ನಾಪೋಕ್ಲು: ನಾಲ್ಕುನಾಡು ವ್ಯಾಪ್ತಿಯಲ್ಲಿ ಕೈಲ್ ಪೋಳ್ದ್ ಹಬ್ಬದ ಸಂಭ್ರಮ ಮನೆ ಮಾಡಿದೆ.
ಮಳೆ ಕಡಿಮೆಯಾಗುತ್ತಿದ್ದಂತೆ ಕೃಷಿಕರು ಹಬ್ಬದ ಸಂಭ್ರಮಕ್ಕೆ ಅಣಿಯಾಗುತ್ತಿದ್ದಾರೆ. ನಾಪೋಕ್ಲು, ಬಲ್ಲಮಾವಟಿ ವ್ಯಾಪ್ತಿಯಲ್ಲಿ ಮಂಗಳವಾರ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುತ್ತದೆ. ಕೊಡಗಿನ ಹಬ್ಬಗಳಲ್ಲಿ ಹುತ್ತರಿ ಹಬ್ಬಕ್ಕೆ ಮೊದಲ ಸ್ಥಾನ ಇದ್ದರೆ ನಂತರದ ಸ್ಥಾನ ಕೈಲ್ ಮೂಹೂರ್ತ ಹಬ್ಬಕ್ಕಿದೆ.
ಕೈಲ್ ಪೊಳ್ದ್ ಎಂದರೆ ಆಯುಧ ಪೂಜೆ ಎಂಬ ಅರ್ಥ. ಕೊಡಗಿನಲ್ಲಿ ಮಳೆಗಾಲ ಪ್ರಾರಂಭದಲ್ಲಿ ರೈತರು ಭತ್ತದ ಗದ್ದೆಗಳನ್ನು ಉತ್ತು ಬಿತ್ತಿ ಗದ್ದೆಯನ್ನು ನಾಟಿ ಮಾಡಿ ದಣಿದ ಸಂದರ್ಭದಲ್ಲಿ ಸಂತೋಷದಿಂದ ಆಚರಿಸುವ ಹಬ್ಬವೇ ಕೈಲ್ ಮುಹೂರ್ತ.
ಹಬ್ಬದ ದಿನದಂದು ಗದ್ದೆ ಕೆಲಸದಲ್ಲಿ ದಣಿದ ಎತ್ತುಗಳನ್ನು ಸ್ನಾನ ಮಾಡಿಸಿ ನಂತರ ಉಳುವುದಕ್ಕೆ ಉಪಯೋಗಿಸಿದ ಆಯುಧಗಳಾದ ನೇಗಿಲು, ನೊಗಕ್ಕೆ ಪೂಜೆ ಸಲ್ಲಿಸಿ ಎತ್ತುಗಳಿಗೆ ಪಣಿ ಪುಟ್ಟು ತಿನಿಸುತ್ತಾರೆ. ನಂತರ, ಮನೆಯಲ್ಲಿರುವ ಆಯುಧಗಳಾದ ಕೋವಿ, ಕತ್ತಿಗಳನ್ನು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟು ಅದಕ್ಕೆ ಪೂಜೆ ಸಲ್ಲಿಸಿ ಹಬ್ಬದಲ್ಲಿ ಮಾಡಿದ ಮಾಂಸದ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸುವುದು ರೂಢಿ. ಮಾಂಸ ಸೇವನೆ ಎಲ್ಲ ಕೊಡವ ಭಾಷಿಕರ ಮನೆಯಲ್ಲೂ ಕಂಡು ಬರುತ್ತದೆ. ಈ ಸಂದರ್ಭ ನೆಂಟರಿಷ್ಟರು ಬಂದು ಈ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಊರು, ಊರುಗಳಲ್ಲೂ ಕೈಲ್ ಮೂಹೂರ್ತ ಹಬ್ಬದ ಪ್ರಯುಕ್ತ ಆಟೋಟಗಳ ಸ್ವರ್ಧೆಯನ್ನು ಸಹ ಏರ್ಪಡಿಸಿ, ಸಂಭ್ರಮಿಸುತ್ತಾರೆ.
ಕೈಲ್ ಮೂಹೂರ್ತ ಹಬ್ಬವನ್ನು ಒಂದೊಂದು ಊರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ. ಗಾಳಿಬೀಡು ವಿಭಾಗದಲ್ಲಿ ಮೊದಲು ಹಬ್ಬವನ್ನು ಆಚರಿಸಲಾಗುತ್ತದೆ. ನಾಲ್ಕು ನಾಡಿನಲ್ಲಿ 27ರಂದು ಆಯೋಜಿಸಲಾಗಿದ್ದರೆ, ನಂತರ ಕೊಡಗಿನಾದ್ಯಂತ ಸೆಪ್ಟಂಬರ್ 3ರಂದು ಹಬ್ಬ ಆಚರಿಸುತ್ತಾರೆ. ನಾಡಿನಾದ್ಯಾಂತ ವಿವಿಧ ಯುವಕ ಸಂಘಗಳು ಗ್ರಾಮೀಣ ಕ್ರೀಡಾಕೂಟವನ್ನು ಹಮ್ಮಿಕೊಂಡು ಸಂಭ್ರಮಿಸುತ್ತಾರೆ. ನಾಪೋಕ್ಲುವಿನ ಬೇತು ಗ್ರಾಮದ ಯುವಕ ಸಂಘ, ಭಗವತಿ ಯುವಕ ಸಂಘ, ಬಲ್ಲಮಾವಟಿ ಗ್ರಾಮದ ಅಪೊಲೋ ಯುವಕ ಸಂಘ ಮೊದಲಾದ ಸಂಘಗಳು ಗ್ರಾಮೀಣ ಕ್ರೀಡಾಕೂಟವನ್ನು ಹಲವು ವರ್ಷಗಳಿಂದ ನಡೆಸುತ್ತಾ ಬಂದಿವೆ.
ಮಳೆಗಾಲದ ಅವಧಿಯಲ್ಲಿ ಹಬ್ಬ-ಹರಿದಿನಗಳಿಂದ ದೂರವೇ ಉಳಿದ ಜಿಲ್ಲೆಯಲ್ಲಿ ದೇಸಿ ಕ್ರೀಡೆಗಳಿಗೆ ಮಹತ್ವ ನೀಡಲಾಗಿದೆ. ಸಾಂಪ್ರದಾಯಿಕ ಹಬ್ಬವಾದ ಕೈಲ್ ಮುಹೂರ್ತ ಹಬ್ಬದಲ್ಲಿ ಗುರಿ ಪರೀಕ್ಷಿಸುವ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಜನಪ್ರಿಯ. ವಿವಿಧ ಯುವಕ ಸಂಘಗಳು ಈ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತವೆ. ಇನ್ನು ಮಕ್ಕಳಿಗೆ, ಮಹಿಳೆಯರಿಗೂ ವೈವಿಧ್ಯಮಯ ಸ್ಪರ್ಧೆಗಳಿರುತ್ತವೆ. ಓಟದ ಸ್ಪರ್ಧೆ, ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ನಿಂಬೆ-ಚಮಚ ಓಟ, ಹಗ್ಗ ಜಗ್ಗಾಟ, ಭಾರದ ಕಲ್ಲುಎಸೆತ, ಗೋಣಿ ಚೀಲ ಓಟ... ಒಂದೇ..ಎರಡೇ..ಎಲ್ಲವೂ ದೇಸೀ ಕ್ರೀಡೆಗಳು. ಈ ಗ್ರಾಮೀಣ ಕ್ರೀಡೆಗಳು ಕೈಲ್ ಮುಹೂರ್ತದ ನಂತರ ಗರಿಗೆದರುತ್ತವೆ.
ನಾಳೆ ಉತ್ಸವ ನಂತರ ವಿವಿಧೆಡೆ ಕ್ರೀಡಾಕೂಟ
ಕೈಲ್ ಮುಹೂರ್ತ ಹಿನ್ನೆಲೆಯಲ್ಲಿ ನೆಲಜಿ ಗ್ರಾಮದ ಇಗ್ಗುತಪ್ಪ ದೇವಾಲಯದಲ್ಲಿ ಉತ್ಸವ ನಡೆಯಲಿದೆ. ಇಗ್ಗುತಪ್ಪ ದೇವಸ್ಥಾನದಲ್ಲಿ ಆ. 26ರಂದು ಉತ್ಸವ ನಡೆಯಲಿದ್ದು ಉತ್ಸವದ ಅಂಗವಾಗಿ ತುಲಾಭಾರ ಸೇವೆ ಎತ್ತೊಪೋರಾಟ ಮಹಾಪೂಜೆ ದೇವರ ನೃತ್ಯಬಲಿ ಅನ್ನಸಂತರ್ಪಣೆ ನಡೆಯಲಿದೆ. ನಾಪೋಕ್ಲು ಭಗವತಿ ಯುವಕ ಸಂಘದ ಆಶ್ರಯದಲ್ಲಿ ಮಂಗಳವಾರ ಮಧ್ಯಾಹ್ನ ಕ್ರೀಡಾಕೂಟ ನಡೆಯಲಿದೆ. ನಾಪೋಕ್ಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟದ ಸಭೆಯ ಅಧ್ಯಕ್ಷತೆಯನ್ನು ಭಗವತಿ ಯುವಕ ಸಂಘದ ಅಧ್ಯಕ್ಷ ಕುಲ್ಲೇಟಿರ ದೇವಯ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾ ಅರುಣ್ ನಿವೃತ್ತಜೆಸಿಓ ಕಂಗಾಂಡ ರೋಹನ್ ಈರಪ್ಪ ಪಾಲ್ಗೊಳ್ಳಲಿದ್ದಾರೆ. ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಯುವಕ ಸಂಘದ ಆಶ್ರಯದಲ್ಲಿ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಟೋಟಗಳನ್ನು ಆಯೋಜಿಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಯೂತ್ ಕ್ಲಬ್ ಅಧ್ಯಕ್ಷ ಕಾಳೆಯಂಡ ರಿನೇಶ್ ಪೊನ್ನಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಎಸ್ಪಿ ಬೊಳ್ಯೆಪಂಡ ರವಿ ಮಾಚಯ್ಯ ಕಾಫಿ ಬೆಳೆಗಾರ ಕುಟ್ಟಂಚೆಟ್ಟೀರ ಶ್ಯಾಂ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.
ಸಮೀಪದ ಬಲಮಾವಟಿ ಗ್ರಾಮದ ಅಪೋಲೋ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಾಡಹಬ್ಬ ಕೈ ಮುಹೂರ್ತದ ಪ್ರಯುಕ್ತ ಆಟೊ ಕೂಟವನ್ನು ಮಂಗಳವಾರ ಆಯೋಜಿಸಲಾಗಿದೆ. ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮುಕ್ಕಾಟಿರ ಕೆ ಸುತನ್ ಸುಬ್ಬಯ್ಯ ಶಿಕ್ಷಕಿ ಮೂವೆರ ಕಾವೇರಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಅಪ್ಪಚೆಟ್ಟೋಳಂಡ ಬಿ. ಹರ್ಷಿತ್ ಐಯ್ಯಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.