ADVERTISEMENT

ಕನಕದಾಸರ ತತ್ವ, ಆದರ್ಶ ಪಾಲಿಸಿ: ಶಾಸಕ ಡಾ.ಮಂತರ್‌ಗೌಡ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 4:14 IST
Last Updated 19 ನವೆಂಬರ್ 2024, 4:14 IST
ಮಡಿಕೇರಿಯಲ್ಲಿ ಸೋಮವಾರ ನಡೆದ ಕನಕದಾಸರ ಜಯಂತಿಯಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು
ಮಡಿಕೇರಿಯಲ್ಲಿ ಸೋಮವಾರ ನಡೆದ ಕನಕದಾಸರ ಜಯಂತಿಯಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು   

ಮಡಿಕೇರಿ: ಸಾಮಾಜಿಕ ನ್ಯಾಯ ಹಾಗೂ ಏಕತೆಗಾಗಿ 15ನೇ ಶತಮಾನದಲ್ಲೇ ಹೋರಾಡಿದವರು ಕನಕದಾಸರು. ಅವರ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಇಲ್ಲಿನ ಗಾಂಧಿಭವನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಕನಕದಾಸರ ಜಯಂತಿ ಆಚರಣೆ 2024’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನಕದಾಸರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ಕರೆ ನೀಡಿದ ಅವರು, ‘ಸಮಾಜದಲ್ಲಿ ಎಲ್ಲರೂ ಒಂದಾಗಬೇಕು ಮತ್ತು ಏಕತೆ ಬರಬೇಕು ಎಂಬುದು ಅವರ ಆಲೋಚನೆಯಾಗಿತ್ತು. ಈ ವಿಷಯನ್ನು ಅವರ ಕೃತಿಗಳಲ್ಲಿ ಹಾಗೂ ಕಾವ್ಯಗಳಲ್ಲಿ ಇಂದಿಗೂ ಕಾಣಬಹುದು. ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ನಾವು ಅನುಸರಿಸಬೇಕು’ ಎಂದರು.

ADVERTISEMENT

ರಾಗಿ ಮತ್ತು ಭತ್ತದ ಜೊತೆ ಜಗಳವಾದ ಪ್ರಸಂಗವಿರುವ ಕನಕದಾಸರ ಕಾವ್ಯವನ್ನು ಪ್ರಸ್ತಾಪಿಸಿದ ಶಾಸಕರು ಭತ್ತ ಬೇಗ ಕೊಳೆಯುತ್ತದೆ, ರಾಗಿ ಉಳಿಯುತ್ತದೆ. ಹೊರನೋಟಕ್ಕೆ ಚೆಂದವಾಗಿ ಕಂಡರೂ ಒಳಗೆ ತಿರುಳು ಇರುಬೇಕು ಎಂದರು.

ಯಾವುದೇ ಜಯಂತಿಯನ್ನಾದರೂ ಸರಿ, ಆಯಾ ಜನಾಂಗದವರು ಹೆಚ್ಚು ಎಲ್ಲಿ ವಾಸ ಇರುತ್ತಾರೋ ಅಲ್ಲಿಯೇ ಆಚರಣೆ ಮಾಡಬೇಕು ಎಂದು ಅವರು ಇದೇ ವೇಳೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಕನಕದಾಸರ ಕೀರ್ತನೆಯಲ್ಲಿರುವ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು’ ಎಂದರು.

ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ ಮಾತನಾಡಿ, ‘ದಾಸ ಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ತಮ್ಮ ಕೀರ್ತನೆಗಳ ಮೂಲಕ ಶ್ರಮಿಸಿದ್ದಾರೆ’ ಎಂದು ತಿಳಿಸಿದರು.

ನಿವೃತ್ತ ಕಲಾ ಶಿಕ್ಷಕ ಉ.ರಾ.ನಾಗೇಶ್ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರ ಸುಂದರ್ ರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಪೌರಾಯುಕ್ತ ರಮೇಶ್, ಜಾನಪದ ಪರಿಷತ್ತಿನ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಟಿ.ಅನಿಲ್ ಭಾಗವಹಿಸಿದ್ದರು.

ಮಡಿಕೇರಿಯಲ್ಲಿ ಸೋಮವಾರ ನಡೆದ ಕನಕದಾಸರ ಜಯಂತಿಯಲ್ಲಿ ಪಾಲ್ಗೊಂಡಿದ್ದ ಸಭಿಕರು
ಸಮಾಜದಲ್ಲಿನ ಅಸಮಾನತೆ ಕಂದಾಚಾರ ಹಾಗೂ ಮೌಢ್ಯವನ್ನು ಕೀರ್ತನೆಗಳ ಮೂಲಕ ಹೋಗಲಾಡಿಸಲು ಕನಕದಾಸರು ಶ್ರಮಿಸಿದ್ದಾರೆ
ಡಾ.ಮಂತರ್‌ಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.