ಮಡಿಕೇರಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿದ್ದು, ಕೊಡಗಿನಲ್ಲೂ ಕುತೂಹಲ ಮೂಡಿಸಿದೆ.
ಜಿಲ್ಲೆಯ ಎರಡೂ ಕ್ಷೇತ್ರದಲ್ಲೂ ಬಿಜೆಪಿಯ ಹಿರಿಯ ಶಾಸಕರಿದ್ದು, ಅವರಲ್ಲಿ ಒಬ್ಬರು ಕ್ಯಾಬಿನೆಟ್ ಸೇರುವ ಸಾಧ್ಯತೆಯಿದೆ ಎಂದು ಬಿಜೆಪಿ ಮುಖಂಡರು ಹಾಗೂ ಶಾಸಕರ ಅಭಿಮಾನಿಗಳಲ್ಲಿ ಚರ್ಚೆ ನಡೆಯುತ್ತಿದೆ.
ಮಡಿಕೇರಿಗೆಸೋಮವಾರ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಈ ತಿಂಗಳಾಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದರು. ಅದೇ ವೇಳೆ, ‘ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕೊಡಗಿಗೆ ಆದ್ಯತೆ ಸಿಗುತ್ತದೆಯೇ’ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ಯಡಿಯೂರಪ್ಪ ಅವರು ಹೊರಟು ಹೋಗಿದ್ದರು. ಅದಾದ ಮೇಲೆ, ಸುದರ್ಶನ ಅತಿಥಿ ಗೃಹದಲ್ಲಿ, ಮುಖ್ಯಮಂತ್ರಿ ಅವರು ಜಿಲ್ಲೆಯ ಅಭಿವೃದ್ಧಿ ಕೆಲಸ ಹಾಗೂ ಸಮಸ್ಯೆಗಳ ಬಗ್ಗೆ ಮಾತ್ರ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ, ಜಿಲ್ಲೆಗೆ ಪ್ರಾತಿನಿಧ್ಯ ನೀಡುವ ಯಾವುದೇ ಭರವಸೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಆದರೂ, ವರಿಷ್ಠರು ಹೊಸಬರಿಗೆ ಆದ್ಯತೆ ನೀಡುವ ಮಾತನಾಡಿದ್ದು ಜಿಲ್ಲೆಯ ಶಾಸಕರಲ್ಲಿ ಸಣ್ಣದೊಂದು ಆಸೆ ಚಿಗುರಿದೆ. ಹಿರಿಯ ಶಾಸಕರು ಲಾಬಿ ಸಹ ನಡೆಸುತ್ತಿದ್ದು ಅದು ಯಾರಿಗೆ ವರವಾಗಲಿದೆ? ಯಾರಿಗೆ ಭಾಗ್ಯದ ಬಾಗಿಲು ತೆರೆಯಲಿದೆ ಎಂಬ ಚರ್ಚೆಗಳೂ ನಡೆಯುತ್ತಿವೆ.
ಹೀಗಾದರೆ ಅವಕಾಶ!:ಜಿಲ್ಲೆಯಲ್ಲೂ ಅಪ್ಪಚ್ಚು ರಂಜನ್ ಹಾಗೂ ಬೋಪಯ್ಯ ಅಭಿಮಾನಿಗಳಲ್ಲಿ ಹಲವು ರೀತಿಯ ಲೆಕ್ಕಾಚಾರಗಳು ನಡೆಯುತ್ತಿವೆ. ಪಕ್ಷಾಂತರ ಮಾಡಿ ಬಿಜೆಪಿಗೆ ಜಿಗಿದು ಉಪ ಚುನಾವಣೆಯಲ್ಲಿ ಗೆದ್ದಿದ್ದ 11 ಶಾಸಕರ ಪೈಕಿ, ಆರು ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಿ ಉಳಿದ ಸ್ಥಾನಗಳನ್ನು ಪಕ್ಷದ ಹಿರಿಯ ಶಾಸಕರಿಗೆ ನೀಡಬೇಕೆಂದು ವರಿಷ್ಠರು ಆಲೋಚಿಸಿದ್ದಾರೆ. ಹಾಗೇನಾದರೂ ನಡೆದರೆ ಜಿಲ್ಲೆಯ ಇಬ್ಬರು ಶಾಸಕರಲ್ಲಿ ಒಬ್ಬರು ಮಂತ್ರಿ ಮಂಡಲ ಸೇರುವ ಎಲ್ಲ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈಚೆಗೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ‘ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ’ಯನ್ನು ಪುನರ್ ರಚನೆಯ ತೀರ್ಮಾನ ತೆಗೆದುಕೊಂಡಿದ್ದು, ಅದಕ್ಕೆ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಒಂದು ವೇಳೆ ಜಿಲ್ಲೆಗೆ ಅವಕಾಶ ಸಿಕ್ಕರೆ ಬೋಪಯ್ಯ ಅವರು ಮಂತ್ರಿ ಆಗಲಿದ್ದಾರೆಯೇ ಅಥವಾ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಕ್ರೀಡಾ ಸಚಿವರಾಗಿದ್ದ ಎಂ.ಪಿ.ಅಪ್ಪಚ್ಚು ರಂಜನ್ ಸಚಿವರಾಗಲಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಬಿಜೆಪಿ ಸೇರಿ ಗೆದ್ದಿರುವ 11 ಮಂದಿಗೂ ಸಚಿವ ಸ್ಥಾನ ನೀಡಿದರೆ ಆಗ ಲೆಕ್ಕಾಚಾರವೇ ಬುಡಮೇಲಾಗುವ ಸಾಧ್ಯತೆಯಿದೆ.
ಕೆ.ಜಿ.ಬೋಪಯ್ಯ ಅವರು ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ‘ಮೈತ್ರಿ’ ಸರ್ಕಾರ ಪತನವಾದ ವೇಳೆ ಅತೃಪ್ತರಿದ್ದ ಮುಂಬೈ ಹೋಟೆಲ್‌ಗೂ ತೆರಳಿದ್ದ ಬೋಪಯ್ಯ ಕಾನೂನು ವಿಚಾರವಾಗಿ ಹಲವು ಸಲಹೆ ನೀಡಿದ್ದರು. ಸರ್ಕಾರ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿ ಸರ್ಕಾರ ರಚನೆಯಾದ ಮೇಲೆ ವಿಧಾನಸಭೆ ಸ್ಪೀಕರ್ ಆಗುವಂತೆ ಬಿಎಸ್‌ವೈ ಮನವೊಲಿಸಿದ್ದರು. ಆದರೆ, ವರಿಷ್ಠರು ಅದಕ್ಕೆ ಒಪ್ಪಿರಲಿಲ್ಲ. 2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಬೋಪಯ್ಯ ವಿಧಾನಸಭೆ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಂದು ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದಾಗ ಸರ್ಕಾರವನ್ನು ರಕ್ಷಣೆ ಮಾಡಿದ್ದರು. ಹೀಗಾಗಿಯೇ ಬೋಪಯ್ಯ ಅವರ ಮೇಲೆ ಯಡಿಯೂರಪ್ಪಗೆ ವಿಶೇಷ ಗೌರವ ಎನ್ನುತ್ತಾರೆ ಪಕ್ಷದ ಹಿರಿಯ ಮುಖಂಡರು.
ಐದು ಬಾರಿ ಆಯ್ಕೆ
ಎಂ.ಪಿ.ಅಪ್ಪಚ್ಚು ರಂಜನ್ ಅವರು ಕೊಡವ ಸಮುದಾಯಕ್ಕೆ ಸೇರಿದ್ದಾರೆ. ಅದೇ ಕೋಟಾದಡಿ ಆದ್ಯತೆ ನೀಡಿದರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ರಂಜನ್‌ಗೆ ಅದೃಷ್ಟ ಒಲಿಯುವ ಸಾಧ್ಯತೆಯಿದೆ. 1994, 1999, 2008, 2013 ಹಾಗೂ 2018ರ ಚುನಾವಣೆಯೂ ಸೇರಿ ಒಟ್ಟು ಐದು ಬಾರಿ ರಂಜನ್ ಶಾಸಕರಾಗಿದ್ದಾರೆ. ಒಮ್ಮೆ ಕ್ರೀಡಾ ಮಂತ್ರಿಯೂ ಆಗಿದ್ದರು. ಅವರು ಎರಡನೇ ಬಾರಿಗೆ ಸಚಿವರಾಗುವ ನಿರೀಕ್ಷೆಯಲ್ಲಿದ್ದಾರೆ.
ನಾಲ್ಕು ಬಾರಿ ಆಯ್ಕೆ
2004ರಲ್ಲಿ ಮಡಿಕೇರಿ ಕ್ಷೇತ್ರದಿಂದ ಕೆ.ಜಿ.ಬೋಪಯ್ಯ ಅವರು ಮೊದಲು ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅದಾದ ಮೇಲೆ ಮಡಿಕೇರಿಯಿಂದ ವಿರಾಜಪೇಟೆ ಕ್ಷೇತ್ರಕ್ಕೆ ವಲಸೆ ಹೋಗಿದ್ದ ಅವರು, ಅಲ್ಲಿ 2008, 2013 ಹಾಗೂ 2018ರ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅರೆಭಾಷೆ ಗೌಡ ಸಮುದಾಯಕ್ಕೆ ಸೇರಿರುವ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.