ಸುಂಟಿಕೊಪ್ಪ: ಕನ್ನಡದ ಮೊದಲ ಕತೆಗಾರ್ತಿ ಕೊಡಗಿನ ಗೌರಮ್ಮ ತಮ್ಮ ಸಾಹಿತ್ಯವನ್ನು ಆರಂಭಿಸಿದ ತವರೂರು ಹಾಗೂ ಸೌಹಾರ್ದ ಸಾರಿದ ಪುಟ್ಟ ಊರು ಸುಂಟಿಕೊಪ್ಪ. ಇಲ್ಲಿನ ಜನರು ಜಾತಿ, ಭೇದವಿಲ್ಲದೇ ಎಲ್ಲ ಹಬ್ಬಗಳನ್ನು ಸಂತೋಷ, ಸಂಭ್ರಮದಿಂದ ಆಚರಿಸುತ್ತಾರೆ.
ಇಲ್ಲಿ ನೆಲೆಸಿರುವ ವಿವಿಧ ಜನಾಂಗದವರು ಒಟ್ಟಾಗಿ ಸೇರಿ ಸುಂಟಿಕೊಪ್ಪದ ಹೃದಯಭಾಗದಲ್ಲಿ ನಿರ್ಮಿಸಿರುವ ‘ಕನ್ನಡ ವೃತ್ತ’ವು ಕನ್ನಡದ ಮೇಲೆ ಇಟ್ಟಿರುವ ಅಭಿಮಾನವನ್ನು ಸಾರಿ ಹೇಳುತ್ತಿದೆ.
ಅದರಲ್ಲೂ ಈ ಕನ್ನಡ ವೃತ್ತ ಎಂಬ ಹೆಸರುಳ್ಳ ವೃತ್ತ ಕರ್ನಾಟಕದಲ್ಲೇ ಮೊದಲು ಎಂಬುದೇ ಒಂದು ವಿಶೇಷ. ಅದಕ್ಕೀಗ 25ರ ಸಂಭ್ರಮ.
ಉದ್ಯೋಗ ಅರಸಿ ಸುಂಟಿಕೊಪ್ಪಕ್ಕೆ ಬಂದಿರುವ ತುಳು, ಮಲಯಾಳಿ, ತಮಿಳು, ಉರ್ದು, ತೆಲುಗು ಮುಂತಾದ ಭಾಷೆಗಳನ್ನಾಡುವ ಜನರು ಒಟ್ಟುಗೂಡಿ ಕನ್ನಡ ಪರ ಚಟುವಟಿಕೆ, ಕಾರ್ಯಕ್ರಮ ಆಯೋಜಿಸುತ್ತಾ ಬಂದಿರುವುದೇ ಈ ಊರಿನ ವೈಶಿಷ್ಟ್ಯ. ಅಷ್ಟೇ ಅಲ್ಲ. ನಗರದ ಹೃದಯ ಭಾಗದಲ್ಲಿ ಗ್ರಾಮ ಪಂಚಾಯಿತಿ ಸಹಕಾರ ಪಡೆದು 24 ವರ್ಷಗಳ ಹಿಂದೆ ಪುಟ್ಟದಾದ ಕನ್ನಡ ವೃತ್ತವನ್ನು ಕಟ್ಟಿ ಪ್ರತಿವರ್ಷ ಕನ್ನಡಿಗರಾಗಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸುತ್ತಾ ಕನ್ನಡದ ತೇರನ್ನು ಎಳೆಯುತ್ತಿದ್ದಾರೆ.
ಈ ವರ್ಷ ಕನ್ನಡ ವೃತ್ತವನ್ನು ಇನ್ನಷ್ಟು ಅಂದಗಾಣಿಸಲು ಕನ್ನಡ ಪಡೆಗಳು ಹೆಚ್ಚಿನ ಆಸಕ್ತಿ ವಹಿಸಿವೆ. 'ನಮ್ಮ ಸುಂಟಿಕೊಪ್ಪ ಬಳಗ'ದ ಝಾಯ್ಧ್ ಆಹ್ಮದ್, ರಂಜಿತ್ ಕುಮಾರ್, ಡೆನಿಸ್ ಡಿಸೋಜ, ಕೆ.ಎಸ್.ಅನಿಲ್ ಕುಮಾರ್, ವಹೀದ್ ಜಾನ್, ಅಶೋಕ್ ಶೇಟ್, ರಜಾಕ್ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ.
ಕಳೆದ ಹಲವು ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವನ್ನು ಕಾವೇರಿ ಕನ್ನಡ ಕಲಾ ಸಂಘವು ಆಚರಿಸುತ್ತಿತ್ತು. ಆ ನಂತರ, ಸುಂಟಿಕೊಪ್ಪ ಪ್ರತಿಭಾ ಬಳಗವು ರಾಜ್ಯೋತ್ಸವದ ದಿನದಂದು ಈ ಪಟ್ಟಣದ ಹೃದಯ ಭಾಗದಲ್ಲಿ ಧ್ವಜಾರೋಹಣದ ಹೊಣೆಗಾರಿಕೆ ಹೊತ್ತುಕೊಂಡಿತ್ತು.
ಮೊದಲಿಗೆ ಡಾಂಬರ್ ಡ್ರಮ್‌ನಲ್ಲಿ ಧ್ವಜಸ್ತಂಭ ನೆಟ್ಟು, ಧ್ವಜಾರೋಹಣ ಮಾಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕ್ಲಾಡಿಯಸ್ ಲೋಬ, ಸಿಮೆಂಟಿನ ತೊಟ್ಟಿ ನೀಡುವುದರೊಂದಿಗೆ ಶಾಶ್ವತ ವೃತ್ತಕ್ಕೆ ಕಾಯಕಲ್ಪ ನೀಡಿದರು.
ಆ ನಂತರ ಕನ್ನಡ ರಾಜ್ಯೋತ್ಸವ ದಿನದಂದು ಉತ್ತಮ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಥಳೀಯ ಶಾಲಾ- ಕಾಲೇಜು, ಗ್ರಾಮ ಪಂಚಾಯಿತಿ, ವಿವಿಧ ಇಲಾಖೆಗಳು, ಸಂಘ– ಸಂಸ್ಥೆಗಳ ಸಹಕಾರವನ್ನು ಪಡೆದು ಸಾಂಸ್ಕೃತಿಕ, ಸನ್ಮಾನ ಕಾರ್ಯಕ್ರಮ ಆಯೋಜಿಸಿ ಕನ್ನಡ ಮನಸ್ಸುಗಳಿಗೆ ಉತ್ಸುಕತೆ ತುಂಬಿದರು.
ಆ ಬಳಿಕ ಪುಟ್ಟದಾದ ಕನ್ನಡ ವೃತ್ತವನ್ನು ಈ ಊರಿನ ಜನರು ನಿರ್ಮಿಸಿದ್ದು, ಈ ಬಾರಿ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದರ ಸ್ಮರಣಾರ್ಥ ಕನ್ನಡ ವೃತ್ತಕ್ಕೆ ಅದರ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಅದರ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಇದು ಇಡೀ ಕರ್ನಾಟಕದಲ್ಲೇ ಏಕೈಕ ‘ಕನ್ನಡ ವೃತ್ತ’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.