ಕುಶಾಲನಗರ: ವರ್ಷದ 365 ದಿನವು ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ನಾಗೇಶ್ ಹೇಳಿದರು.
ಇಲ್ಲಿನ ಕಲಾಭವನದ ಕಸಾಪ ಕಚೇರಿಯ ಆವರಣದಲ್ಲಿ ಬುಧವಾರ ಸುವರ್ಣ ಕರ್ನಾಟಕ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬಹು ಭಾಷೆಗಳು ವಾಸಿಸುವ ಕನ್ನಡ ನೆಲದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಕನ್ನಡ ಅಭಿಮಾನವನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಕನ್ನಡದ ಸೂಗಡಿನ ಕಂಪನ್ನು ಎಲ್ಲೆಡೆ ಹರಡುವ ಕೆಲಸವಾಗಬೇಕು. ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ ಇಂದಿಗೆ 50 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಈ ಸುವರ್ಣ ಮಹೋತ್ಸವವನ್ನು ವರ್ಷವಿಡೀ ಆಚರಣೆ ಮಾಡುವ ನಿಟ್ಟಿನಲ್ಲಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡದ ಜಾಗೃತಿಯ ಕಾರ್ಯಕ್ರಮಗಳನ್ನಾಗಿ ರೂಪಿಸಿ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯವು ಏಕೀಕರಣವಾಗಿ 57 ವರ್ಷಗಳು ಕಳೆದಿವೆ. ಕರ್ನಾಟಕವಾಗಿ 50 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆಯನ್ನು ಆಚರಿಸಲಾಗುತ್ತದೆ. ಈ ಸಂಭ್ರಮಾಚರಣೆ ಕೇವಲ ಕನ್ನಡ ಸಾಹಿತ್ಯ ಪರಿಷತ್ತಿನದು ಮಾತ್ರವಲ್ಲದೇ ಪ್ರತಿಯೊಬ್ಬ ಕನ್ನಡಿಗರ ಮನಸ್ಸಿನಲ್ಲಿಯೂ ಕನ್ನಡ ಅಭಿಮಾನದ ಸಂಭ್ರಮ ನೆಲೆಸಬೇಕು. ರಾಜ್ಯ ಪ್ರತಿ ಹಳ್ಳಿ ಮೂಲೆ ಮೂಲೆಗಳಿಂದ ಕನ್ನಡದ ಸಂಸ್ಕೃತಿ ಬೆಳಗುವಂತಾಗಬೇಕು. ಆ ನಿಟ್ಟಿನಲ್ಲಿ ವರ್ಷವಿಡೀ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡದ ಮಹತ್ವವನ್ನು ಕನ್ನಡದ ಮನಸುಗಳಿಗೆ ತಲುಪಿಸುವಂತಹ ಕೆಲಸವಾಗಬೇಕು ಎಂದರು.
ಆ ನಿಟ್ಟಿನಲ್ಲಿ ಡಿಸೆಂಬರ್ 23 ರಂದು ಹೆಬ್ಬಾಲೆ ಗ್ರಾಮದಲ್ಲಿ ‘ಗ್ರಾಮ ಸಿರಿ ಸಂಭ್ರಮ’ ಕನ್ನಡ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿಯೊಬ್ಬರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಸೋಮವಾರಪೇಟೆ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ. ನಾಗೇಗೌಡ, ಪರಿಷತ್ತಿನ ಕೋಶಾಧ್ಯಕ್ಷ ಕೆ.ವಿ.ಉಮೇಶ್, ಗೌರವ ಕಾರ್ಯದರ್ಶಿ ಶೈಲಾ, ನಾಗರಾಜ್, ಜಿಲ್ಲಾ ನಿರ್ದೇಶಕ ಕೆ.ಎನ್. ದೇವರಾಜು. ಪ್ರಮುಖರಾದ ವೆಂಕಟೇಶ್, ಡಿ.ವಿ.ರಾಜೇಶ್, ಸೋಮಣ್ಣ, ರತ್ನಾವತಿ, ಕಾಳಪ್ಪ, ಹೇಮಲತಾ, ಸಾವಿತ್ರಿ, ವಕೀಲ ಎಸ್.ಕೆ.ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.