಜೊತೆಗೆ, ಅಕ್ರಮ ಹಣ ಮತ್ತು ಮದ್ಯ ಸಾಗಣೆ, ಇವುಗಳನ್ನು ತಡೆಯಲು ಚೆಕ್‌ಪೋಸ್ಟ್‌ಗಳ ರಚನೆ, ಕೈಗೊಳ್ಳಬೇಕಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತೂ ಚರ್ಚೆಗಳು ನಡೆದವು.

ADVERTISEMENT

ಅಂತರರಾಜ್ಯ ಗಡಿಯಲ್ಲಿ ಹೆಚ್ಚುತ್ತಿರುವ ದರೋಡೆ ಪ್ರಕರಣಗಳು, ಪ್ರಮುಖ ಆರೋಪಿಗಳು ಮೊದಲಾದ ಅಪರಾಧ ಚಟುವಟಿಕೆಗಳ ಕುರಿತೂ ಅಧಿಕಾರಿಗಳು ಪರಸ್ಪರ ಮಾಹಿತಿ ಹಂಚಿಕೊಂಡರು ಎಂದು ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಕೇರಳ ರಾಜ್ಯದ ಕಣ್ಣೂರಿನ ಐಜಿಪಿ ಥಾಮಸ್ ಜೋಸ್, ಎಟಿಎಸ್‌ನ ಡಿಐಜಿ ಪುಟ್ಟ ವಿಮಲಾದಿತ್ಯ, ವೈನಾಡುವಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣನ್, ಕಣ್ಣೂರಿನ ಹೇಮಲತಾ, ಕಾಸರಗೋಡಿನ ಬಿಜಯ್‌, ಸ್ಪೆಷಲ್‌ ಆಪರೇಷನ್‌ ಗ್ರೂಪ್‌ನ ಎಸ್.ಪಿ. ತಪೋಸ್ ಭಾಗವಹಿಸಿದ್ದರು.

ಕರ್ನಾಟಕದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ದಕ್ಷಿಣ ಕನ್ನಡದ ರಿಷ್ಯಂತ್, ಮೈಸೂರಿನ ಸೀಮಾಲಾಟ್ಕರ್, ಚಾಮರಾಜನಗರ ಪದ್ಮಿನಿ ಸಾಹು, ಆಂತರಿಕ ಭದ್ರತಾ ವಿಭಾಗದ ಎಸ್‌.ಪಿ ಪ್ರಕಾಶ್‌ಗೌಡ, ಮೈಸೂರು ನಗರದ ಡಿಸಿಪಿ ದಿನೇಶ್‌ಕುಮಾರ್ ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.